ಕೊಲಂಬೊ:
ಶ್ರೀಲಂಕಾದ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಅವರು ಯುದ್ಧಪೀಡಿತ ಜಾಫ್ನಾ ಪ್ರದೇಶದಲ್ಲಿ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ನಿರ್ಮಾಣಕ್ಕೆ ಅಡಿಪಾಯ ಹಾಕಿದರು. ಸಮಾರಂಭದಲ್ಲಿ ಮಾತನಾಡಿದ ದಿಸಾನಾಯಕೆ, ಅಂತರ್ಯುದ್ಧ, ಆರ್ಥಿಕ ಬಿಕ್ಕಟ್ಟು ಮತ್ತು ಭ್ರಷ್ಟಾಚಾರದಂತಹ ತಪ್ಪು ಕಾರಣಗಳಿಗಾಗಿ ಯಾವಾಗಲೂ ಸುದ್ದಿಯಲ್ಲಿರುತ್ತಿದ್ದ ಶ್ರೀಲಂಕಾ, ಕ್ರಿಕೆಟ್ ಅನ್ನು ಮಾತ್ರ ಒಳ್ಳೆಯ ಸುದ್ದಿ ಒದಗಿಸುವ ಏಕೈಕ ತಾಣವೆಂದು ಕಂಡುಕೊಂಡಿದೆ ಎಂದು ಹೇಳಿದರು.
ಈ ಕ್ರೀಡಾಂಗಣ ಪೂರ್ಣಗೊಂಡಾಗ, ಶ್ರೀಲಂಕಾದ ಎಂಟನೇ ಕ್ರಿಕೆಟ್ ಸ್ಥಳವಾಗಲಿದೆ ಮತ್ತು ಕೊಲಂಬೊದ ಪ್ರೇಮದಾಸ ಕ್ರೀಡಾಂಗಣ (1985), ದಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣ (2001), ಪಲ್ಲೆಕೆಲೆ ಕ್ರಿಕೆಟ್ ಕ್ರೀಡಾಂಗಣ (2009) ಮತ್ತು ಹಂಬಂಟೋಟಾದ ಮಹಿಂದಾ ರಾಜಪಕ್ಸೆ ಕ್ರೀಡಾಂಗಣ (2012) ನಂತರ ದೇಶವನ್ನು ಟೆಸ್ಟ್ ಸ್ಥಾನಮಾನಕ್ಕೆ ಏರಿಸಿದ ನಂತರದ ಐದನೇ ಸ್ಥಳವಾಗಲಿದೆ.
ಈ ಸ್ಟೇಡಿಯಂನಲ್ಲಿ ಈಜುಕೊಳ, ಮಲ್ಟಿ-ಪಾರ್ಲರ್ ಒಳಾಂಗಣ ಕ್ರೀಡಾಂಗಣ, ಸ್ಟಾರ್ ಕ್ಲಾಸ್ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಜತೆಗೆ ಶಾಪಿಂಗ್ ಮಾಲ್ ಮತ್ತು ಮನರಂಜನಾ ಸೌಲಭ್ಯಗಳು ಸೇರಿದೆ.
ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ 80 ಮೀಟರ್‌ಗಳವರೆಗಿನ ಬೌಂಡರಿ ಅಂತರವನ್ನು ಹೊಂದಿರುವ ಹತ್ತು ಸೆಂಟರ್ ವಿಕೆಟ್‌ಗಳನ್ನು ಒಳಗೊಂಡಂತೆ 48 ಎಕರೆಗಳಲ್ಲಿಈ ಕ್ರೀಡಾಂಗಣವನ್ನು ನಿರ್ಮಿಸಲಾಗುತ್ತದೆ. 40,000 ಪ್ರೇಕ್ಷಕರ ಸಾಮರ್ಥ್ಯವಿರಲಿದೆ. ಈ ಯೋಜನೆಗೆ ಶ್ರೀಲಂಕಾ ಕ್ರಿಕೆಟ್ ಮಾತ್ರ ಹಣಕಾಸು ನೆರವು ನೀಡುತ್ತಿದ್ದು, ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಲು ಬಯಸುವ ಪ್ರತಿಭಾನ್ವಿತ ಕ್ರಿಕೆಟಿಗರಿಗೆ ಸಮಾನ ಅವಕಾಶಗಳನ್ನು ಒದಗಿಸುತ್ತದೆ ಎಂದು ಹೇಳಿದೆ.








