ಪರಿಷತ್ ಚುನಾವಣೆ ಐವರು ಅಭ್ಯರ್ಥಿಗಳು ನಾಮಪತ್ರ

ತುಮಕೂರು:

ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳಿಂದ ಕಡೇ ದಿನ ಉಮೇದುವಾರಿಕೆ

ಕರ್ನಾಟಕ ವಿಧಾನ ಪರಿಷತ್ತಿನ ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಲು ಕಡೇದಿನವಾದ ಮಂಗಳವಾರ ನಾಲ್ಕು ನಾಮಪತ್ರಗಳು ಸಲ್ಲಿಕೆಯಾಗಿದ್ದು ಒಟ್ಟು 5 ಅಭ್ಯರ್ಥಿಗಳಿಂದ 8 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆರ್.ರಾಜೇಂದ್ರ(39ವರ್ಷ) ಬಿನ್ ಕೆ.ಎನ್. ರಾಜಣ್ಣ ಅವರು 1 ನಾಮಪತ್ರ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಯಾಗಿ ಗಜೇಂದ್ರ ಕುಮಾರ್ ಕೆ.ಎಸ್.(46 ವರ್ಷ) ಬಿನ್ ಲೇಟ್ ಶ್ರೀನಿವಾಸಯ್ಯ ಅವರು 1 ನಾಮಪತ್ರ, ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಲೋಕೇಶ್ ಎನ್.(42 ವರ್ಷ) ಬಿನ್ ನಾಗರಾಜ ಹೆಚ್. ಅವರು 3 ನಾಮಪತ್ರ, ಜನತಾ ದಳ(ಜಾತ್ಯಾತೀತ) ಪಕ್ಷದ ಅಭ್ಯರ್ಥಿಯಾಗಿ ಅನಿಲ್‍ಕುಮಾರ್ ಆರ್.(43 ವರ್ಷ) ಬಿನ್ ರಾಮಾಂಜನಯ್ಯ ಜಿ. ಅವರು 2 ನಾಮಪತ್ರ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಆರ್. ಜಯರಾಮಯ್ಯ(75 ವರ್ಷ) ಬಿನ್ ರಂಗಣ್ಣ ಅವರು 1 ಸೆಟ್ ನಾಮಪತ್ರವನ್ನು ಸಲ್ಲಿಸಿದ್ದಾರೆ. ಇಂದು ನಾಮಪತ್ರ ಪರಿಶೀಲನೆ ನಡೆಯಲು ನಾಮಪತ್ರ ವಾಪಸ್ಸಾತಿಗೆ ನ.26 ಕಡೆಯ ದಿನವಾಗಿದೆ. ಡಿ.10ರಂದು ಚುನಾವಣೆ ನಡೆಯಲಿದ್ದು, 14ರಂದು ಮತ ಎಣಿಕೆ ನಡೆಯಲಿದೆ.

ಅಭ್ಯರ್ಥಿಗಳಿಗೆ ಮುಖಂಡರ ಸಾಥ್:ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಅವರು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರೊಡಗೂಡಿ ತೆರಳಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರೆ, ಬಿಜೆಪಿ ಅಭ್ಯರ್ಥಿ ಎನ್.ಲೋಕೇಶ್‍ಗೌಡ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಇತರ ಬಿಜೆಪಿ ನಾಯಕರೊಂದಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದರು. ಜೆಡಿಎಸ್ ಅಭ್ಯರ್ಥಿ ಆರ್. ಅನಿಲ್‍ಕುಮಾರ್ ಅವರು ಮಾಜಿಶಾಸಕರಾದ ಸಿ.ಬಿ.ಸುರೇಶ್‍ಬಾಬು,ಕೆ.ಎಂ.ತಿಮ್ಮರಾಯಪ್ಪ ಅವರೊಡಗೂಡಿ ಉಮೇದುವಾರಿಕೆ ಸಲ್ಲಿಸಿದರು.ಕೆಎಸ್‍ಆರ್ ಅಭ್ಯರ್ಥಿ ಗಜೇಂದ್ರಕುಮಾರ್ ಜಿಲ್ಲಾ ಮುಖಂಡರೊಂದಿಗೆ ನಾಮಪತ್ರ ಸಲ್ಲಿಸಿದರು.

ಡಿಸಿ ಕಚೇರಿ ಬಳಿ ಜನಜಂಗುಳಿ:

ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಮಂಗಳವಾರ ಬೆಳಿಗ್ಗೆ 10.30ರಿಂದ 1ರೊಳಗೆ ನಾಮಪತ್ರ ಸಲ್ಲಿಕೆಗೆ ಮುಂದಾಗಿದ್ದು, ಡಿಸಿ ಕಚೇರಿಮುಂಭಾಗ ಮುಖಂಡರು ಕಾರ್ಯಕರ್ತರು ಅಪಾರಸಂಖ್ಯೆಯಲ್ಲಿ ನೆರೆದಿದ್ದರು. ಕಾಂಗ್ರೆಸ್‍ನ ಜಿಲ್ಲಾ ನಾಯಕರು, ಹಾಲಿ,ಮಾಜಿ ಶಾಸಕರೆಲ್ಲ ಡಿಸಿ ಕಚೇರಿ ಬಳಿಗೆ ಆಗಮಿಸಿದ್ದರೆ, ಜೆಡಿಎಸ್ ಸಮೀಪದ ಅಮಾನಿಕೆರೆ ಗಾಜಿನಮನೆಯಲ್ಲಿ ಜನತಾ ಸಂಗಮ ಸಮಾವೇಶವನ್ನು ಏರ್ಪಡಿಸಿತ್ತು. ಬಿಜೆಪಿಯಿಂದಲ್ಲೂ ಇಬ್ಬರು ಸಚಿವರು, ಹಾಲಿ,ಮಾಜಿ ಶಾಸಕರು, ಸಂಸದರು, ಎಂಎಲ್ಸಿಗಳು, ಪಕ್ಷದ ಪದಾಧಿಕಾರಿಗಳು ಪಾಲ್ಗೊಂಡು ವಿಧಾನಪರಿಷತ್ ಚುನಾವಣಾ ಕಣ ರಂಗೇರುವಂತೆ ಮಾಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap