ಬೆಂಗಳೂರು:
ದಕ್ಷ ಅಧಿಕಾರಿ ಎಂದೇ ಹೆಸರಾಗಿರುವ ಸದ್ಯ ಚಿಕ್ಕಮಗಳೂರು ಜಿಲ್ಲೆಯ ಎಸ್ಪಿ ಆಗಿರುವ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸೇರಿದಂತೆ ಐವರು ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ರಾತ್ರೋರಾತ್ರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಉಡುಪಿ, ಚಿಕ್ಕಮಗಳೂರುಗಳಲ್ಲಿ ತಮ್ಮ ಖಡಕ್ ನೀತಿಗಳಿಂದ ‘ಸಿಂಗಂ’ ಎಂಬ ಖ್ಯಾತಿ ಪಡೆದಿರುವ ಅಣ್ಣಾಮಲೈ ಅವರು ರಾಜಧಾನಿ ಬೆಂಗಳೂರಿಗೆ ಕಾಲಿಡುತ್ತಿದ್ದಾರೆ.
ಸಂಚಾರಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಹರಿಶೇಖರನ್, ಕೆಎಸ್‌ಆರ್‌ಪಿ ಒಂದನೇ ಬೆಟಾಲಿಯನ್‌ನ ಕಮಾಂಡೆಂಟ್ ಅಜಯ್ ಹಿಲೋರಿ ಮತ್ತು ಬೆಂಗಳೂರು ನಗರ ಪೂರ್ವ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಅಣ್ಣಾಮಲೈ ಅವರು ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಎಂದೇ ಹೆಸರಾಗಿದ್ದು, ತಮ್ಮ ದಿಟ್ಟ ನಿರ್ಧಾರಗಳಿಂದ ಸುದ್ದಿಯಾದವರು. ಸದ್ಯ ಅವರನ್ನು ಬೆಂಗಳೂರಿಗೆ ನಿಯೋಜಿನೆ ಮಾಡಿರುವ ಸರ್ಕಾರದ ನಿರ್ಧಾರದ ಬಗ್ಗೆ ಕುತೂಹಲ ಮನೆ ಮಾಡಿದೆ.
ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಪೊಲೀಸ್ ಇಲಾಖೆಯಲ್ಲಿ ಹಲವು ಬಾರಿ ವರ್ಗಾವಣೆಗಳನ್ನು ಮಾಡಲಾಗಿದೆ. ಆದರೆ, ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಗೃಹಸಚಿವ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಸಮನ್ವಯ ಸಮಿತಿಯ ಮುಂದೆ ಬೇಸರ ತೋಡಿಕೊಂಡಿದ್ದರು.
ತಮ್ಮ ಇಲಾಖೆಯಲ್ಲಿನ ಹಸ್ತಕ್ಷೇಪದಿಂದ ಕೋಪಗೊಂಡಿದ್ದ ಪರಮೇಶ್ವರ್, ಅದೇ ಕಾರಣಕ್ಕೆ ಹಠಾತ್ತಾಗಿ ರಾತ್ರಿ ವೇಳೆ ವರ್ಗಾವಣೆ ಆದೇಶ ಹೊರಡಿಸಿದ್ದಾರೆ ಎಂದು ಹೇಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
