ಸ್ಮಾರ್ಟ್ ಸಿಟಿಯಲ್ಲಿ ಫುಟ್‍ಪಾತ್ ಒತ್ತುವರಿಯದ್ದೆ ಕಿರಿಕಿರಿ

ತುಮಕೂರು:

    ಸ್ಮಾರ್ಟ್ ಸಿಟಿ ಯೋಜನೆ ಜಾರಿಗೊಳ್ಳುತ್ತಿರುವ ತುಮಕೂರು ನಗರವನ್ನು ಅಣಕಿಸುವಂತೆ ನಗರದಲ್ಲಿ ಫುಟ್‍ಪಾತ್ ಒತ್ತುವರಿ ವ್ಯಾಪಕವಾಗಿ ಕಂಡುಬಂದಿದ್ದು, ನಗರದ ಪ್ರಮುಖರಸ್ತೆಗಳಾದ ಬಿ.ಎಚ್.ರಸ್ತೆ, ಜನರಲ್ ಕಾರಿಯಪ್ಪ ರಸ್ತೆ, ಜೆ.ಸಿ.ರಸ್ತೆ, ಅಶೋಕ ರಸ್ತೆ, ರಾಧಾಕೃಷ್ಣನ್ ರಸ್ತೆ.., ಹೀಗೆ ವಿವಿಧ ರಸ್ತೆಗಳಲ್ಲಿ ಅನಧಿಕೃತವಾಗಿ ಗೂಡಂಗಡಿ, ತಳ್ಳುವ ಗಾಡಿಗಳನ್ನು ನಿಲ್ಲಿಸಿಕೊಂಡು ಅನಧಿಕೃತವಾಗಿ ವ್ಯಾಪಾರ ಮಾಡುವ ಪ್ರಕ್ರಿಯೆ ಹೆಚ್ಚುತ್ತಿದೆ.

    ಪಾನಿಪುರಿ, ಗೋಬಿಮಂಚೂರಿ ಕಾಫಿ ಟೀ ಅಂಗಡಿ, ಕೆಳಗಡೆ ಟಾರ್ಪಲ್ ಹಾಸಿಕೊಂಡು ಬಟ್ಟೆ, ತರಕಾರಿ, ಹಣ್ಣು ಹೂಈ ವ್ಯಾಪಾರ ಮಾಡುವವರ ಸಂಖ್ಯೆ ಪುಟ್ ಪಾತ್‍ಗಳ ಮೇಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪಾದಚಾರಿ ರಸ್ತೆಯ ಮೇಲೆ ತಳ್ಳುವಗಾಡಿ, ಅಂಗಡಿಗಳನ್ನು ತೆರೆದಿರುವುದು ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗಿದೆ.

    ತುಮಕೂರು ವಿವಿ ಪ್ರವೇಶದ್ವಾರದಿಂದ ಪಾಲೆಟೆಕ್ನಿಕ್ ಕಾಲೇಜು ಕೊನೆಗೊಳ್ಳುವವರೆಗೂ ಪುಟ್‍ಪಾತ್ ಇಲ್ಲವೇನೋ ಎನ್ನುವ ಭಾವನೆ ಮಾಡುವ ಮಟ್ಟಿಗೆ ಪಾದಚಾರಿ ರಸ್ತೆಯಲ್ಲಿ ತಾತ್ಕಾಲಿಕ ಅಂಗಡಿಗಳು ಆಕ್ರಮಿಸಿಕೊಂಡಿವೆ. ವಿವಿ ವಿಜ್ಞಾನ ಕಾಲೇಜು ಮುಂಭಾಗದ ಗೇಟ್ ಪಕ್ಕವೇ ಸ್ಮಾರ್ಟ್‍ಸಿಟಿಯಿಂದ ವಿಶೇಷವಾಗಿ ತಂಗುದಾಣವನ್ನು ನಿರ್ಮಿಸಿದ್ದು, ಸಣ್ಣ ಅಂಗಡಿಗೂ ತಂಗುದಾಣದಲ್ಲೇ ಸ್ಥಳಾವಕಾಶ ಕಲ್ಪಿಸಲಾಗಿದ್ದು, ಅಂಗಡಿ ಗುತ್ತಿಗೆ ಪಡೆದವರು ಹೊರಭಾಗಕ್ಕೆ ಗ್ರಾಹಕರು ನಿಲ್ಲಲು ಅನುಕೂಲವಾಗುವಂತೆ ಮೇಲ್ಛಾವಣಿಯನ್ನೇ ಅಳವಡಿಸಿಕೊಂಡಿದ್ದು ತಂಗುದಾಣದ ಮೂಲ ವಿನ್ಯಾಸವನ್ನೇ ಬದಲಿಸಿದ್ದಾರೆ.

    ಈ ಅಂಗಡಿಯ ಪಕ್ಕವೇ ಸ್ಮಾರ್ಟ್‍ಸಿಟಿ ಯೋಜನೆಯಡಿ ಚಾಲುಗೊಳಿಸಿರುವ ಇ ಬೈಕ್‍ಗಳ ನಿಲ್ದಾಣವನ್ನು ಮಾಡಲಾಗಿದ್ದು, ಅಲ್ಲಿಯೇ ಬೈಕ್‍ಗಳನ್ನು ಸಹ ನಿಲ್ಲಿಸಲಾಗುತ್ತಿದೆ. ಮುಂದುವರಿದು ವಿವಿಧ ಅಂಗಡಿಗಳು ತಲೆಎತ್ತಿದ್ದು, ಇದೆಲ್ಲ ವಿವಿ ಆಡಳಿತಕ್ಕಾಗಲೀ, ಪೊಲೀಸ್ ಇಲಾಖೆಯವರಿಗಾಗಗಲೀ, ಮಹಾನಗರಪಾಲಿಕೆಯವರ ಗಮನಕ್ಕಾಗಲೀ ಬರುತ್ತಿಲ್ಲವೇ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಮುಂದಿಡುತ್ತಿದ್ದು, ಮೌನಕ್ಕೆ ಶರಣಾಗಿರುವುದರ ಹಿಂದಿನ ಮರ್ಮದ ಬಗ್ಗೆಯೂ ಜನರೇ ಮಾತಾಡಿಕೊಳ್ಳುವಂತಾಗಿದೆ.

    ಸ್ಮಾರ್ಟ್‍ಸಿಟಿ ಯೋಜನೆಯಡಿ ವೆಂಡರ್‍ಜೋನ್‍ಗಳನ್ನು ನಗರದ ವಿವಿಧ ಕಡೆ ನಿರ್ಮಿಸಿದ್ದರೂ ವೆಂಡರ್‍ಜೋನ್‍ಗಳಿಗೆ ಬೀದಿ ಬದಿ ವ್ಯಾಪಾರಸ್ಥರು ತೆರಳಲು ಹಿಂದೇಟು ಹಾಕುತ್ತಿರುವುದು ಪಾದಚಾರಿ ರಸ್ತೆ ಅತಿಕ್ರಮಣಕ್ಕೆ ಕಾರಣವಾಗಿದೆ.

   ಬಡಜನರು ಹೊಟ್ಟೆಪಾಡಿಗಾಗಿ ರಸ್ತೆಬದಿ ಸಣ್ಣ ಅಂಗಡಿಗಳನ್ನಿಟ್ಟುಕೊಂಡು ವ್ಯಾಪಾರ ಮಾಡುವುದಕ್ಕೆ ಮಾನವೀಯ ನೆಲೆಯಲ್ಲಿ ಪರಿಗಣಿಸಿ ಸುಮ್ಮನಾಗಬಹುದಾದರೂ ಪಾದಚಾರಿ ರಸ್ತೆಯನ್ನೇ ಪೂರ್ಣ ಅತಿಕ್ರಮಿಸುವುದು ಕಾನೂನಿನ ಉಲ್ಲಂಘನೆಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap