ಈ ವಾರವೂ ಕುಸಿದ ಭಾರತದ ಫಾರೆಕ್ಸ್ ರಿಸರ್ವ್ಸ್….!

ನವದೆಹಲಿ

    ಭಾರತದ ವಿದೇಶ ವಿನಿಮಯ ಮೀಸಲು ನಿಧಿ ನಾಲ್ಕನೇ ವಾರ ಕುಸಿತ ಕಂಡಿದೆ. ನವೆಂಬರ್ 1ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ 2.6 ಬಿಲಿಯನ್ ಡಾಲರ್​ನಷ್ಟು ಕಡಿಮೆ ಆಗಿದೆ. ಇದರೊಂದಿಗೆ ಫಾರೆಕ್ಸ್ ರಿಸರ್ವ್ಸ್ 682.13 ಬಿಲಿಯನ್ ಡಾಲರ್​ನಷ್ಟು ನಿಧಿ ಭಾರತದಲ್ಲಿದೆ. ಹಿಂದಿನ ವಾರದಲ್ಲಿ (ಅಕ್ಟೋಬರ್ 25) ಫಾರೆಕ್ಸ್ ರಿಸರ್ವ್ಸ್ 3.4 ಬಿಲಿಯನ್ ಡಾಲರ್​ನಷ್ಟು ಕುಸಿತ ಕಂಡಿತ್ತು.

    ನವೆಂಬರ್ 1ರ ವಾರದಲ್ಲಿ ಒಟ್ಟಾರೆ ಫಾರೆಕ್ಸ್ ನಿಧಿ 2.6 ಬಿಲಿಯನ್ ಡಾಲರ್​ನಷ್ಟು ಇಳಿಕೆ ಆದರೂ ಗೋಲ್ಡ್ ಸಂಗ್ರಹ 1.2 ಬಿಲಿಯನ್ ಡಾಲರ್ ಮೌಲ್ಯದಷ್ಟು ಹೆಚ್ಚಿದೆ. ಐಎಂಎಫ್​ನೊಂದಿಗಿರುವ ನಿಧಿಯಲ್ಲೂ 4 ಮಿಲಿಯನ್ ಡಾಲರ್​ನಷ್ಟು ಹೆಚ್ಚಳವಾಗಿದೆ. ಆದರೆ, ವಿದೇಶೀ ಕರೆನ್ಸಿ ಆಸ್ತಿ 3.9 ಬಿಲಿಯನ್ ಡಾಲರ್​ನಷ್ಟು ಕುಸಿದಿದೆ. ಸ್ಪೆಷಲ್ ಡ್ರಾಯಿಂಗ್ ರೈಟ್ಸ್ (SDR) ಕೂಡ ಒಂದು ಮಿಲಿಯನ್ ಡಾಲರ್​ನಷ್ಟು ಇಳಿದಿದೆ.

   ಭಾರತದ ಫಾರೆಕ್ಸ್ ಸಂಪತ್ತು ಇತ್ತೀಚಿನ ವರ್ಷಗಳಿಂದ ಗಣನೀಯವಾಗಿ ಹೆಚ್ಚುತ್ತಿದೆ. ಕಳೆದ ತಿಂಗಳು ಮೊದಲ ಬಾರಿಗೆ 700 ಬಿಲಿಯನ್ ಡಾಲರ್ ಮೈಲಿಗಲ್ಲು ಮಟ್ಟಿತ್ತು. ಭಾರತ ವಿಶ್ವದ ಅತಿಹೆಚ್ಚು ಫಾರೆಕ್ಸ್ ಸಂಪತ್ತು ಹೊಂದಿರುವ ದೇಶಗಳ ಸಾಲಿನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಚೀನಾ, ಜಪಾನ್ ಮತ್ತು ಸ್ವಿಟ್ಜರ್​ಲ್ಯಾಂಡ್ ನಂತರ ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಹೊಂದಿರುವುದು ಭಾರತವೇ. ಭಾರತದ ರೀತಿ ರಷ್ಯಾ ಕೂಡ ಫಾರೆಕ್ಸ್ ಸಂಪತ್ತು ಹೆಚ್ಚಿಸಿಕೊಳ್ಳುತ್ತಿದೆ. ಭಾರತದ ನಂತರ ಸ್ಥಾನದಲ್ಲಿ ರಷ್ಯಾ ಇದೆ.

ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಹೊಂದಿರುವ ಟಾಪ್-5 ದೇಶಗಳು

  1. ಚೀನಾ: 3.57 ಟ್ರಿಲಿಯನ್ ಡಾಲರ್
  2. ಜಪಾನ್: 1.25 ಟ್ರಿಲಿಯನ್ ಡಾಲರ್
  3. ಸ್ವಿಟ್ಜರ್​ಲ್ಯಾಂಡ್: 952 ಬಿಲಿಯನ್ ಡಾಲರ್
  4. ಭಾರತ: 684 ಬಿಲಿಯನ್ ಡಾಲರ್
  5. ರಷ್ಯಾ: 628 ಬಿಲಿಯನ್ ಡಾಲರ್ 

   ಆರ್​ಬಿಐ ಈ ಫಾರೆಕ್ಸ್ ರಿಸರ್ವ್ಸ್ ಅನ್ನು ರುಪಾಯಿ ಮೌಲ್ಯ ಕುಸಿತ ತಡೆಯಲು ಬಳಸುತ್ತದೆ. ಡಾಲರ್ ಎದುರು ರುಪಾಯಿ ತೀರಾ ಅಸ್ವಾಭಾವಿಕವಾಗಿ ಕುಸಿದರೆ ಆಗ ಆರ್​ಬಿಐ ಒಂದಷ್ಟು ಡಾಲರ್​ಗಳನ್ನು ಮಾರಿ ರುಪಾಯಿ ಕರೆನ್ಸಿ ಮೌಲ್ಯವನ್ನು ಕಾಪಾಡಲು ಯತ್ನಿಸುತ್ತದೆ. ಇದೇ ಕಾರಣಕ್ಕೆ ಇತ್ತೀಚಿನ ಕೆಲ ವಾರಗಳಿಂದ ಭಾರತದ ಫಾರೆಕ್ಸ್ ರಿಸರ್ವ್ಸ್​ನಿಂದ ವಿದೇಶೀ ಕರೆನ್ಸಿ ಆಸ್ತಿ ಕಡಿಮೆ ಆಗುತ್ತಾ ಬಂದಿದೆ.

Recent Articles

spot_img

Related Stories

Share via
Copy link