ಬೆಂಗಳೂರು :
ಖ್ಯಾತ ಗಾಂಧಿವಾದಿ, ಹಿರಿಯ ಸ್ವಾತಂತ್ರ ಹೋರಾಟಗಾರ, ಶತಾಯುಷಿ ಹೆಚ್.ಎಸ್.ದೊರೆಸ್ವಾಮಿ (103) ರವರು ಇಂದು ನಿಧನರಾಗಿದ್ದಾರೆ.
ಮಹಾಮಾರಿ ಕೊರೊನಾ ಸೋಂಕಿಗೆ ತುತ್ತಾಗಿದ್ದ ಅವರು, ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊರೊನಾ ಗೆದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಹೊಂದಿ ಬೆಂಗಳೂರಿನ ಜಯನಗರ ನಿವಾಸಕ್ಕೆ ಹಿಂದಿರುಗಿದ್ದರು.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಕರ್ನಾಟಕ ರಾಷ್ಟ್ರಸಮಿತಿ ರಾಜ್ಯಾಧ್ಯಕ್ಷ ರವಿ ಕೃಷ್ಣಾ ರೆಡ್ಡಿಯವರು, ಶತಾಯುಷಿ, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರು ಇನ್ನಿಲ್ಲ. ಸುಮಾರು 1:30 ರ ಸಮಯದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ 12 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರಾತ್ರಿಯಿಂದ ಸ್ವಲ್ಪ ಆರೋಗ್ಯ ಹದಗೆಟ್ಟು ಇಂದು ಬೆಳಗ್ಗೆ ಉಸಿರಾಟಕ್ಕೆ ತೊಂದರೆ ಆಗಿತ್ತು. ತೀವ್ರ ನಿಗಾ ಘಟಕಕ್ಕೆ ಕರೆದುಕೊಂಡು ಬಂದ ಸ್ವಲ್ಪ ಹೊತ್ತಿಗೆ ಹೃದಯಾಘಾತದಿಂದಾಗಿ ಸಾವನ್ನಪ್ಪಿರೋದಾಗಿ ತಿಳಿಸಿದ್ದಾರೆ.
ಏಪ್ರಿಲ್ 10, 1918 ರಂದು ಜನಿಸಿದ ಹಾರೋಹಳ್ಳಿ ಶ್ರೀನಿವಾಸಯ ದೊರೆಸ್ವಾಮಿ ಅವರು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಳ್ಳುವ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಮುಳುಗಿದರು ಮತ್ತು 1943 ರಿಂದ 1944 ರವರೆಗೆ 14 ತಿಂಗಳು ಜೈಲಿನಲ್ಲಿದ್ದರು.
ಸ್ವಾತಂತ್ರ್ಯದ ನಂತರ ಭಾರತೀಯ ರಾಜ್ಯಕ್ಕೆ ಸೇರಲು ಮೈಸೂರು ಮಹಾರಾಜರನ್ನು ಒತ್ತಾಯಿಸಲು ಮೈಸೂರು ಚಾಲೋ ಚಳವಳಿಯಲ್ಲಿ ಗಾಂಧಿವಾದಿಗಳು ಭಾಗವಹಿಸಿದ್ದರು.
ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ವಿಜ್ಞಾನ ಪದವಿ ಪಡೆದ ಅವರು ಬೋಧನಾ ವೃತ್ತಿಯಲ್ಲಿದ್ದರು ಮತ್ತು ಪೌರವಾಣಿ ಎಂಬ ಪತ್ರಿಕೆ ಹೊರತರುವ ಮೂಲಕ ಪತ್ರಿಕೋದ್ಯಮಕ್ಕೆ ಕೈ ಹಾಕಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ