ಶಿರಾ : ಆಶ್ರಯ ಮನೆಗಳಿಗೆ ಮಂಜೂರಾಗದ ಅನುದಾನ

ಶಿರಾ :

     ಸ್ವಂತ ಸೂರಿಲ್ಲದವರಿಗೆ ಸೂರು ಕಲ್ಪಿಸುವ ನಾನಾ ಯೋಜನೆಗಳನ್ನು ಸರ್ಕಾರ ಅನುಷ್ಠಾನಕ್ಕೆ ತರುತ್ತಲೇ ಇದ್ದು, ಇಂತಹ ಅನೇಕ ಯೋಜನೆಗಳು ಇಂದಿಗೂ ಅರ್ಹರಿಗೆ ತಲುಪಲಾರದಂತಹ ಸ್ಥಿತಿ ಒದಗಿದೆ. ನಗರ ವ್ಯಾಪ್ತಿಯ ಆಶ್ರಯ ಮನೆಗಳ ಫಲಾನುಭವಿಗಳು ಇಂತಹುದೊಂದು ವಾತಾವರಣದಲ್ಲಿ ಬದುಕುವಂತಹ ವಾತಾವರಣ ಸೃಷ್ಟಿಯಾಗಿದೆ.

     ಶಿರಾ ನಗರಸಭಾ ವ್ಯಾಪ್ತಿಯ ಬಹುತೇಕ ಮಂದಿ ನಿವೇಶನ ಹೊಂದಿದ್ದರೂ ಮನೆ ಕಟ್ಟಿಕೊಳ್ಳಲಾರದಂತಹ ಸ್ಥಿತಿಯಲ್ಲಿರುವ ದೃಶ್ಯ ಒಂದೆಡೆಯಾದರೆ, ಇನ್ನೊಂದೆಡೆ ನಿವೇಶನವೂ ಇಲ್ಲದೆ ಬದುಕುವ ಅದೆಷ್ಟೋ ಬಡ ಕುಟುಂಬಗಳು ಇಂದಿಗೂ ಸ್ವಂತ ಸೂರಿಲ್ಲದೆ ಸಂಕಷ್ಟದಲ್ಲಿವೆ.

   ಸ್ವಂತ ಸೂರನ್ನು ಹೊಂದಿರುವ ಬಲಾಡ್ಯರು, ಜನಪ್ರತಿನಿಧಿಗಳ ನಿಕಟವರ್ತಿಗಳು ಮತ್ತೊಂದು ಸೂರು ಪಡೆಯಲು ನಗರಸಭೆಗೆ ಅರ್ಜಿ ಹಾಕಿರುವ ಅನೇಕ ಉದಾಹರಣೆಗಳು ನಗರಸಭೆಯಲ್ಲಿದ್ದು ವಸತಿ ರಹಿತರನ್ನು ಮತ್ತು ಅರ್ಹರನ್ನು ಗುರ್ತಿಸುವ ಪರಿಪಾಠಕ್ಕೆ ಇಲ್ಲಿ ಎಳ್ಳು-ನೀರು ಬಿಡಲಾಗಿದೆ.

    2021-22 ರಲ್ಲಿ ನಗರ ವ್ಯಾಪ್ತಿಯ ವಸತಿ ರಹಿತ ಅರ್ಹರಿಗೆ ಸೂರನ್ನು ಕಲ್ಪಿಸಿಕೊಡುವ ಸಲುವಾಗಿ 100 ಮಂದಿ ಹಾಗೂ 2022-23 ರಲ್ಲಿ 25 ಮಂದಿ ಅರ್ಹರನ್ನು ಸೇರಿದಂತೆ ಒಟ್ಟು 125 ಮಂದಿಯನ್ನು ಗುರುತಿಸಿ ರಾಜೀವ್‌ಗಾಂಧಿ ವಸತಿ ನಿಗಮದ ವಾಜಪೇಯಿ ನಗರ ವಸತಿ ಯೋಜನೆಯಡಿಯಲ್ಲಿ ಮನೆ ಮಂಜೂರು ಮಾಡಲಾಗಿತ್ತು.

   ಸಾಮಾನ್ಯ ವರ್ಗಕ್ಕೆ ಒಂದು ಮನೆಗೆ 2.70 ಲಕ್ಷ, ಎಸ್.ಸಿ/ಎಸ್.ಟಿ. ವರ್ಗಕ್ಕೆ 3.70 ಲಕ್ಷ ರೂ.ಗಳನ್ನು ಮಂಜೂರು ಮಾಡುವುದಾಗಿ ಸರ್ಕಾರ ಭರವಸೆ ನೀಡಿದ್ದನ್ನು ಕಂಡು ಫಲಾನುಭವಿಗಳು ತರಾತುರಿಯಲ್ಲಿ ದಾಖಲೆಗಳನ್ನು ಹೊಂದಿಸಿ ನಗರಸಭೆಗೆ ನೀಡಿದ್ದರು. ಜರೂರಾಗಿ ಅನುದಾನವನ್ನು ಸರ್ಕಾರ ಮಂಜೂರು ಮಾಡುತ್ತದೆ, ನೀವು ಮನೆ ಕಟ್ಟಿಕೊಳ್ಳಲು ಆರಂಭಿಸಿ ಎಂಬ ನಗರಸಭೆಯ ಅಧಿಕಾರಿಗಳ ಮೌಖಿಕ ಆದೇಶದಂತೆ ಫಲಾನುಭವಿಗಳು ಮನೆಯನ್ನು ಕಟ್ಟಿಕೊಳ್ಳಲು ಆರಂಭಿಸಿದರು.

    ನಗರಸಭೆಯನ್ನು ಹಾಗೂ ಸರ್ಕಾರವನ್ನು ನೆಚ್ಚಿಕೊಂಡ ಅನೇಕ ಮಂದಿ ಮನೆಗಳ ಕಾಮಗಾರಿಯನ್ನು ಒಂದಷ್ಟು ಚುರುಕಿನಿಂದಲೇ ಆರಂಭಿಸಿಯೂ ಇದ್ದರು. ಅತ್ಯಂತ ಕಡುಬಡವರು ಚಿನ್ನದ ಒಡವೆ ಅಡವಿಟ್ಟು ಮನೆ ಕಟ್ಟಿಕೊಂಡರೆ, ಮತ್ತಲವರು ಸಾಲ ಮಾಡಿ ಮನೆಯನ್ನು ನಿರ್ಮಾಣ ಮಾಡಲು ಮುಂದಾದರು.

   ಕೆಲವರ ಮನೆಗಳು ಅಪೂರ್ಣಗೊಂಡಿದ್ದರೆ ಮತ್ತಲವರು ಪೂರ್ಣ ಪ್ರಮಾಣದಲ್ಲಿಯೇ ಮನೆ ಕಟ್ಟಿಕೊಂಡು ಜೇಬಲ್ಲಿದ್ದ ಹಣವನ್ನೆಲ್ಲಾ ಬರಿದು ಮಾಡಿಕೊಂಡು ಚಾತಕ ಪಕ್ಷಿಯಂತೆ ಕಳೆದ ಒಂದು ವರ್ಷದಿಂದಲೂ ಕಾಯತೊಡಗಿದ್ದಾರೆ. ಅಡ್ಡ ಬಡ್ಡಿಗೆ ಹಣ ತಂದಿದ್ದ ಅತ್ಯಂತ ಬಡ ಕುಟುಂಬಗಳಂತೂ ಕಟ್ಟಿದ ಅಪೂರ್ಣ ಮನೆಯನ್ನು ಕಂಡು ಕಣ್ಣೀರು ಹಾಕುತ್ತಿದ್ದು, ಫಲಾನುಭವಿಗಳ ಗೋಳನ್ನು ಕೇಳುವವರೇ ಇಲ್ಲವಾಗಿದೆ.

   ಮಳೆ, ಗಾಳಿಯನ್ನು ಸಹಿಸಿಕೊಂಡು ಕಟ್ಟಿದ ಮನೆಗಳು ಬಣಗುಡುತ್ತಿದ್ದು ಅತ್ತ ವಾಸಿಸಲು ಪೂರ್ಣಗೊಳ್ಳದ, ಒಂದು ರೂ. ಬಿಡಿಗಾಸಿನ ಅನುದಾನವನ್ನೂ ಸರ್ಕಾರ ಮಂಜೂರು ಮಾಡದ ಪರಿಣಾಮ ಸರ್ಕಾರಕ್ಕೆ, ಜವಾಬ್ದಾರಿ ವಹಿಸದ ನಗರಸಭೆಗೆ ಫಲಾನುಭವಿಗಳು ಛೀಮಾರಿ ಹಾಕುವಂತಾಗಿದೆ.

    ಅಷ್ಟೇ ಅಲ್ಲದೆ ಕ್ಷೇತ್ರದ ಶಾಸಕರನ್ನು, ಸಭೆ-ಸಮಾರಂಭಗಳಿಗೆAದು ಬಂದ ಕೇಂದ್ರ ಸಚಿವರು, ವಿ.ಪ. ಸದಸ್ಯರುಗಳನ್ನು ಫಲಾನುಭವಿಗಳು ಭೇಟಿಯಾಗಿ ಮನೆಗಳ ಅನುದಾನ ಮಂಜೂರು ಮಾಡಿಸುವಂತೆ ಗೋಗರೆದರೂ ಲೆಕ್ಕಿಸದ ಜನಪ್ರತಿನಿಧಿಗಳು ಈಗಾಗಲೆ ಬರುವ ಸಾರ್ವತ್ರಿಕ ಚುನಾವಣೆಯ ಕನಸು ಕಾಣುತ್ತಿರುವುದು ನಿಜಕ್ಕೂ ಸೋಜಿಗದ ಸಂಗತಿಯೇ ಸರಿ.

     ಕಳೆದ ಕೆಲವು ತಿಂಗಳ ಹಿಂದೆ ಸದರಿ ಯೋಜನೆಯ ಫಲಾನುಭವಿಗಳ ಖಾತೆಗೆ ತಲಾ ಒಂದೊAದು ರೂಪಾಯಿಯನ್ನು ಹಾಕಿದ ಸರ್ಕಾರ ಮತ್ತೆ  ಅದೇ ಖಾತೆಗೆ ಹಾಕಿದ ಆ ಒಂದು ರೂಪಾಯಿಯನ್ನೂ ಹಿಂಪಡೆದಿದೆ. ಬಲಗೈಯಲ್ಲಿ ಒಂದು ರೂ ಕೊಟ್ಟು ಎಡಗೈಲಿ ಆ ಒಂದು ರೂಪಾಯಿಯನ್ನೂ ಕಸಿದುಕೊಂಡ ಸರ್ಕಾರವನ್ನು ಫಲಾನುಭವಿಗಳು ಶಪಿಸುವಂತಹ ವಾತಾವರಣ ಸೃಷ್ಟಿಯಾಗಿದೆ.

    ಒಟ್ಟಾರೆ ಮನೆ ಕಟ್ಟಿಕೊಂಡು, ಕಟ್ಟಿಕೊಂಡ ಮನೆಗಳು ಅಪೂರ್ಣಗೊಂಡಿದ್ದರೂ ಸರ್ಕಾರದ ಯಾವುದೇ ಜನಪ್ರತಿನಿಧಿಗಳು ಈವರೆಗೂ ಈ ಕಡು ಬಡ ಕುಟುಂಬಗಳಿಗೆ ಒಂದು ಪೈಸೆಯ ಹಣವನ್ನೂ ಮಂಜೂರು ಮಾಡಿಸಲಾಗಿಲ್ಲವೆಂಬುದು ವಿಪರ್ಯಾಸವೇ ಸರಿ. ಇಂದು ನಗರಸಭೆಯ ಸಾಮಾನ್ಯ ಸಭೆ ನಡೆಯಲಿದ್ದು ಕೇಂದ್ರ ಸಚಿವರು, ಕ್ಷೇತ್ರದ ಶಾಸಕರು, ವಿ.ಪ. ಸದಸ್ಯರುಗಳು ಕೂಡ ಪಾಲ್ಗೊಳ್ಳಲಿದ್ದು ಈ ಅರ್ಹ ಫಲಾನುಭವಿಗಳ ಸಂಕಷ್ಟಕ್ಕೆ ಎಷ್ಟರಮಟ್ಟಿಗೆ ಕ್ರಮ ವಹಿಸುವರು ಕಾದು ನೋಡಬೇಕಿದೆ.

    ಕೆಲವರ ಮನೆಗಳು ಅಪೂರ್ಣಗೊಂಡಿದ್ದರೆ ಮತ್ತಲವರು ಪೂರ್ಣ ಪ್ರಮಾಣದಲ್ಲಿಯೇ ಮನೆ ಕಟ್ಟಿಕೊಂಡು ಜೇಬಲ್ಲಿದ್ದ ಹಣವನ್ನೆಲ್ಲಾ ಬರಿದು ಮಾಡಿಕೊಂಡು ಚಾತಕ ಪಕ್ಷಿಯಂತೆ ಕಳೆದ ಒಂದು ವರ್ಷದಿಂದಲೂ ಕಾಯತೊಡಗಿದ್ದಾರೆ. ಅಡ್ಡ ಬಡ್ಡಿಗೆ ಹಣ ತಂದಿದ್ದ ಅತ್ಯಂತ ಬಡ ಕುಟುಂಬಗಳಂತೂ ಕಟ್ಟಿದ ಅಪೂರ್ಣ ಮನೆಯನ್ನು ಕಂಡು ಕಣ್ಣೀರು ಹಾಕುತ್ತಿದ್ದು ಫಲಾನುಭವಿಗಳ ಗೋಳನ್ನು ಕೇಳುವವರೇ ಇಲ್ಲವಾಗಿದೆ.

  ನನ್ನ ಪತ್ನಿ ಲಕ್ಷಿ ಅವರ ಹೆಸರಿಗೆ ಅನುದಾನ ಮಂಜೂರಾಗಿದ್ದು ಅಡ್ಡ ಬಡ್ಡಿ ಕೊಟ್ಟು ಲಕ್ಷ ಲಕ್ಷ ರೂ.ಗಳನ್ನು ಸಾಲ ಮಾಡಿ ತಂದು ಮನೆ ಕಟ್ಟಿಕೊಂಡಿದ್ದೇನೆ. ಈವರೆಗೂ ಒಂದು ಪೈಸೆಯ ಅನುದಾನ ಮಂಜೂರಾಗಿಲ್ಲ. -ಕೋದಂಡಪ್ಪ, ಶಿರಾ.   

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ