ತುಮಕೂರು:
ಜಿಲ್ಲೆಯ ಹಿರಿಯ ರಾಜಕಾರಣಿ, ಸಂಸದ ಜಿ.ಎಸ್.ಬಸವರಾಜು ಅವರು ತಮ್ಮ ಆರು ದಶಕಗಳ ಸುದೀರ್ಘ ರಾಜಕೀಯ ಜೀವನಕ್ಕೆ ವಿದಾಯ ಹೇಳಿದ್ದಾರೆ.
ರಾಜಕಾರಣದಲ್ಲಿ ಸಾಕಷ್ಟು ದಾಖಲೆ ನಿರ್ಮಿಸಿ, ಹಲವು ಏಳುಬೀಳು ಕಂಡ ಈ ಹಿರಿಯ ರಾಜಕಾರಣಿ ಸಕ್ರಿಯ ರಾಜಕಾರಣದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. 86ನೇ ವಸಂತಕ್ಕೆ ಕಾಲಿಟ್ಟಿರುವ ಬಸವರಾಜು ತಮ್ಮ ಜನ್ಮದಿನದಂದೇ (ಮೇ 4) ಅಧಿಕೃತವಾಗಿ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಕಾಂಗ್ರೆಸ್ ಮೂಲಕ ರಾಜಕೀಯ ಜೀವನ ರೂಪಿಸಿಕೊಂಡು ಬಿಜೆಪಿಯಲ್ಲಿ ತಮ್ಮ ರಾಜಕೀಯ ಬದುಕಿಗೆ ವಿದಾಯ ಹೇಳಿದ್ದಾರೆ
ತಾಲೂಕು ಬೋರ್ಡ್ ಸದಸ್ಯರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದ ಬಸವರಾಜು ಅವರು ಒಂದೊಂದೇ ಮೆಟ್ಟಿಲೇರುತ್ತಾ ಸಂಸತ್ವರೆಗೂ ಪ್ರವೇಶ ಮಾಡಿದರು. ಆರಂಭದ ದಿನಗಳಲ್ಲಿ ತಾಲೂಕು ಬೋರ್ಡ್ ಅಧ್ಯಕ್ಷರಾಗಿ, ಎಪಿಎಂಸಿ ಅಧ್ಯಕ್ಷರಾಗಿ, ಪಿಎಲ್ಡಿ ಬ್ಯಾಂಕ್ ನಿರ್ದೇಶಕರಾಗಿ ರಾಜಕೀಯ ವೃತ್ತಿ ಜೀವನಕ್ಕೆ ತೆರೆದುಕೊಂಡರು
ರಾಜಕೀಯ ಜೀವನದ ಬಹುತೇಕ ಸಮಯವನ್ನು ಕಾಂಗ್ರೆಸ್ನಲ್ಲೇ ಕಳೆಯುತ್ತಾರೆ. ಬಿಎಸ್ ಯಡಿಯೂರಪ್ಪ ಸಖ್ಯದ ನಂತರ ಬಿಜೆಪಿ ಸೇರುತ್ತಾರೆ. ಅವರು ಕೆಜೆಪಿ ಕಟ್ಟಿದ ಸಮಯದಲ್ಲಿ ಹಿಂಬಾಲಿಸುತ್ತಾರೆ. ಆ ಸಮಯದಲ್ಲಿ ಬಿಜೆಪಿಯಿಂದ ಅಮಾನತು ಮಾಡಲಾಗುತ್ತದೆ. ಯಡಿಯೂರಪ್ಪ ಬಿಜೆಪಿಗೆ ಮರಳಿದ ನಂತರ ಬಸವರಾಜು ಸಹ ವಾಪಸಾಗುತ್ತಾರೆ. ಆದರೆ ಪಕ್ಷದಿಂದ ಮಾಡಿದ ಅಮಾನತು ಆದೇಶವನ್ನು ಹಿಂದಕ್ಕೆ ಪಡೆದಿರುವುದಿಲ್ಲ