ಹುಬ್ಬಳ್ಳಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಪ್ಪಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭದ್ರತಾ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಬಿಜೆಪಿ ಮುಖಂಡ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಕೊಪ್ಪಳ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಸಿಎಂ ಸಿದ್ದರಾಮಯ್ಯ ಅವರು, ಬೆಂಗಳೂರಿಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಮಾರ್ಗವಾಗಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು. ಸಿಎಂ ಆಗಮನ ಹಿನ್ನೆಲೆಯಲ್ಲಿ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಸಿ ತೆರಳಲು ಅವಕಾಶ ಮಾಡಿಕೊಟ್ಟಿದ್ದರು. ಇದರಿಂದ ಸ್ಥಳದಲ್ಲಿದ್ದ ವಾಹನ ಸವಾರರು ಟ್ರಾಫಿಕ್ ಜಾಮ್ ನಿಂದ ಸಮಸ್ಯೆ ಎದುರಿಸಿದ್ದರು.
ಇದೇ ವೇಳೆ ಸಿಎಂ ಎದುರಿಗೆ ಬರುತ್ತಿದ್ದ ಶಾಸಕ ಜನಾರ್ದನರೆಡ್ಡಿ ಕಾರನ್ನು ಕೂಡ ಪೊಲೀಸರು ತಡೆದಿದ್ದರು ಎನ್ನಲಾಗಿದೆ. 20 ನಿಮಿಷಗಳ ಕಾಲ ಶಾಸಕ ಜನಾರ್ದನ ರೆಡ್ಡಿ ಇದ್ದ ಕಾರು ರಸ್ತೆಯಲ್ಲೇ ಕಾದು ನಿಂತಿತ್ತು. ಇದರಿಂದ ಅಸಮಾಧಾನಗೊಂಡ ಶಾಸಕರು, ಕೊನೆಗೆ ಡಿವೈಡರ್ ಮೇಲೆಯೇ ಕಾರು ಹತ್ತಿಸಿ ಸಿಎಂ ಬರ್ತಿದ್ದ ಮಾರ್ಗದಲ್ಲೇ ಸ್ವತಃ ಕಾರು ಚಲಾಯಿಸಿಕೊಂಡು ತೆರಳಿದ್ದಾರೆಂದು ಹೇಳಲಾಗುತ್ತಿದೆ.
ಸಿಎಂ ಕಾರು ಆಗಮಿಸುತ್ತಿದ್ದ ವೇಳೆ ರಾಂಗ್ ರೂಟ್ನಲ್ಲಿ ಮತ್ತೊಂದು ಕಾರು ಬರೋದನ್ನು ಕಂಡ ಸಿಎಂ ಸಿದ್ದರಾಮಯ್ಯ ಅವರ ಬೆಂಗಾವಲು ಪಡೆ ಕೊನೆಗೆ ತಮ್ಮ ಕಾರನ್ನೇ ನಿಲ್ಲಿಸಿ ಜನಾರ್ದನ ರೆಡ್ಡಿ ಕಾರು ಪಾಸ್ ಆದ ಬಳಿಕ ಸಿಎಂ ಅವರನ್ನು ಕರೆದುಕೊಂಡು ಹೋಗಿದ್ದಾರೆಂದು ಹೇಳಲಾಗುತ್ತಿದೆ.ಸಿಎಂ ಹಾದು ಹೋಗುತ್ತಿದ್ದ ವೇಳೆ ಶಾಸಕರು ಸೇರಿದಂತೆ ಮೂರು ಕಾರುಗಳು ಭದ್ರತಾ ಶಿಷ್ಟಾಚಾರವನ್ನು ಸ್ಪಷ್ಟವಾಗಿ ಉಲ್ಲಂಘಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ರೆಡ್ಡಿ ಅವರು ಮುಂದಿನ ಸೀಟಿನಲ್ಲಿ ಕುಳಿತಿದ್ದರು ಮತ್ತು ಅವರ ಕಾರು ರಾಂಗ್ ಸೈಡ್‌ನಲ್ಲಿ ಬಂದ ನಂತರ ಅವರ ಬೆಂಬಲಿಗರ ಎರಡು ಕಾರುಗಳು ರೆಡ್ಡಿ ಅವರನ್ನು ಹಿಂಬಾಲಿಸಿದವು. ಇದೀಗ ಎಲ್ಲಾ ಮೂರು ಕಾರು ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಐಪಿಸಿ ಸೆಕ್ಷನ್ 281 ಮತ್ತು 279 ರ ಅಡಿಯಲ್ಲಿ ರಾಶ್ ಡ್ರೈವಿಂಗ್ ಮತ್ತು ರಾಂಗ್ ಸೈಡ್ ಚಾಲನೆಗಾಗಿ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಇದೇ ವೇಳೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್ ತಂಗಡಗಿ ಘಟನೆಯನ್ನು ಖಂಡಿಸಿದ್ದು, ಮಾಜಿ ಸಚಿವರಾಗಿದ್ದ ರೆಡ್ಡಿ ಅವರು ನಿಯಮ ಪಾಲಿಸಬೇಕಿತ್ತು ಎಂದು ಹೇಳಿದ್ದಾರೆ.
ಸಚಿವ ಬಿಝಡ್ ಜಮೀರ್ ಅಹಮದ್ ಖಾನ್ ಕೂಡ ರೆಡ್ಡಿ ಅವರ ವರ್ತನೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಅಧಿಕಾರದಲ್ಲಿದ್ದಾಗ ಹೇಗೆ ನಡೆದುಕೊಂಡರು ಎಂಬುದನ್ನು ಜನ ನೋಡಿದ್ದಾರೆ. ಮನುಷ್ಯ ಎಷ್ಟೇ ದೊಡ್ದವನಾದರೂ, ತಗ್ಗಿಬಗ್ಗಿ ನಡೆಯಬೇಕು, ಇದು ಜನಾರ್ಥನ ರೆಡ್ಡಿಗೆ ಗೊತ್ತಿಲ್ಲ. ಈಗ ದೇವರ ದೆಯೆಯಿಂದ ಬಳ್ಳಾರಿ ಪ್ರವೇಶಿಸಲು ಅನುಮತಿ ಸಿಕ್ಕಿದೆ. ಇನ್ನಾದರೂ ಅಹಂಕಾರ ಬಿಟ್ಟು ಬದುಕಲಿ ಎಂದು ಹೇಳಿದರು.
ಇನ್ನು ರೆಡ್ಡಿ ವರ್ತನೆಯನ್ನು ಅವರ ಬೆಂಬಲಿಗರು ಸಮರ್ಥಿಸಿಕೊಂಡಿದ್ದಾರೆ. ಶಾಸಕರು 20 ನಿಮಿಷಗಳ ಕಾಲ ಕಾಯುತ್ತಿದ್ದರು. ಭದ್ರತೆ ಮತ್ತು ಝೀರೋ ಟ್ರಾಫಿಕ್ ಹೆಸರಿನಲ್ಲಿ ಪೊಲೀಸರು ಟ್ರಾಫಿಕ್ ಅನ್ನು ದೀರ್ಘಕಾಲದವರೆಗೆ ತಡೆಹಿಡಿಯುತ್ತಾರೆ, ಈ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ ಎಂದು ಕೊಪ್ಪಳ ನಿವಾಸಿಯೊಬ್ಬರು ಹೇಳಿದ್ದಾರೆ.