ಬೆಂಗಳೂರು
ಗಾಳಿಪಟ ಹಾರಿಸುವುದು ಕರ್ನಾಟಕದ ಒಂದು ಜನಪದ ಉತ್ಸವವಾಗಿದೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಮಕ್ಕಳು, ಯುವಕರು ಯಾವುದೇ ವಯಸ್ಸಿನ ಮಿತಿ ಇಲ್ಲದೆ ಎಲ್ಲ ವರ್ಗದ ಜನರು ಗಾಳಿಪಟ ಹಾರಿಸಿ ಖುಷಿ ಪಡುತ್ತಾರೆ. ಗಾಳಿಪಟ ಹಾರಿಸಲು ಚೀನಿ ದಾರ ಅಥವಾ ಮಾಂಜಾ ದಾರವನ್ನು ಬಳಸುವುದನ್ನು ಸರ್ಕಾರ ನಿಷೇಧಿಸಿದೆ. ಕೇವಲ ಹತ್ತಿಯಿಂದ ತಯಾರಿಸಿದ ದಾರವನ್ನು ಮಾತ್ರ ಬಳಸುವಂತೆ ಸೂಚನೆ ನೀಡಿದೆ.
ಗಾಳಿಪಟ ಹಾರಿಸಲು ಚೀನಿ ದಾರ ಅಥವಾ ಮಾಂಜಾ ದಾರವನ್ನು ಬಳಸಲಾಗುತ್ತಿದೆ. ಈ ದಾರಗಳು ಪಕ್ಷಿಗಳ ಪ್ರಾಣಕ್ಕೆ ಕಂಟಕವಾಗಿವೆ. ಗಾಳಿಪಟ ಹಾರಿಸುವ ವೇಳೆ ದಾರ ತಾಗಿ ಪಕ್ಷಿಗಳು ಗಾಯಗೊಂಡು ಪ್ರಾಣ ಬಿಟ್ಟಿವೆ. ಹಾಗೇ ಬೈಕ್ ಸವಾರರು ಕೂಡ ಇದರಿಂದ ಹೊರತಾಗಿಲ್ಲ. ಬೈಕ್ ಸವಾರರ ಕುತ್ತಿಗೆ ಕೊಯ್ದ ಉದಾಹರಣೆಗಳು ಇವೆ.
ಈ ಹಿನ್ನೆಲೆಯಲ್ಲಿ ಚೀನಿ ದಾರ ಅಥವಾ ಮಾಂಜಾ ದಾರವನ್ನು ನಿಷೇಧಿಸುವಂತೆ ಪ್ರಕರಣ ನ್ಯಾಯಾಲದ ಮೆಟ್ಟಿಲೇರಿತು. ಬಳಿಕ, ಕೇಂದ್ರ ಸರ್ಕಾರ ಈ ಬಗ್ಗೆ ಸೂಕ್ತ ಮಾರ್ಗಸೂಚಿ ಹೊರಡಿಸಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತ್ತು. ಅದರಂತೆ 2016ರಲ್ಲಿ ಕರ್ನಾಟಕ ಸರ್ಕಾರ ಗಾಳಿಪಟ ಹಾರಿಸಲು ನೈಲಾನ್ ಅಥವಾ ಚೀನಿ ದಾರ ಅಥವಾ ಮಾಂಜಾ ದಾರ ಬಳಕೆಯನ್ನು ನಿಷೇಧಿಸಿತು.
ಇದೀಗ, ರಾಜ್ಯ ಸರ್ಕಾರ 2016ರ ಅಧಿಸೂಚನೆಗೆ ಕೆಲ ತಿದ್ದುಪಡಿಯನ್ನು ಮಾಡಿ ಆದೇಶ ಹೊರಡಿಸಿದೆ. ಯಾವುದೇ ವ್ಯಕ್ತಿ, ಅಂಗಡಿಗಳು, ಸಗಟು ಮತ್ತು ಚಿಲ್ಲರೆ ಮಾರಾಟಗಾರರು ಚೀನಿ ದಾರ ಅಥವಾ ಮಾಂಜಾ ದಾರ ತಯಾರಿಕೆಗೆ ಬಳಸಲಾಗುವ ನೈಲಾನ್ ಮತ್ತು ಗಾಜು ಮತ್ತಿತರ ಅಪಾಯಕಾರಿ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ. ಚೀನಿ ದಾರ ಅಥವಾ ಮಾಂಜಾ ದಾರ ತಯಾರು, ದಾಸ್ತಾನು ಮಾಡುವುದವುದನ್ನೂ ನಿಷೇಧಿಸಲಾಗಿದೆ. ಒಂದು ವೇಳೆ ಬಳಸಿದ್ದು, ತಯಾರು ಮತ್ತು ಮಾರಾಟ ಮಾಡಿದ್ದು ಕಂಡುಬಂದಲ್ಲಿ ಕಠಿಣಕ್ರಮ ಕೈಗೊಳ್ಳುವುದಾಗಿ ಹೇಳಿದೆ.
ಇನ್ನು, ಗಾಳಿಪಟ ಹಾರಿಸುವವರು ಯಾವುದೇ ಚೂಪಾದ, ಗಾಜು, ಅಂಟುಗಳು ಅಥವಾ ದಾರವನ್ನು ಬಲಪಡಿಸುವ ವಸ್ತುಗಳಿಂದ ತಯಾರಿಸಿದ ದಾರವನ್ನು ಬಳಸುವಂತಿಲ್ಲ. ಕೇವಲ ಹತ್ತಿಯಿಂದ ತಯಾರಿಸಿದ ದಾರವನ್ನು ಮಾತ್ರ ಗಾಳಿಪಟ ಹಾರಾಟಕ್ಕೆ ಬಳಸಬೇಕು ಎಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಕರ್ನಾಟಕ ಸರ್ಕಾರ ಅಕ್ಟೋಬರ್ 16 ರಂದು ಮಾರ್ಗಸೂಚಿ ಹೊರಡಿಸಿದೆ.