ನವದೆಹಲಿ:
ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ಹತ್ಯೆಗೈಯುವುದಾಗಿ ಇ-ಮೇಲ್ ಸಂದೇಶ ಕಳುಹಿಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಬೆದರಿಕೆಯ ನಂತರ, ಗಂಭೀರ್ ಪೊಲೀಸ್ ದೂರು ದಾಖಲಿಸಿದ್ದು, ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಸೈಬರ್ ಸೆಲ್ ಪ್ರಸ್ತುತ ಇಮೇಲ್‌ನ ಮೂಲವನ್ನು ಪತ್ತೆಹಚ್ಚಲು ಆರಂಭಿಸಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿ ನಡೆದ ಕೇವಲ ಎರಡು ದಿನಗಳ ನಂತರ ಈ ಬೆದರಿಕೆ ಬಂದಿದೆ. ಕೆಲ ಮೂಲಗಳ ಪ್ರಕಾರ ಉಗ್ರರಿಂದ ಈ ಬೆದರಿಕೆ ಬಂದಿರುವುದಾಗಿ ತಿಳಿದುಬಂದಿದೆ.
ಭಯೋತ್ಪಾದನೆಯ ವಿರುದ್ಧ ಬಹಿರಂಗವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಗಂಭೀರ್‌ಗೆ ಈ ಹಿಂದೆ 2021 ರಲ್ಲಿ ಐಸಿಸ್‌ನಿಂದ ಇದೇ ರೀತಿಯ ಬೆದರಿಕೆ ಬಂದಿತ್ತು. ಇದೀಗ ಮತ್ತೊಮ್ಮೆ ಅವರಿಗೆ ಕೊಲೆ ಬೆದರಿಕೆ ಬಂದಿದೆ.
25 ಭಾರತೀಯರು ಹಾಗೂ ಓರ್ವ ನೇಪಾಳಿ ಸೇರಿ 26 ಜನರ ಬಲಿ ಪಡೆದ ಜಮ್ಮು-ಕಾಶ್ಮೀರದ ಪಹಲ್ಗಾಂ ಉಗ್ರ ದಾಳಿಯನ್ನು ಖಂಡಿಸಿ ಗಂಭೀರ್ ಟ್ವೀಟ್ ಮಾಡಿದ್ದರು. ‘ಅಮಾಯಕ ಪ್ರವಾಸಿಗರ ಮೇಲೆ ಗುಂಡು ಹಾರಿಸಿದ ಭಯೋತ್ಪಾದಕರು ಬೆಲೆ ತೆರುತ್ತಾರೆ. ಭಾರತ ಪ್ರತಿ ದಾಳಿ ಮಾಡಲಿದೆ’ ಎಂದು ಗಂಭೀರ್ ಪೋಸ್ಟ್ ಮಾಡಿದ್ದರು.
ಪಾಕ್‌ಗೆ ಭಾರತದ 6 ರಾಜತಾಂತ್ರಿಕ ಶಾಕ್
ಭಾರತವು ಪಾಕಿಸ್ತಾನದ ವಿರುದ್ಧ ಮೊದಲ ಪ್ರತೀಕಾರ ಕ್ರಮ ಕೈಗೊಂಡಿದೆ. ಇದರ ಭಾಗವಾಗಿ 6 ‘ರಾಜತಾಂತ್ರಿಕ ನಿರ್ಬಂಧ’ಗಳನ್ನು ಹೇರಿದೆ.
- ಸಿಂಧೂ ನದಿ ನೀರು ಒಪ್ಪಂದಕ್ಕೆ ತಡೆ
- ಪಂಜಾಬ್‌ನ ಅಟ್ಟಾರಿ ಗಡಿ ಬಂದ್
- ಭಾರತದಲ್ಲಿನ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಪಾಕ್ ರಕ್ಷಣಾ ಇಲಾಖೆ ಸಿಬ್ಬಂದಿಗೆ ಗೇಟ್‌ಪಾಸ್
- ಪಾಕಿಸ್ತಾನಿ ಪ್ರಜೆಗಳಿಗೆ ಸಾರ್ಕ್ ವೀಸಾ ರದ್ದು
- ಪಾಕ್‌ನಲ್ಲಿನ ಭಾರತದ ಹೈಕಮಿಷನ್ ಸಿಬ್ಬಂದಿ ಸಂಖ್ಯೆ 55ರಿಂದ 30ಕ್ಕೆ ಇಳಿಕೆ
- ಪಾಕಿಸ್ತಾನಿಗಳ ಕರೆಂಟ್ ವೀಸಾ ತಕ್ಷಣದಿಂದ ರದ್ದು ಮಾಡಿದೆ.
