ದುಬೈ:
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಅದ್ಭುತ ಆಟವನ್ನು ಪ್ರದರ್ಶಿಸಿ ಅಜೇಯವಾಗಿ ಫೈನಲ್ ಪ್ರವೇಶಿಸಿದೆ. ಮಾರ್ಚ್ 9 ರಂದು ದುಬೈನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಆಡಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರಿಗೆ ಕೋಚ್ ಗೌತಮ್ ಗಂಭೀರ್ ಎಚ್ಚರಿಕೆ ನೀಡಿದ್ದಾರೆ. ತಂಡ ಇನ್ನೂ ತನ್ನ ಶ್ರೇಷ್ಠ ಪಂದ್ಯವನ್ನು ಅಡಿಲ್ಲ. ಅದು ಫೈನಲ್‌ನಲ್ಲಿ ಬರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್, ‘ನಾವು ಇನ್ನೂ ಪರಿಪೂರ್ಣ ಆಟವನ್ನು ಅಡಿಲ್ಲ. ಈ ಪ್ರದರ್ಶನದಿಂದ ತೃಪ್ತನಾಗುವುದಿಲ್ಲ. ಫೈನಲ್‌ನಲ್ಲಿ ಭಾರತ ತನ್ನ ಪರಿಪೂರ್ಣ ಆಟವನ್ನು ಪ್ರದರ್ಶಿಸುತ್ತದೆ. ನಾವು ಸುಧಾರಿಸುತ್ತಲೇ ಇರಲು ಬಯಸುತ್ತೇವೆ. ಕ್ರಿಕೆಟ್ ಮೈದಾನದಲ್ಲಿ ನಾವು ಆಕ್ರಮಣಕಾರಿಯಾಗಿರಲು, ಮೈದಾನದ ಹೊರಗೆ ವಿನಮ್ರರಾಗಿರಲು ಬಯಸುತ್ತೇವೆ’ ಎಂದು ಹೇಳಿದ್ದಾರೆ.
ಭಾರತ ಕ್ರಿಕೆಟ್ ತಂಡವು 2013ರಲ್ಲಿ ಕೊನೆಯ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು. ಇದಾದ ಬಳಿಕ 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತ್ತಾದರೂ, ಪ್ರಶಸ್ತಿ ಸುತ್ತಿನಲ್ಲಿ ಪಾಕಿಸ್ತಾನ ವಿರುದ್ಧ ಮುಗ್ಗರಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದೀಗ 12 ವರ್ಷಗಳ ಬಳಿಕ ಮಿನಿ ವಿಶ್ವಕಪ್ ಎಂದೇ ಕರೆಸಿಕೊಳ್ಳುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದೆ.
ಬರೋಬ್ಬರಿ 25 ವರ್ಷಗಳ ಬಳಿಕ ನ್ಯೂಜಿಲೆಂಡ್ ಮತ್ತು ಭಾರತ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪ್ರಶಸ್ತಿ ಸುತ್ತಿನಲ್ಲಿ ಕಾದಾಟ ನಡೆಸುತ್ತಿದೆ. 2000ದಲ್ಲಿ ನಡೆದಿದ್ದ 2ನೇ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಭಾರತ ಮತ್ತು ಕಿವೀಸ್ ಎದುರಾಗಿತ್ತು. ಅಂದು ನಡೆದಿದ್ದ ಫೈನಲ್ ಪಂದ್ಯದಲ್ಲಿ ಭಾರತ 4 ವಿಕೆಟ್‌ಗಳಿಂದ ಸೋತಿತ್ತು. ಇದೀಗ 25 ವರ್ಷಗಳ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಭಾರತಕ್ಕೆ ಉತ್ತಮ ಅವಕಾಶವಿದೆ. ಆದರೆ ಕಿವೀಸ್ ಸವಾಲು ಅಷ್ಟು ಸುಲಭವಲ್ಲ.
ಭಾರತದ ಪಾಲಿಗೆ ಐಸಿಸಿ ಟೂರ್ನಿಯಲ್ಲಿ ನ್ಯೂಜಿಲ್ಯಾಂಡ್ ಯಾವಾಗಲೂ ಕಂಟಕವಾಗಿಯೇ ಕಾಡಿದೆ. ಅದರಲ್ಲೂ ಫೈನಲ್ ಪಂದ್ಯದಲ್ಲಿ ಭಾರತ ಇದುವರೆಗೂ ನ್ಯೂಜಿಲ್ಯಾಂಡ್ ವಿರುದ್ಧ ಗೆದ್ದಿಲ್ಲ. 2021ರಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಲ್ಲೂ ಭಾರತ ತಂಡ ನ್ಯೂಜಿಲೆಂಡ್ ಎದುರು ಸೋತಿತ್ತು. ಕಿವೀಸ್ ಗೆದ್ದಿರುವ 2 ಐಸಿಸಿ ಟ್ರೋಫಿ ಭಾರತ ವಿರುದ್ಧವೇ ಎನ್ನುವುದನ್ನು ಮರೆಯುವಂತಿಲ್ಲ.
