ಗುಳೇದಗುಡ್ಡ:
ವಿಶೇಷ ವರದಿ: ಮಹಾಲಿಂಗೇಶ ಯಂಡಿಗೇರಿ
ವಿಘ್ನ ನಿವಾರಕ ಗಣಪತಿಯ ಹಬ್ಬವನ್ನು ಇಡೀ ದೇಶವೇ ಸಂಭ್ರಮದಿಂದ ಆಚರಿಸಲು ಸಿದ್ದವಾಗಿದೆ. ಗಣೇಶನ ವಿಗ್ರಹ ಮೂರ್ತಿಗಳನ್ನು ಆರಾಧಿಸಿ ನಡೆಯುವ ಈ ಹಬ್ಬಕ್ಕೆ ಗಣೇಶನ ಮೂರ್ತಿ ತಯಾರಿಸುವ ಕಲಾವಿದರ ಕೊಡುಗೆ ಅಪಾರವಾಗಿದೆ.ಪಟ್ಟಣದ ಶ್ರೀ ಮೂಕೇಶ್ವರಿ ನಗರದ ದೇವಾಂಗಮಠ ಸಹೋದರರ ಕುಟುಂಬ ನಾಲ್ಕು ತಲೆತಲಾಂತರದಿಂದ ಅಪ್ಪಟ ಜೇಡಿ ಮಣ್ಣಿನ ಗಣಪತಿ ತಯಾರಿಸುತ್ತಾ ಬಂದಿದ್ದಾರೆ. 78 ವರ್ಷದಿಂದ ಮಣ್ಣಿನ ಗಣೇಶ ಕಾರ್ಯಾಗಾರದಲ್ಲಿ ವಿಗ್ರಹಗಳನ್ನು ಚಿಂದಾನಂದಸ್ವಾಮಿ ದೇವಾಂಗಮಠ ಸಹೋದರರು ತಯಾರಿಸುತ್ತಿದ್ದಾರೆ. ಇವಾಗ ಮಠದಲ್ಲಿ ವಿವಿಧ ಶೈಲಿಯ ತಯಾರಿಕೆ ಭರದಿಂದ ಸಾಗಿದೆ. ಜೇಡಿ ಮಣ್ಣಿನ ಗಣೇಶ ವಿಗ್ರಹಗಳನ್ನು ತಯಾರಿಸುವ ಸಂಪ್ರದಾಯವನ್ನು ಇನ್ನು ಜೀವಂತವಾಗಿಡುತ್ತಾರೆ.
ಈ ದೇವಾಂಗಮಠ ಕುಟುಂಬದವರು ಪ್ರತಿವರ್ಷ ವಿಜಯದಶಮಿಯಂದು ಸಂಪ್ರದಾಯಕವಾಗಿ ಮಣ್ಣಿಗೆ ಪೂಜೆಸಲ್ಲಿಸಿ ಗÀಣೇಶ ಮೂರ್ತಿಗಳನ್ನು ತಯಾರಿಸಲು ಪ್ರಾರಂಭಿಸುತ್ತಾರೆ, ನಂತರ ಶ್ರಾವಣ ಮಾಸ ದಿಂದ ನೈಸರ್ಗಿಕ ಬಣ್ಣ ಲೇಪನ ಮಾಡಲಾಗುತ್ತಿದೆ. ಎಲ್ಲಿಯೂ ವಿಗ್ರಹಗಳಿಗೆ ಆಯಿಲ್ ಪೇಂಟ್ ಬಳಸುತ್ತಿಲ್ಲ. ಗಣೇಶ ವಿಸರ್ಜನೆ ಬಳಿಕ ವಿಗ್ರಹವು ನೀರಿನಲ್ಲಿ ಸುಲಭವಾಗಿ ಕರಗಲಿದೆ.ಗಣೇಶ ವಿಗ್ರಹ ಪ್ರತಿಷ್ಠಾಪಿಸುವ 800 ರಿಂದ 1000 ಗಣಪ ಹಾಗೂ ಸಾರ್ವಜನಿಕ ಗಣಪ ಪ್ರತಿಷ್ಠಾಪನೆಗಾಗಿ ತಯಾರಿಕೆಯಲ್ಲಿ ಮಗ್ನರಾಗಿದ್ದಾರೆ.
ಮನೆಗಳಲ್ಲಿ ಪ್ರತಿಷ್ಠಾಪಿಸುವ 1 ರಿಂದ 2 ಅಡಿ ಎತ್ತರದ ಮಣ್ಣಿನ ವಿಗ್ರಹಗಳನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗುತ್ತಿದೆ. ಜೇಡಿ ಮಣ್ಣಿನಿಂದ ಗಣೇಶ ಮೂರ್ತಿಗಳನ್ನು ವಿಭಿನ್ನ ರೂಪದ ಗಣಪತಿಯನ್ನು ಹಾಗೂ ಈ ಮಠದ ಭಕ್ತರ ಬೇಡಿಕೆಯಂತೆ ವಿಶೇಷ ಗಣಪತಿಯನ್ನು ತಯಾರಿಸುವಲ್ಲಿ ನಿಪುಣರಾಗಿದ್ದಾರೆ. ಸಿಂಹದಾರಿ ಗಣಪ, ಬಸವಣ್ಣ, ನವೀಲು, ಶಿವಾ ಪಾರ್ವತಿ ರೂಪ ಈಶ್ವರ ರೂಪ, ಹಾಗೂ ಸಾರ್ವಜನಿಕರು, ಭಕ್ತರ ಬೇಡಿಕೆ ತಕ್ಕ ವಿವಿಧ ಅಲಂಕೃತ ಅವತಾರಗಳಲ್ಲಿ ಗಣೇಶನ ವಿಗ್ರಹಗಳನ್ನು ತಯಾರಿಸುವಲ್ಲಿ ಗುಳೇದಗುಡ್ಡ ತಾಲುಕಿನಲ್ಲಿಯೇ ಪ್ರಸಿದ್ದಿಯಾಗಿದೆ.
ಪಿಒಪಿ(ಪ್ಲಾಸ್ಟರ್ ಆಫ್ ಪ್ಯಾರಿಸ್) ಗಣೇಶ ವಿಗ್ರಹ ನಿಷೇಧ ಹಿನ್ನೆಲೆಯಲ್ಲಿ ಪರಿಸರ ಪೂರಕ ಗಣೇಶ ವಿಗ್ರಹ ಪ್ರತಿಷ್ಠಾಪನೆ ಜಾಗೃತಿ ಹೆಚ್ಚುತ್ತಿದೆ. ಜೇಡಿ ಮಣ್ಣಿನಿಂದ ಮಾಡಿದ ಗಣೇಶನನ್ನು ಮನೆಯಲ್ಲಿ ಪ್ರತಿಷ್ಠಾಪಿಸುವ ಭಕ್ತರ ಸಂಖ್ಯೆ ಏರುತ್ತಿದೆ.ನಮ್ಮಲ್ಲಿನ ಗಣಪ ವಿಗ್ರಹಗಳು ಬಣ್ಣ ಲೇಪನವಿಲ್ಲದೇ ಮಾರಾಟವಾಗುತ್ತದೆ.ಭಕ್ತರು ಮೊದಲೆ ಬಂದು ಗಣಪವನ್ನು ಆಯ್ಕೆಮಾಡಿ ಹೆಸರುನ್ನು ಬರಿಸಿಕೊಂಡು ಹೋಗುತ್ತಿದ್ದಾರೆ ಎಂದು ಚಿಂದಾನಂದಸ್ವಾಮಿ ದೇವಾಗಮಠ ಹಾಗೂ ಸಹೋದರಾದ ವಿವೇಕಾನಂದ ದೇವಾಂಗಮಠ ಹೇಳಿದರು.
ಇವರು ತಯಾರಿಸಿದ ಗಣೇಶ ಮೂರ್ತಿ ಖರೀಧಿಗೆ ಈ ಮಠದಲ್ಲಿಯೇ ಗುಳೇದಗುಡ್ಡ, ಹಾಗೂ ಬಾಗಲಕೋಟೆ ಪಟ್ಟಣದವರು, ಶಿರೂರ, ಅಮೀನಗಡ, ಕಮತಗಿ ಹೊಸಪೇಟೆ, ಮುಂತಾದ ಗ್ರಾಮಗಳಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲು ಆಗಮಿಸುತ್ತಾರೆ.








