ಬೆಂಗಳೂರು :
ಈ ಬಾರಿ ಸಾರ್ವಜನಿಕ ಗಣಶೋತ್ಸವವನ್ನು ಆಚರಿಸಲು ಷರತ್ತಿನ ಮೇಲೆ ಅನುಮತಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಸಭೆಯ ನಂತರ ಮಾಹಿತಿ ನೀಡಿದ ಸಚಿವ ಆರ್. ಅಶೋಕ, ರಾಜ್ಯದಲ್ಲಿ ಗಣೇಶ ಹಬ್ಬದ ಸಾರ್ವಜನಿಕ ಆಚರಣೆಗೆ ಅವಕಾಶ ನೀಡುವ ಚಿಂತನೆ ಸರ್ಕಾರಕ್ಕೆ ಇದೆ. ದೊಡ್ಡ ದೊಡ್ಡ ಗಣೇಶ ವಿಗ್ರಹ ಕೂರಿಸಿ ಆಚರಿಸುವವರ ಜೊತೆ ಸಭೆ ನಡೆಸಿ ಸೆ. 5ರಂದು ಮತ್ತೊಮ್ಮೆ ಸಭೆ ಸೇರಿ ಗಣೇಶ ಉತ್ಸವಕ್ಕೆ ಅವಕಾಶ ಕಲ್ಪಿಸುವ ಕುರಿತು ನಿರ್ಧಾರ ಪ್ರಕಟಿಸಲಾಗುತ್ತದೆ ಎಂದರು.
ಕಳೆದ ಬಾರಿಯ ಆಚರಣೆಗಿಂತ ಸ್ವಲ್ಪ ಹೆಚ್ಚಿನ ರಿಯಾಯಿತಿ ನೀಡಿ ಅವಕಾಶ ಕಲ್ಪಿಸಬೇಕು ಎನ್ನುವ ಬೇಡಿಕೆ ಬಂದಿದೆ. ಆದರೆ ನಾವು ಮೂರನೇ ಅಲೆಯ ಭೀತಿಯಲ್ಲಿದ್ದೇವೆ. ಕೇರಳದಲ್ಲಿ ಓಣಂ ಆಚರಣೆ ನಂತರ ಕೋವಿಡ್ ಹೆಚ್ಚಾದ ನಿದರ್ಶನ ಕಣ್ಮುಂದೆ ಇದೆ. ಹಾಗಾಗಿ ಎಲ್ಲವನ್ನೂ ಗಮನದಲ್ಲಿರಿಸಿಕೊಂಡು ಅವಕಾಶ ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿ ಅವರು ನಿರ್ಧಾರ ಮಾಡಲಿದ್ದಾರೆ ಎಂದರು.
ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಚಿತ್ರದುರ್ಗ ಸೇರಿ ಹಲವು ಜಿಲ್ಲೆಗಳಲ್ಲಿ ಗಣೇಶೋತ್ಸವ ಆಚರಣೆ ವಿಜೃಂಭಣೆಯಿಂದ ನಡೆಯುತ್ತದೆ. ಗಣೇಶ ಹಬ್ಬ ಆಚರಣೆ ಬಗ್ಗೆ ಸರ್ಕಾರಕ್ಕೆ ಬದ್ಧತೆ ಇದೆ. ಗಣೇಶ ನಮ್ಮೆಲ್ಲರ ಆರಾಧ್ಯ ದೈವ. ತಾವೂ ಕೂಡ ಸಭೆಯಲ್ಲಿ ಗಣೇಶ ಚತುರ್ಥಿ ಆಚರಣೆ ಪರವಾಗಿ ಮಾತನಾಡಿದ್ದು, ಮುಖ್ಯಮಂತ್ರಿ ಅವರು ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.
ಕೆಲವು ನಿಬಂಧನೆಗಳಿಗೆ ಒಳಪಟ್ಟು, ಕಳೆದ ಬಾರಿಗಿಂತ ಸ್ವಲ್ಪ ನಿರ್ಬಂಧ ಸಡಿಲಗೊಳಿಸಿ ಅನುಮತಿ ನೀಡಲು ಉದ್ದೇಶಿಸಲಾಗಿದೆ. ಸಾರ್ವಜನಿಕ ಹಿತ ದೃಷ್ಟಿ ನೋಡಿಕೊಂಡು ನಿರ್ಧರಿಸಲಾಗುವುದು. ಎಷ್ಟು ರಿಯಾಯಿತಿ ನೀಡಬಹುದು ಎಂಬುದನ್ನು ಸೋಂಕಿನ ಏರಿಳಿತದ ಆಧಾರದ ಮೇಲೆ ಮುಖ್ಯಮಂತ್ರಿ ಅವರು ಒಳ್ಳೆಯ ಸುದ್ದಿ ನೀಡಲು ಮುಂದಾಗಿದ್ದಾರೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ