ಮುಡಾದಲ್ಲಿ 5 ಸಾವಿರ ಕೋಟಿ ರೂ. ಹಗರಣ :ಗಂಗರಾಜು ಆರೋಪ

ಮೈಸೂರು

    ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 5 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ನಡೆದಿದೆ ಎಂದು ಆರ್​ಟಿಐ ಕಾರ್ಯಕರ್ತ ಗಂಗರಾಜು ಗಂಭೀರ ಆರೋಪ ಮಾಡಿದ್ದಾರೆ. ಹಗರಣದ ಬಗ್ಗೆ ‘ಟಿವಿ9’ ಜತೆ ಮಾತನಾಡಿದ ಅವರು, 5 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ನಡೆದಿರುವ ಬಗ್ಗೆ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡುತ್ತೇನೆ ಎಂದಿದ್ದಾರೆ.

   ಸಿಎಂ ಸಿದ್ದರಾಮಯ್ಯ ಅವರದ್ದು 20-30 ಕೋಟಿ ರೂಪಾಯಿ ಹಗರಣ ಇರಬಹುದು ಅಷ್ಟೆ. ಆದರೆ, ಅದನ್ನು ಬಿಟ್ಟು 5 ಸಾವಿರ ಕೋಟಿ ರೂ.ಗೂ ಹೆಚ್ಚು ಅಕ್ರಮ ನಡೆದಿದೆ. ಮುಡಾದ 9 ವಿಭಾಗದ ಎಲ್ಲಾ ಸಿಬ್ಬಂದಿ ಹಾಗೂ ಅಧಿಕಾರಿಗಳ ತನಿಖೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. 

   ಮುಡಾದ 9 ವಿಭಾಗದ ಎಲ್ಲಾ ಸಿಬ್ಬಂದಿ ಹಾಗೂ ಅಧಿಕಾರಿಗಳ ಬ್ಯಾಂಕ್ ಖಾತೆಗಳು, ಆಸ್ತಿ ಬಗ್ಗೆ ತನಿಖೆಯಾಗಬೇಕು. ಕೇವಲ 50:50 ಅನುಪಾತ ಮಾತ್ರವಲ್ಲ, ಇತರ ನಿವೇಶನ ಹಂಚಿಕೆಯಲ್ಲೂ ಅಕ್ರಮವಾಗಿದೆ. ರದ್ದಾದ ನಿವೇಶನಗಳನ್ನು ಹಂಚಿಕೆ ಮಾಡಿ ಹಣ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.  ಡಿ ಗ್ರೂಪ್ ನೌಕರರಿಂದ ತೊಡಗಿ ಹಿರಿಯ ಅಧಿಕಾರಿಗಳವರೆಗೆ ಎಲ್ಲರೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಕಮಿಷನರ್​ಗಳೂ ಶಾಮೀಲಾಗಿದ್ದಾರೆ. ಆದರೆ, ಎಲ್ಲರೂ ಅಂತಲ್ಲ, ಹೆಚ್ಚಿನವರು ಶಾಮೀಲಾಗಿದ್ದಾರೆ. ಕೆಲವೊಬ್ಬರು ಮಾತ್ರ ಅಕ್ರಮದಲ್ಲಿ ಶಾಮೀಲಾಗದೆ ಇರಬಹುದು ಅಷ್ಟೆ ಎಂದು ಅವರು ಹೇಳಿದ್ದಾರೆ. 

   ಮುಡಾದ ಡಿ ಗ್ರೂಪ್ ನೌಕರರು ಕೂಡ 30 ಲಕ್ಷ ರೂ. ಮೌಲ್ಯದ ಕಾರಿನಲ್ಲಿ ಓಡಾಡುತ್ತಾರೆ. ಈ ಸಂಬಂಧ ನನ್ನ ಬಳಿ ಕೆಲ ದಾಖಲೆಗಳಿವೆ. ತನಿಖೆ ನಡೆದರೆ ಎಲ್ಲವೂ ಹೊರಬರಲಿದೆ ಎಂದು ‘ಟಿವಿ9’ ಮೂಲಕ ಗಂಗರಾಜು ಒತ್ತಾಯಿಸಿದ್ದಾರೆ. ಈ ಬಗ್ಗೆ ತನಿಖೆಗೆ ಎಸ್​​ಐಟಿ ರಚನೆಯಾಗಬೇಕು. ಇ.ಡಿಗೂ ದೂರು ನೀಡುತ್ತೇನೆ ಎಂದು ಅವರು ಆಗ್ರಹಿಸಿದ್ದಾರೆ. 

   ಸದ್ಯ ಸಿದ್ದರಾಮಯ್ಯ ವಿರುದ್ಧ ಆರೋಪ ಇರುವುದರಿಂದ ಅದನ್ನೇ ಮುಂದಿಟ್ಟುಕೊಂಡು ಉಳಿದವರು ಬಚಾವಾಗಲು ಯತ್ನಿಸುತ್ತಿರಬಹುದು. ಆದರೆ, ಹಾಗಾಗಬಾರದು. ಎಲ್ಲ ಅಕ್ರಮವೂ ಹೊರಬರಬೇಕು. ಉನ್ನತ ಮಟ್ಟದಲ್ಲಿ ತನಿಖೆಯಾದಾಗ ಮಾತ್ರ ಅದು ಸಾಧ್ಯ ಎಂದು ಗಂಗರಾಜು ಅಭಿಪ್ರಾಯಪಟ್ಟಿದ್ದಾರೆ. 

    ಏತನ್ಮಧ್ಯೆ ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಳಿಬಂದಿರುವ ಆರೋಪದ ಸಂಬಂಧ ತನಿಖೆ ಚುರುಕುಗೊಂಡಿದೆ. ಲೋಕಾಯುಕ್ತ ಅಧಿಕಾರಿಗಳು ಈಗಾಗಲೇ ಪ್ರಮುಖ ಆರೋಪಿಗಳ ತನಿಖೆ ನಡೆಸಿದ್ದಾರೆ. ಅತ್ತ ಇಡಿ ತನಿಖೆಯೂ ಪ್ರಗತಿಯಲ್ಲಿದೆ.

Recent Articles

spot_img

Related Stories

Share via
Copy link
Powered by Social Snap