ಗ್ಯಾಸ್‌ ಗೀಸರ್‌ ಸೋರಿಕೆಯಿಂದ ತಾಯಿ- ಮಗು ಸಾವು

ಬೆಂಗಳೂರು‌

    ಗ್ಯಾಸ್ ಗೀಸರ್ ಸೋರಿಕೆಯಿಂದ ತಾಯಿ – ಮಗು  ಸಾವನ್ನಪ್ಪಿದ ಘಟನೆ ಬೆಂಗಳೂರಿನ ಗೋವಿಂದರಾಜ ನಗರದಲ್ಲಿ  ನಡೆದಿದೆ. ಮೃತರನ್ನು ಚಾಂದಿನಿ (26), ಯುವಿ (4) ಎಂದು ಗುರುತಿಸಲಾಗಿದೆ. ಸೋಮವಾರ (ಡಿ.8) ಮಧ್ಯಾಹ್ನ ಸ್ನಾನಕ್ಕೆಂದು ತೆರಳಿದ್ದಾಗ ಗ್ಯಾಸ್ ಸೋರಿಕೆಯಾಗಿ ಅಸ್ವಸ್ಥರಾಗಿದ್ದರು.

    ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪ್ರತಿದಿನ ದೊಡ್ಡ ಮಗಳನ್ನು ಶಾಲೆಯಿಂದ 4 ಗಂಟೆಗೆ ಕರೆದುಕೊಂಡು ಬರಲು ಚಾಂದಿನಿ ಹೋಗುತ್ತಿದ್ದರು. ಆದರೆ ಸೋಮವಾರ ಮಗಳನ್ನು ಕರೆದುಕೊಂಡು ಬರಲು ಶಾಲೆಗೆ ಹೋಗದ ಕಾರಣ ಶಾಲೆಯಿಂದ ಚಾಂದಿನಿ ಪತಿ ಕಿರಣ್‌ಗೆ ಫೋನ್‌ ಮಾಡಿದ್ದರು. ಬಳಿಕ ಚಾಂದಿನಿಗೆ ಕರೆ ಮಾಡಿದರೆ ರಿಸೀವ್‌ ಮಾಡಿರಲಿಲ್ಲ. ಇದರಿಂದ ಕಿರಣ್‌ ತಮ್ಮನಿಗೆ ಕರೆ ಮಾಡಿ ನೋಡುವಂತೆ ತಿಳಿಸಿದ್ದರು.

    ಕಿರಣ್ ತಮ್ಮ ಪ್ರವೀಣ್ ಮನೆಗೆ ಬಂದು ನೋಡಿದಾಗ ಬಾತ್ ರೂಮ್‌ನಲ್ಲಿ ತಾಯಿ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಗೊತ್ತಾಗಿದೆ. ಗ್ಯಾಸ್ ಗೀಸರ್ ಸೋರಿಕೆಯಿಂದ ದುರ್ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಗೋವಿಂದ ರಾಜ ನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ‌ ಗ್ಯಾಸ್‌ ಗೀಸರ್‌ಗಳ ಅವೈಜ್ಞಾನಿಕ ಬಳಕೆ ಹಲವು ಕಡೆ ಸಾವುಗಳಿಗೆ ಕಾರಣವಾಗುತ್ತಿದೆ. ಇತ್ತೀಚೆಗೆ ಮೈಸೂರು  ಜಿಲ್ಲೆಯ ಪಿರಿಯಾಪಟ್ಟಣದ ಬೆಟ್ಟದಪುರ ಎಂಬಲ್ಲಿ ಸ್ನಾನಕ್ಕೆ ಇಳಿದ ಅಕ್ಕ- ತಂಗಿ ಗ್ಯಾಸ್ ಗೀಸರ್‌ ಸೋರಿಕೆಯಿಂದ ಮೃತಪಟ್ಟಿದ್ದರು.

Recent Articles

spot_img

Related Stories

Share via
Copy link