ತುಮಕೂರು :  ಒಡೆದ ಗ್ಯಾಸ್‍ಪೈಪ್ ; ತಪ್ಪಿದ ಅನಾಹುತ!!

 ತುಮಕೂರು : 

      ಗ್ಯಾಸ್‍ಪೈಪ್‍ಲೈನ್ ಹಾದು ಹೋಗಿದ್ದ ಜಾಗದಲ್ಲಿ ಜೆಸಿಬಿ ಯಂತ್ರ ಅಗೆದ ಪರಿಣಾಮ ಪೈಪ್ ಒಡೆದು ಗ್ಯಾಸ್ ಸೋರಿಕೆಯಾಗಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ಪೊಲೀಸ್ ಪೇದೆಯ ಕಾರ್ಯಕ್ಷಮತೆಯಿಂದ ತಪ್ಪಿರುವ ಘಟನೆ ನಗರದಲ್ಲಿಂದು ಮಂಗಳವಾರ(ಡಿ.8) ಬೆಳಿಗ್ಗೆ ನಡೆದಿದೆ.

      ನಗರದ ಹೃದಯಭಾಗದಲ್ಲಿರುವ ಬಿ.ಹೆಚ್. ರಸ್ತೆಯ ಸರ್ಕಾರಿ ಜೂನಿಯರ್ ಕಾಲೇಜು ಮುಂಭಾಗದಲ್ಲಿ ಗ್ಯಾಸ್‍ಪೈಪ್ ಲೈನ್ ಹಾದು ಹೋಗಿದೆ. ಯಾವುದೋ ಜೆಸಿಬಿ ಯಂತ್ರ ಕೆಲಸ ಮಾಡುವ ಭರದಲ್ಲಿ ಈ ಪೈಪ್‍ಲೈನ್ ಹಾದು ಹೋಗಿರುವ ಜಾಗದಲ್ಲಿ ಅಗೆದಿರುವ ಪರಿಣಾಮ ಗ್ಯಾಸ್‍ಪೈಪ್ ಒಡೆದು ಗ್ಯಾಸ್ ಸೋರಿಕೆಯಾಗಿದೆ. ಭೂಮಿಯೊಳಗಿಂದ ಗ್ಯಾಸ್ ಬರುತ್ತಿದ್ದನ್ನು ಗಮನಿಸಿರುವ ಜೆಸಿಬಿ ಯಂತ್ರದ ಚಾಲಕ ತಕ್ಷಣ ಅಲ್ಲಿಂದ ಜೆಸಿಬಿಯೊಂದಿಗೆ ಪರಾರಿಯಾಗಿದ್ದಾನೆ.

      ಬೆಳಿಗ್ಗೆ ಈ ರಸ್ತೆ ಮಾರ್ಗದಲ್ಲಿ ಓಡಾಡುತ್ತಿದ್ದ ಸಾರ್ವಜನಿಕರು ಭೂಮಿಯೊಳಗಿನಿಂದ ಬರುತ್ತಿರುವ ಗ್ಯಾಸ್‍ನ್ನು ಗಮನಿಸಿ ತಕ್ಷಣ ಅಲ್ಲೇ ಸಮೀಪದಲ್ಲಿ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್ ಪೇದೆ ರಂಗಸ್ವಾಮಿ ಅವರಿಗೆ ಈ ಸುದ್ದಿ ತಿಳಿಸಿದ್ದಾರೆ.

      ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್ ಪೇದೆ ರಂಗಸ್ವಾಮಿ ಗ್ಯಾಸ್ ಸೋರಿಕೆಯಾಗುತ್ತಿರುವುದನ್ನು ನೋಡಿ ಅಗ್ನಿಶಾಮಕ ಠಾಣೆ, ಪೊಲೀಸ್ ಕಂಟ್ರೋಲ್ ರೂಂ ಹಾಗೂ ಸಂಬಂಧಪಟ್ಟ ಗ್ಯಾಸ್ ಪೈಪ್‍ಲೈನ್ ಅಳವಡಿಕೆದಾರರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ತಿಳಿಸಿ, ಗ್ಯಾಸ್ ಪ್ರವಹಿಸುತ್ತಿರುವುದನ್ನು ತಕ್ಷಣ ಕಂಟ್ರೋಲ್ ಮಾಡಿಸಿದ್ದಾರೆ. ಇದರಿಂದ ಮುಂದಾಗಬಹುದಾಗಿದ್ದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.

      ಈ ಹಿಂದೆಯೂ ರಿಂಗ್ ರಸ್ತೆಯಲ್ಲಿ ಸ್ಮಾರ್ಟ್‍ಸಿಟಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಇದೇ ರೀತಿ ಗ್ಯಾಸ್‍ಲೈನ್ ಒಡೆದು ಬೆಂಕಿ ಹೊರ ಹೊಮ್ಮಿತ್ತು. ಆ ಸಂದರ್ಭದಲ್ಲೂ ತಕ್ಷಣ ಕಾರ್ಯಪ್ರವೃತ್ತರಾದ್ದರಿಂದ ಯಾವುದೇ ಅನಾಹುತ ಸಂಭವಿಸಿರಲಿಲ್ಲ.

      ನಗರದಲ್ಲಿ ಅಭಿವೃದ್ಧಿ ಕೆಲಸಗಳ ನೆಪದಲ್ಲಿ ಒಂದಲ್ಲಾ ಒಂದು ಅನಾಹುತಗಳು ಸಂಭವಿಸುತ್ತಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಈ ಬಗ್ಗೆ ಎಚ್ಚರಿಕೆ ವಹಿಸದೇ ಇರುವುದು ವಿಪರ್ಯಾಸಕರ.

      ಘಟನಾ ಸ್ಥಳಕ್ಕೆ ಅಗ್ನಿಶಾಮಕ ಠಾಣೆಯ ಪಂಚಾಕ್ಷರಿ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap