ಬೆಂಗಳೂರು:
2025-26 ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸರ್ಕಾರದ 5 ಗ್ಯಾರಂಟಿ ಯೋಜನೆಗಳಿಗೆ 51,300 ಕೋಟಿ ರೂ. ಅನುದಾನ ಮೀಸಲಿಟ್ಟಿರುವುದಾಗಿ ಘೋಷಣೆ ಮಾಡಿದ್ದಾರೆ.ವಿಧಾನಸಭೆಯಲ್ಲಿ 16ನೇ ಬಾರಿ 2025-26ನೇ ಸಾಲಿನ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡಿದರು.
ಸಮಾಜದಲ್ಲಿ ಬಡವರ ನೋವನ್ನು ನಿವಾರಿಸುವ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ, ಅವು ಜನತೆಗೆ “ಉಚಿತ ಉಡುಗೊರೆಗಳಲ್ಲ” ಎಂದರು. ಇದೇ ವೇಳೆ ಗ್ಯಾರಂಟಿ ಯೋಜನೆಗಳಿಗೆ 51,300 ಕೋಟಿ ರೂ. ಅನುದಾನ ಮೀಸಲಿಟ್ಟಿರುವುದಾಗಿ ಘೋಷಣೆ ಮಾಡಿದ್ದಾರೆ.ಪ್ರಸಕ್ತ ಹಣಕಾಸು ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ 51,034 ಕೋಟಿ ರೂ. ಒದಗಿಸಲಾಗಿದೆ. ಕಳೆದ ಎರಡು ಆಯವ್ಯಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವುದರ ಜೊತೆಗೆ ವಿತ್ತೀಯ ಕೊರತೆಯನ್ನು ಜಿ.ಎಸ್.ಡಿ.ಪಿ. ಯ ಶೇ.3ರ ಮಿತಿಯೊಳಗೆ ಮತ್ತು ಒಟ್ಟು ಹೊಣೆಗಾರಿಕೆಯನ್ನು ಜಿ.ಎಸ್.ಡಿ.ಪಿ.ಯ ಶೇ.25ರ ಮಿತಿಯೊಳಗೆ ನಿಯಂತ್ರಿಸುವ ಮೂಲಕ ವಿತ್ತೀಯ ಶಿಸ್ತನ್ನು ಪಾಲಿಸಲಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಕ್ತಿ ಯೋಜನೆಗೆ 5,300 ಕೋಟಿ ರೂ. ಅನುದಾನ, ಗೃಹ ಜ್ಯೋತಿಗೆ 10,100 ಕೋಟಿ ರೂ. ಅನುದಾನ, ಗೃಹಲಕ್ಷ್ಮೀ ಯೋಜನೆಗೆ 28 ಸಾವಿರ ಕೋಟಿ ರೂ ಅನುದಾನ ಮೀಸಲಿಟ್ಟಿದ್ದಾರೆ.ಸರ್ಕಾರ ಜನಪ್ರಿಯ ಯೋಜನೆಯಾದ ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯ ಹಾಗೂ ಯುವ ನಿಧಿ ಗ್ಯಾರಂಟಿಗಳಿಂದ ಸಾಕಷ್ಟು ಜನ ತಿಂಗಳಿಗೆ ಸಹಾಯಧನ ಪಡೆಯುತ್ತಿದ್ದಾರೆ.
