ವಿಜಯನಗರ
ಪಂಚ ಗ್ಯಾರಂಟಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 2.O ಸರ್ಕಾರದ ಮಹತ್ವದ ಯೋಜನೆಗಳಾಗಿವೆ. ಐದು ಗ್ಯಾರಂಟಿಗಳಲ್ಲಿ ಎರಡನ್ನು ಕೈ ಬಿಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ ಎಂದು ಕಾಂಗ್ರೆಸ್ ಪಕ್ಷದ ಶಾಸಕ ಗವಿಯಪ್ಪ ಹೇಳಿದ್ದಾರೆ.
ಹೊಸಪೇಟೆಯ ಇಪ್ಪಿತೇರಿ ಮಾಗಾಣಿಯಲ್ಲಿ ನಡೆದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳಿಂದ ಆಶ್ರಯ ಮನೆಗಳು ಬರುತ್ತಿಲ್ಲ. ಶಕ್ತಿ ಯೋಜನೆ ಸೇರಿದಂತೆ ಇನ್ನೆರೆಡು ಗ್ಯಾರಂಟಿಗಳು ಕಡಿಮೆ ಮಾಡಲು ಮುಖ್ಯಮಂತ್ರಿಗಳಿಗೆ ಹೇಳುತ್ತೇವೆ. ಅವರೇನು ತೀರ್ಮಾನ ಮಾಡುತ್ತಾರೆ ನೋಡೋಣ ಎಂದು ಹೇಳಿದರು.
ನಮ್ಮ ಕ್ಷೇತ್ರಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಬರುತ್ತಿಲ್ಲ ಎಂದು ಶಾಸಕ ಗವಿಯಪ್ಪ ಹೇಳಿದ್ದರು. ಇದಕ್ಕೆ ಸ್ಥಳೀಯ ಕಾಂಗ್ರೆಸ್ ಮುಖಂಡರೇ ಶಾಸಕರ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಶಾಸಕ ಹೆಚ್ಆರ್ ಗವಿಯಪ್ಪ ಹೊಸಪೇಟೆ ಪಾಲಿಗೆ ಶಾಪವಾಗಿದ್ದಾರೆ ಎಂದು ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ ಕಿಡಿಕಾರಿದ್ದರು. ವಿಜಯನಗರ ಕ್ಷೇತ್ರಕ್ಕೆ ಅಂದಾಜು 150 ಕೋಟಿ ರೂಪಾಯಿ ಅನುದಾನ ಬಂದರೂ ಶಾಸಕ ಗವಿಯಪ್ಪ ಸುಳ್ಳು ಹೇಳುತ್ತಾರೆ ಎಂದು ಇಮಾಮ್ ನಿಯಾಜಿ ಅಸಮಾಧಾನ ಹೊರಹಾಕಿದ್ದರು.
ಐದು ಗ್ಯಾರಂಟಿಗಳನ್ನು ಸಮರ್ಪಕವಾಗಿ ನೀಡಲು ಸರ್ಕಾರದ ಬಳಿ ಹಣವಿಲ್ಲ ಎಂದು ವಿಪಕ್ಷಗಳು ಆರೋಪ ಮಾಡುತ್ತಿರುವ ನಡುವೆಯೇ ಸ್ವತಃ ಕಾಂಗ್ರೆಸ್ ಪಕ್ಷದ ಶಾಸಕರ ಈ ಹೇಳಿಕೆಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.