ನವದೆಹಲಿ :
ಭಾರತೀಯ ರೈಲ್ವೇ ಸಹಾಯವಾಣಿ ಈಗ ದಿನಕ್ಕೆ 3 ಲಕ್ಷ ಕರೆಗಳನ್ನು ಸ್ವೀಕರಿಸುತ್ತಿದ್ದು, ವಿಶ್ವದಲ್ಲೇ ಅತೀ ದೊಡ್ಡ ಸಹಾಯವಾಣಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಎಐ ಆಧಾರಿತ ಸ್ವಯಂ ಚಾಲಿತ ಕಾಲ್ ಸೆಂಟರ್ ಆಧಾರಿತ ವ್ಯವಸ್ಥೆಯಿಂದಾಗಿ ಪ್ರಯಾಣಿಕರು ಹೆಚ್ಚಾಗಿ ತಮ್ಮ ದೂರುಗಳನ್ನು ದಾಖಲಿಸಿಕೊಳ್ಳಲು ಸಹಾಯ ಮಾಡುತ್ತಿದೆ.
ಹೆಚ್ಚಿನ ಭಾರತೀಯ ಭಾಷೆಗಳಲ್ಲಿ ಸಂವಹನ ನಡೆಸಲು ಅನುಕೂಲ ಮಾಡಿಕೊಡುವ ಈ ಕಾಲ್ ಸೆಂಟರ್ ಗೆ ಪ್ರತಿ ದಿನ ರೈಲು ಸಮಯ, ಟಿಕೆಟ್ ದೃಢೀಕರಣ ಮತ್ತು ವಿವಿಧ ಮಾರ್ಗಗಳಲ್ಲಿನ ರೈಲುಗಳ ಮಾಹಿತಿಯನ್ನು ಕೇಳಿ ಕರೆ ಬರುತ್ತಿದೆ. ಇಂತಹ ಪ್ರಶ್ನೆಗಳಿಗೆ ಕೆಲವೇ ಸೆಕೆಂಡ್ ಗಳಲ್ಲಿ ಪ್ರತಿಕ್ರಿಯೆ ನೀಡಲಾಗುತ್ತಿದೆ.
ಈ ಹಿಂದೆ ಪ್ರತಿ ನಿಮಿಷಕ್ಕೆ 200ಕ್ಕೂ ಹೆಚ್ಚು ಕರೆಗಳು ಬರುತ್ತಿದ್ದರಿಂದ ಆಗಾಗ್ಗೆ ಕೆಲವೊಂದು ಕರೆಗಳನ್ನು ಕೈ ಬಿಡಲಾಗುತ್ತಿತ್ತು. ಕರೆ ತೆಗೆದುಕೊಳ್ಳದೇ ಇರುವುದು, ಕೆಲವೊಂದು ಕರೆ ಅರ್ಧದಲ್ಲೇ ಕಡಿತವಾಗುವುದು, ದೀರ್ಘ ಕಾಯುವ ಸಮಯಗಳು ಸಾಮಾನ್ಯವಾಗಿದ್ದವು. ಹೊಸ ಸ್ವಯಂಚಾಲಿತ ಎಐ ಆಧಾರಿತ ವ್ಯವಸ್ಥೆಯಿಂದಾಗಿ ಈ ಸಮಸ್ಯೆಗಳನ್ನು ಸಾಕಷ್ಟು ಮಟ್ಟಿಗೆ ಪರಿಹಾರವಾಗಿವೆ. ಅಲ್ಲದೇ ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿ ಸೇವೆಯನ್ನು ನೀಡುತ್ತಿದೆ.
ಭಾರತೀಯ ರೈಲ್ವೇಯ ಹೊಸ ಐವಿಆರ್ ವ್ಯವಸ್ಥೆಯು ದೂರು ನೀಡುವ ಪ್ರಕ್ರಿಯೆಯನ್ನು ಸುಗಮಗೊಳಿಸಿದೆ. ಐವಿಆರ್ ನ ದೂರುಗಳ ವಿಭಾಗದಲ್ಲಿ ಪ್ರಯಾಣಿಕರು ತಮ್ಮ ಭಾಷೆಯಲ್ಲಿ ರೈಲಿನ ಕೋಚ್, ಶೌಚಾಲಯ, ಹಾಸಿಗೆ, ದಿಂಬು, ತುರ್ತು ವೈದ್ಯಕೀಯ ಅಗತ್ಯಗಳ ಕುರಿತು ದೂರು ನೀಡಬಹುದು. ಅವುಗಳನ್ನು ತ್ವರಿತವಾಗಿ ಪರಿಹರಿಸುವ ಕಾರ್ಯವನ್ನು ಮಾಡಲಾಗುತ್ತದೆ.
ಪ್ರಸ್ತುತ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿದ್ದು ಶೀಘ್ರದಲ್ಲೇ ತೆಲುಗು. ಬೆಂಗಾಲಿ ಭಾಷೆಯನ್ನು ಸೇರಿಸುವ ಯೋಜನೆ ಮಾಡಲಾಗುತ್ತಿದೆ. ಇದು ತ್ವರಿತ ಪರಿಹಾರಕ್ಕಾಗಿ ಸೂಕ್ತ ರೈಲ್ವೇ ಸಿಬ್ಬಂದಿಗೆ ದೂರುಗಳನ್ನು ತಕ್ಷಣವೇ ರವಾನಿಸುತ್ತದೆ.
ಹೊಸ ಜೆನ್ ಎಐ ಚಾಲಿತ ದೂರು ವ್ಯವಸ್ಥೆಯಲ್ಲಿ ಪ್ರಯಾಣಿಕರು ತಮ್ಮ ಪಿಎನ್ ಆರ್ ನಂಬರ್ ಬಳಸಿ ಸಮಸ್ಯೆಗಳ ಬಗ್ಗೆ ದೂರು ನೀಡಬಹುದು. ಈ ಕುರಿತು ತಕ್ಷಣ ರೈಲ್ವೇ ಸಿಬ್ಬಂದಿಗೆ ಮಾಹಿತಿ ನೀಡಿ, ಮುಂದಿನ ನಿಲ್ದಾಣ ತಲುಪುವಷ್ಟರಲ್ಲಿ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂಬುದನ್ನು ಎಂದು ಖಚಿತಪಡಿಸಿಕೊಳ್ಳಲಾಗುತ್ತದೆ.
ಜೆನ್ ಎಐನಿಂದ ನಿರ್ವಹಿಸುತ್ತಿರುವ ಮತ್ತು ಬೆಂಗಳೂರು ಮೂಲದ ಉಬೊನಾದಿಂದ ಅಭಿವೃದ್ಧಿಪಡಿಸಲಾದ ಇದು ಪ್ರಾದೇಶಿಕ ಭಾಷೆಗಳಿಗೆ ಹೆಚ್ಚು ಬೆಂಬಲವನ್ನು ಒದಗಿಸುತ್ತದೆ. ಈ ಹಿಂದೆ ಏಜೆಂಟ್‌ಗಳ ಭಾಷಾ ಮಿತಿಗಳಿಂದಾಗಿ ಶೇ. 90ಕ್ಕಿಂತ ಹೆಚ್ಚು ಕರೆಗಳು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿರುತ್ತಿದ್ದವು. ಈಗ ಪ್ರಾದೇಶಿಕ ಭಾಷಾ ಬೆಂಬಲದಿಂದಾಗಿ ಶೇ. 58ರಷ್ಟು ಕರೆಗಳು ಹಿಂದಿಯಲ್ಲಿವೆ. ಉಳಿದಂತೆ ಮರಾಠಿ, ಬೆಂಗಾಲಿ ಮತ್ತು ತೆಲುಗು ಭಾಷೆಗಳಲ್ಲಿದ್ದು, ಇಂಗ್ಲಿಷ್ ಬಳಕೆಯು ತೀರಾ ಕಡಿಮೆಯಾಗಿದೆ.
ರೈಲ್ವೇ ಸಹಾಯವಾಣಿ ವ್ಯವಸ್ಥೆಯಲ್ಲಿ ಉಬೊನಾದ ಈ ಆವಿಷ್ಕಾರವು ಧ್ವನಿ ಗುರುತಿಸುವಿಕೆ, ಪಾವತಿ ಸೇರಿದಂತೆ ಹಲವು ಎಐ ಪ್ರಕ್ರಿಯೆಗಳಲ್ಲಿ ವ್ಯಾಪಕ ಪರಿಣತಿಯನ್ನು ಹೊಂದಿದೆ. ಈ ತಂತ್ರಜ್ಞಾನವನ್ನು ಈಗಾಗಲೇ ಬ್ಯಾಂಕ್, ವಿಮೆ ಕಂಪೆನಿಗಳು ಮತ್ತು ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಗ್ರಾಹಕರ ಪರಿಶೀಲನೆ ಮತ್ತು ಕ್ಯಾಶ್ ಆನ್ ಡೆಲಿವರಿ ವಹಿವಾಟುಗಳನ್ನು ನಿರ್ವಹಿಸಲು ಬಳಸಲಾಗುತ್ತಿದೆ.
ಶೀಘ್ರದಲ್ಲೇ ಸಂಪೂರ್ಣ ತಾಂತ್ರಿಕವಾಗಿ ನಿರ್ವಹಿಸಲು ಎಐ ಅನ್ನು ಭಾರತೀಯ ರೈಲ್ವೇಯು ತನ್ನ ಸಹಾಯವಾಣಿಯಲ್ಲಿ ಹೊಂದಿಸಲಿದೆ. ಸಹಾಯವಾಣಿ 139 ಜೊತೆಗೆ ಭಾರತೀಯ ರೈಲ್ವೆಯ ಟಿಕೆಟಿಂಗ್ ಕಂಪೆನಿ ಐಆರ್ ಸಿಟಿಸಿ ತನ್ನ 14646 ಸಹಾಯವಾಣಿಯನ್ನು ಸ್ವಯಂಚಾಲಿತಗೊಳಿಸಲು ಸಿದ್ಧತೆ ನಡೆಸುತ್ತಿದೆ. ಶೀಘ್ರದಲ್ಲೇ ಇದನ್ನು ಕೂಡ ಎಐ ನಿರ್ವಹಣೆ ಮಾಡಲಿದೆ.
