ಕಠ್ಮಂಡು
ಕೆಲವು ತಿಂಗಳ ಹಿಂದೆ ನೇಪಾಳದಲ್ಲಿ ಹೊಸ ಕ್ರಾಂತಿ ಉಂಟು ಮಾಡಿದ್ದ ಜೆನ್ ಝಿ ತಲೆಮಾರು ಮತ್ತೊಂದು ಹೋರಾಟ ನಡೆಸುತ್ತಿದೆ. ಪದಚ್ಯುತ ಪ್ರಧಾನಿ ಕೆ.ಪಿ. ಶರ್ಮಾ ಒಲಿ ನೇತೃತ್ವದ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ-ಯುನಿಫೈಡ್ ಮಾರ್ಕ್ಸಿಸ್ಟ್ ಲೆನಿನಿಸ್ಟ್ ಕಾರ್ಯಕರ್ತರು ಮತ್ತು ಜೆನ್ ಝಿ ಪ್ರತಿಭಟನಾಕಾರರ ನಡುವೆ ಘರ್ಷಣೆ ಭುಗಿಲೆದ್ದಿದ್ದು, ಬಾರಾ ಜಿಲ್ಲೆಯಲ್ಲಿ ಮತ್ತೆ ಕರ್ಫ್ಯೂ ಹೇರಲಾಗಿದೆ. ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಶಮನಗೊಳಿಸಲು ಗುರುವಾರ ರಾತ್ರಿ 8 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಡಳಿತ ಕಚೇರಿ ಪ್ರಕಟಿಸಿದೆ.
ಇತ್ತೀಚಿನ ದಿನಗಳಲ್ಲಿ ನೇಪಾಳ ರಾಜಕೀಯ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಯುವ ಪ್ರತಿಭಟನಾಕಾರರ ಗುಂಪು ಮತ್ತು ಯುಎಂಎಲ್ ಬೆಂಬಲಿಗರೊಂದಿಗೆ ಕೆಲವು ದಿನಗಳ ಹಿಂದೆ ಆರಂಭವಾದ ಘರ್ಷಣೆ ತಾರಕಕ್ಕೇರಿದೆ.
ಮತ್ತಷ್ಟು ಹಿಂಸಾಚಾರವನ್ನು ತಡೆಗಟ್ಟಲು ಬಾರಾ ಜಿಲ್ಲೆಯ ಪ್ರಮುಖ ಜಂಕ್ಷನ್‌ಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. “ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಘರ್ಷಣೆಯ ನಂತರ ಕರ್ಫ್ಯೂ ಅನ್ನು ಮತ್ತೆ ವಿಧಿಸಲಾಗಿದೆ” ಎಂದು ಸಹಾಯಕ ಮುಖ್ಯ ಜಿಲ್ಲಾ ಅಧಿಕಾರಿ ಛಬಿರಾಮನ್ ಸುಬೇದಿ ಹೇಳಿದ್ದಾರೆ.
ಘರ್ಷಣೆಗೆ ಕಾರಣರಾದವರ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಿದರೂ ಅವರನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಜೆನ್ ಝಿ ಪ್ರತಿಭಟನಾಕಾರರು ಆರೋಪಿಸಿದ್ದಾರೆ. ನವೆಂಬರ್ 19ರಂದು ನಡೆದ ಘರ್ಷಣೆಯಲ್ಲಿ 6 ಜೆನ್ ಝಿ ಬೆಂಬಲಿಗರು ಗಾಯಗೊಂಡಿದ್ದರು. ಸಿಮಾರಾ ಚೌಕ್‌ನಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ 6 ಯುಎಂಎಲ್ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಲಾಗಿದೆ.
2026ರ ಮಾರ್ಚ್ 5ರಂದು ನಡೆಯಲಿರುವ ಚುನಾವಣೆಗೆ ಮುಂಚಿತವಾಗಿ ಯುಎಂಎಲ್ (ಯುನೈಟೆಡ್ ಮಾರ್ಕ್ಸಿಸ್ಟ್ ಲೆನಿನಿಸ್ಟ್) ನಾಯಕರು ಜಿಲ್ಲೆಗೆ ಆಗಮಿಸುವುದಾಗಿ ಪ್ರಕಟಿಸಿದ ಬೆನ್ನಲ್ಲೇ ಉದ್ವಿಗ್ನತೆ ಪ್ರಾರಂಭವಾಯಿತು. ಸೆಪ್ಟೆಂಬರ್‌ನಲ್ಲಿ ನಡೆದ ರಾಜಕೀಯ ಕ್ರಾಂತಿಯ ಬಳಿಕ ನೇಪಾಳದ ಆಡಳಿತದಲ್ಲಿ ಬದಲಾವಣೆಯಾಗಿದೆ.
ನವೆಂಬರ್ 19ರಂದು ಭುಗಿಲೆದ್ದ ಹಿಂಸಾಚಾರದ ನಂತರ ಕಠ್ಮಂಡು ಮತ್ತು ಸಿಮಾರಾ ನಡುವಿನ ಎಲ್ಲ ದೇಶೀಯ ವಿಮಾನಗಳ ಹಾರಾಟವನ್ನು ಒಂದು ದಿನದ ಮಟ್ಟಿಗೆ ರದ್ದುಗೊಳಿಸಲಾಯಿತು. ಒಲಿ ಸರ್ಕಾರವನ್ನು ಕೊನೆಗೊಳಿಸಿದ ಜೆನ್ ಝಿ ಚಳುವಳಿಯಿಂದ ವಿಸರ್ಜಿಸಲ್ಪಟ್ಟ ಪ್ರತಿನಿಧಿಗಳ ಸಭೆಯನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿ ಯುಎಂಎಲ್ ಪ್ರತಿಭಟನೆ ನಡೆಸುತ್ತಿದೆ.
ಒಲಿ ನೇತೃತ್ವದ ಸರ್ಕಾರದ ಪತನದ ನಂತರ ಸೆಪ್ಟೆಂಬರ್ 12ರಂದು ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಯಿತು. ಅವರು ನೇಮಕಗೊಂಡ ಅದೇ ದಿನದಂದು ಸಂಸತ್ತನ್ನು ವಿಸರ್ಜಿಸಲು ಶಿಫಾರಸು ಮಾಡಿ, ಹೊಸ ಚುನಾವಣೆಗಳಿಗೆ ಕರೆ ನೀಡಿದ್ದರು. ಕರ್ಕಿ ಅವರ ಶಿಫಾರಸಿನ ಮೇರೆಗೆ ಅಧ್ಯಕ್ಷ ರಾಮ್ ಚಂದ್ರ ಪೌಡೆಲ್ ಸಂಸತ್ತನ್ನು ವಿಸರ್ಜಿಸಿ 2026ರ ಮಾರ್ಚ್ 5ರಂದು ಸಾರ್ವತ್ರಿಕ ಚುನಾವಣೆಗೆ ಕರೆ ನೀಡಿದ್ದರು.








