ಇಲ್ಲಿ ಶೂನ್ಯ ಮಾಸದ ದಿನ ಊರೇ ಖಾಲಿ
ಹೊರಬೀಡು ಕಾರ್ಯಕ್ರಮ ಆಯೋಜನೆಯ ಬಗ್ಗೆ ಹದಿನೈದು ದಿನಗಳ ಮುಂಚೆಯೇ ಗ್ರಾಮದಲ್ಲಿನ ಮುಖಂಡರ ಸಭೆ.. ಹಿರಿಯ ಮುಖಂಡರ ಸಭೆಯ ತಿರ್ಮಾನದಂತೆ ವಾರದ ಮುಂಚೆಯೇ ಅಕ್ಕಪಕ್ಕದ ಗ್ರಾಮಗಳಲ್ಲಿ ಟಾಂಟಾಂ ಸುದ್ದಿ..
ಪ್ರತಿ ಮೂರು ವರ್ಷಕ್ಕೊಮ್ಮೆ ಶೂನ್ಯ ಮಾಸದಲ್ಲಿ ಸ್ಥಳೀಯ ನಾಗರೀಕರು ಆಚರಿಸುವ ಪದ್ದತಿಯು ಗುರುವಾರ ಬುಕ್ಕಾಪಟ್ಟಣ ಗ್ರಾಮದಲ್ಲಿ ನಡೆದಿದೆ.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಬುಕ್ಕಾಪಟ್ಟಣ ಗ್ರಾಪಂ ವ್ಯಾಪ್ತಿಯ ಬುಕ್ಕಾಪಟ್ಟಣ, ಗೊಲ್ಲರಹಟ್ಟಿ, ಮಾರುತಿನಗರ, ಶ್ರೀನಿವಾಸಪುರ, ಹೊಸಪಾಳ್ಯ ಗ್ರಾಮದ 550ಕ್ಕೂ ಅಧಿಕ ಕುಟುಂಬದ 3ಸಾವಿರಕ್ಕೂ ಅಧಿಕ ಜನ ತಮ್ಮ ಮನೆಗಳಿಗೆ ಬೀಗ ಜಡಿದು ಗ್ರಾಮದ ಎರಡು ಕಡೆಯ ರಸ್ತೆಗಳಿಗೆ ಮುಳ್ಳಿನ ಬೇಲಿಯನ್ನು ಹಾಕಿ ಊರನ್ನು ಬಿಡುತ್ತಾರೆ.
ಬುಕ್ಕಪಟ್ಟಣ ಗ್ರಾಪಂ ವ್ಯಾಪ್ತಿಯ ಬುಕ್ಕಾಪಟ್ಟಣ, ಗೊಲ್ಲರಹಟ್ಟಿ, ಮಾರುತಿನಗರ, ಶ್ರೀನಿವಾಸಪುರ ಮತ್ತು ಹೊಸಪಾಳ್ಯ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎರಡು ಕಡೆಯ ದಾರಿಗಳನ್ನು ಮುಳ್ಳಿನಿಂದ ಮುಚ್ಚುತ್ತಾರೆ. ಎರಡು ಕಡೆಗಳಲ್ಲಿ ಗ್ರಾಮದ ಮುಖಂಡರು ಗ್ರಾಮದೊಳಗೆ ಯಾರು ಪ್ರವೇಶ ಮಾಡದಂತೆ ಕಾವಲು ಕಾಯುತ್ತಾರೆ. ಗ್ರಾಮ ದೇವತೆ ಮಾರಮ್ಮದೇವಿ ಊರನ್ನು ಸುತ್ತುವುದಲ್ಲದೇ ಕಾವಲು ಕಾಯುತ್ತಾಳೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ಸ್ಥಳೀಯ ಗ್ರಾಮಸ್ತರು.
ಬುಕ್ಕಾಪಟ್ಟಣ ಗ್ರಾಮದ ಹೊರಗಡೆ ಗುಡಿಸಲು ಹಾಕಿ ಮಾರಮ್ಮದೇವಿಯ ಪ್ರತಿಷ್ಟಾಪನೆ ಮಾಡಿ ಪ್ರತಿಯೊಬ್ಬರು ಪೂಜೆ ಸಲ್ಲಿಸುತ್ತಾರೆ. ನಂತರ ತಮ್ಮ ಜಮೀನುಗಳಲ್ಲಿ ಗುಡಾರ ಹಾಕಿಕೊಂಡು ಮಾಂಸಹಾರಿ ಪ್ರೀಯರು ಮಾಂಸದೂಟ, ಸಸ್ಯಹಾರಿ ಪ್ರೀಯರು ಅನ್ನಪಾಯಸ ಮಾಡಿಕೊಂಡು ತಮ್ಮ ಸಂಬಂಧಿಗಳ ಜೊತೆ ಜಮೀನಿನಲ್ಲೇ ಸೇರಿ ಊಟ ಮಾಡಿ ಸಂಭ್ರಮಿಸುವ ಸಂಪ್ರದಾಯ ಬುಕ್ಕಾಪಟ್ಟಣ ಗ್ರಾಮದಲ್ಲಿ ಇಂದಿಗೂ ಜೀವಂತವಾಗಿದೆ.
ಸೂರ್ಯ ಮುಳುಗಿದ ನಂತರ ಗೋಧೂಳಿ ಸಮಯದಲ್ಲಿ ಊರಿನ ಬಾಗೀಲಿನಲ್ಲಿ ಗ್ರಾಮ ದೇವತೆ ಮಾರಮ್ಮದೇವಿಗೆ ಪೂಜೆ ಸಲ್ಲಿಸಿ ಗ್ರಾಮಸ್ಥರ ಸಂಪ್ರದಾಯದಂತೆ ರಣಬಲೆ, ಕೋಬಲೆ ಎಂದು ಕೂಗುತ್ತಾ ಸರಗು ಹಾಕುತ್ತಾರೆ. ಅದಾದ ನಂತರವಷ್ಟೆ ಊರಿನೊಳಗೆ ಪ್ರವೇಶ. ಪ್ರತಿ ಮನೆಯ ಬಾಗಿಲಿಗೆ ಪೂಜೆಯನ್ನು ಸಲ್ಲಿಸಿದ ನಂತರ ಮನೆಯ ಸುತ್ತಮುತ್ತಲು ಮೊಸರನ್ನು ಹಾಕಿ ಮನೆಯನ್ನು ಪ್ರವೇಶ ಮಾಡುತ್ತಾರೆ. ಪ್ರತಿ ಮೂರು ವರ್ಷಕ್ಕೊಮ್ಮೆ ಶೂನ್ಯ ಮಾಸದಲ್ಲಿ ಹೊರಬೀಡು ಕಾರ್ಯಕ್ರಮ ನಡೆಯಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ