ಲಖನೌ:
ಉತ್ತರ ಪ್ರದೇಶದ ಗೋರಖ್‌ಪುರದ 26ನೇ ಬೆಟಾಲಿಯನ್ PAC ಕೇಂದ್ರದಲ್ಲಿ ತರಬೇತಿಗೆ ಸೇರಿರುವ ಮಹಿಳಾ ಕಾನ್ಸ್‌ಟೇಬಲ್‌ಗಳು ಬುಧವಾರ ಖಾಸಗಿ ತನಕ್ಕೆ ದಕ್ಕೆಯಾಗುತ್ತಿದೆ ಎಂದು ಮತ್ತು ನೀರು ಹಾಗೂ ವಿದ್ಯುತ್ ವ್ಯವಸ್ಥೆಯ ಕೊರತೆ ವಿರುದ್ಧ ಪ್ರತಿಭಟನೆ ನಡೆಸಿದರು. ಇತ್ತೀಚೆಗೆ ತರಬೇತಿಗೆ ಸೇರಿದ ಈ ನೂತನ ಕಾನ್ಸ್‌ಟೇಬಲ್‌ಗಳು “ತೆರೆದ ಸ್ಥಳದಲ್ಲಿ ಸ್ನಾನ ಮಾಡಬೇಕಾಗಿದೆ” ಎಂದು ದೂರಿದ್ದಾರೆ ಎಂದು ವರದಿಯಾಗಿದೆ.
ಕೆಲವರು ಸ್ನಾನಗೃಹದ ಕಾರಿಡಾರ್‌ನಲ್ಲಿ CCTV ಕ್ಯಾಮೆರಾಗಳಿರುವುದರಿಂದ ಗೌಪ್ಯತೆ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಕಮಾಂಡೆಂಟ್ ಅಶೋಕ್ ಕುಮಾರ್, “ತೆರೆದ ಸ್ಥಳದಲ್ಲಿ ಸ್ನಾನ ಮಾಡುತ್ತಿಲ್ಲ. ಆದರೆ ಒಟ್ಟಿಗೆ ಸ್ನಾನ ಮಾಡಲು ಒಪ್ಪದ ಕಾರಣ, ಸ್ನಾನಗೃಹಗಳಲ್ಲಿ ವಿಭಜನೆ ಗೋಡೆಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ” ಎಂದಿದ್ದಾರೆ.
ಮಹಿಳಾ ಕಾನ್ಸ್‌ಟೇಬಲ್‌ಗಳ ದೂರುಗಳಿಗೆ ಸಂಬಂಧಿಸಿ, ಹಿರಿಯ ಅಧಿಕಾರಿಗಳು ಶಿಬಿರಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ ಎಂದು PAC ಇನ್‌ಸ್ಪೆಕ್ಟರ್ ಜನರಲ್ ಡಾ. ಪ್ರೀತಿಂದರ್ ಸಿಂಗ್ ತಿಳಿಸಿದ್ದಾರೆ. ಕಾನ್ಸ್‌ಟೇಬಲ್‌ಗಳನ್ನು ತಮ್ಮ ಕೊಠಡಿಗಳಿಗೆ ಮರಳಲು ಮನವೊಲಿಕೆ ನಡೆಸಲಾಗುತ್ತಿದೆ ಎಂದು ಕಮಾಂಡೆಂಟ್ ಕುಮಾರ್ ಹೇಳಿದ್ದಾರೆ.
ಕಮಾಂಡೆಂಟ್ ಕುಮಾರ್ ಪ್ರಕಾರ, ಮಂಗಳವಾರ ರಾತ್ರಿ ಶಿಬಿರದಲ್ಲಿ ವಿದ್ಯುತ್ ಕಡಿತಗೊಂಡು, ಜನರೇಟರ್ ಸರಬರಾಜು ತಡವಾಗಿತ್ತು. ಇದರಿಂದ ಕಾನ್ಸ್‌ಟೇಬಲ್‌ಗಳು ಮಲಗಲು ಸಾಧ್ಯವಾಗದೆ, ಬೆಳಗಿನ ಪರೇಡ್‌ಗೆ ಹಾಜರಾಗದೆ ಪ್ರತಿಭಟನೆ ಆರಂಭಿಸಿದರು. ಈ ವರ್ಷದ ತರಬೇತಿಗೆ ಸಾಮಾನ್ಯಕ್ಕಿಂತ ಹೆಚ್ಚಿನ ಕಾನ್ಸ್‌ಟೇಬಲ್‌ಗಳು ಆಗಮಿಸಿದ್ದು ನೀರಿನ ಕೊರತೆ ಉಂಟಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೊವೊಂದರಲ್ಲಿ, “ಸೂಕ್ತ ವ್ಯವಸ್ಥೆ ಇಲ್ಲದಿದ್ದರೆ ನಮ್ಮನ್ನು ಏಕೆ ಕರೆದರು?” ಎಂದು ಮಹಿಳಾ ಕಾನ್ಸ್‌ಟೇಬಲ್‌ವೊಬ್ಬರು ಪ್ರಶ್ನಿಸಿದ್ದಾರೆ. ಗೋರಖ್‌ಪುರ ಜಿಲ್ಲಾಡಳಿತ, ಸ್ಥಳೀಯ ಪೊಲೀಸರು, ಮತ್ತು ವಿದ್ಯುತ್ ಇಲಾಖೆಯು ಶಿಬಿರದೊಂದಿಗೆ ಸಂಯೋಜನೆಯಿಂದ ಸಮಸ್ಯೆ ಬಗೆಹರಿಸಲು ಕಾರ್ಯನಿರ್ವಹಿಸುತ್ತಿವೆ. ನೀರಿನ ಸಂಗ್ರಹ ಸೌಲಭ್ಯವನ್ನು ಸುಧಾರಿಸಲು ಮತ್ತು ಶಿಬಿರಕ್ಕೆ ಹೆಚ್ಚಿನ ಸಾಮರ್ಥ್ಯದ ಜನರೇಟರ್ ಅಳವಡಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ತಾಂತ್ರಿಕ ದೋಷದಿಂದ ತಾತ್ಕಾಲಿಕ ನೀರಿನ ಕೊರತೆ ಉಂಟಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದ್ದು, ವಿದ್ಯುತ್ ಸಮಸ್ಯೆಯನ್ನು ಚರ್ಚೆಯ ಬಳಿಕ ತಕ್ಷಣವೇ ಬಗೆಹರಿಸಲಾಗಿದೆ ಎಂದು ಕಮಾಂಡೆಂಟ್ ಕುಮಾರ್ ತಿಳಿಸಿದ್ದಾರೆ.








