ಮಧುಗಿರಿ
ನೀವುಗಳು ಅಧಿಕಾರ ನೀಡುವಂತಹ ಪುಣ್ಯದ ಕೆಲಸದಲ್ಲಿ ಭಾಗಿಯಾದರೆ, ಅದರ ಲಾಭವನ್ನು ಪ್ರತಿಯೊಬ್ಬರಿಗೂ ತಲುಪಿಸುವ ಜವಾಬ್ದಾರಿ ನನ್ನದು ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ ಎನ್ ರಾಜಣ್ಣ ತಿಳಿಸಿದರು.
ಅವರು ತಾಲ್ಲೂಕು ಕಾಂಗ್ರೆಸ್ ಸಮಿತಿಯ ಎಸ್‌ಸಿ ಘಟಕದ ವತಿಯಿಂದ ದೊಡ್ಡೇರಿ ಹೋಬಳಿ ಕುರಿಹಳ್ಳಿ ಗ್ರಾಮದಲ್ಲಿ ಆದಿಜಾಂಬವ ಸಮುದಾಯದ ಸಮಾವೇಶದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಅಧಿಕಾರ ಅನುಭವಿಸಿದವರು ಬಡವರ ಪರವಾಗಿ ಕಾರ್ಯಕ್ರಮಗಳನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನ ಮಾಡಲಿಲ್ಲ.
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ಗಳಲ್ಲಿನ ಭರವಸೆಗಳು ಶ್ರೀ ಸಾಮಾನ್ಯ ಪರವಾಗಿದ್ದು ಭರವಸೆಗಳ ಈಡೇರಿಕೆಗಾಗಿ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ನಿಮ್ಮದು. ಕಾಂಗ್ರೆಸ್ ಸರಕಾರವು ಜನಪರವಾಗಿದ್ದು ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಮೂಲಕ ಸಮುದಾಯವರಿಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿಕೊಟ್ಟು, ಅವರುಗಳ ಕಲ್ಯಾಣಕ್ಕೆ ಶ್ರಮಿಸಿ, ಎಲ್ಲಾ ಸಮುದಾಯಗಳ ರೈತರ ಸಾಲ ಮನ್ನಾ ಮಾಡಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ.
ಕಾಂಗ್ರೆಸ್ ಪಕ್ಷದ ಚಿಂತನೆಯಾದ ನರೇಗಾ ಯೋಜನೆಯ ಮೂಲಕ ಕೂಲಿ ಕಾರ್ಮಿಕರನ್ನು ಕಾಂಗ್ರೆಸ್ ಪಕ್ಷ ಕೈ ಹಿಡಿದಿದೆ. ರಾಜ್ಯದಲ್ಲಿ ಅಧಿಕಾರ ಅನುಭವಿಸಿದ ಜೆಡಿಎಸ್ ಪಕ್ಷದವರು ಬಡವರ ಪರವಾಗಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ನಿಮಗೆ ತಟ್ಟಿದ್ದು, ಬೆಲೆ ಏರಿಕೆಗೆ ಕಾರಣರಾದ ಬಿಜೆಪಿಯವರ ಬಗ್ಗೆ ನಾನು ಟೀಕಿಸಲು ಹೋಗುವುದಿಲ್ಲ. ಅವರ ಬಗ್ಗೆ ಈಗಾಗಲೆ ನಿಮಗೆ ಅರಿವಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹಾಗೂ ಆಸೆ ಆಮಿಷಗಳಿಗೆ ಒಳಗಾಗದೆ ಮೇ 10 ರಂದು ನಡೆಯಲಿರುವ ಚುನಾವಣೆಯಲ್ಲಿ ಕ್ರಮ ಸಂಖ್ಯೆ 3 ರ ಹಸ್ತದ ಗುರುತಿನ ಪರವಾಗಿ ಮತದಾನ ಮಾಡಬೇಕೆಂದು ಮನವಿ ಮಾಡಿದರು.
ಜಿ.ಪಂ ಮಾಜಿ ಸದಸ್ಯ ಚೌಡಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಮುಖಂಡರುಗಳಾದ ತುಂಗೋಟಿ ರಾಮಣ್ಣ, ಡಿ.ಟಿ ವೆಂಕಟೇಶ್, ಕೊಟ್ಟ ಶಂಕರ್, ದೊಡ್ಡೇರಿ ಕಣಿಮಯ್ಯ, ಜೀವಿಕ ಮಂಜು, ಸಣ್ಣರಾಮಣ್ಣ, ಸಿದ್ದಗಂಗಪ್ಪ, ಮುದ್ದರಾಜು, ಹನುಮಂತರಾಯಪ್ಪ, ಎಂ.ಎಂ ಮೂರ್ತಿ, ಜಾಕಿ, ಡಿ.ಕೆ.ಸುರೇಶ್, ಲಿಂಗಯ್ಯ, ಚಿಕ್ಕಮ್ಮ ಹಾಗೂ ಸಾಮಾಜಿಕ ಜಾಲತಾಣದ ಪದಾಧಿಕಾರಿಗಳು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಮುದಾಯದ ಮುಖಂಡರು ಇದ್ದರು.