ಮೈಸೂರು:
ರಾಜ್ಯದ ರೈತರಿಗೆ ಮೊದಲು ಆದ್ಯತೆ ನೀಡಿ, ಕಾವೇರಿ ಮತ್ತು ಕಬಿನಿ ಅಚ್ಚುಕಟ್ಟು ಪ್ರದೇಶದಲ್ಲಿನ ಬೆಳೆಗಳಿಗೆ ಆದ್ಯತೆ ಮೇರೆಗೆ ನೀರು ಹರಿಸಿ ಎಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಡಕ್ ಸೂಚನೆ ನೀಡಿದ್ದಾರೆ.
ನಿನ್ನೆಯಷ್ಟೇ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ 5,000 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಿದೆ.
ಆದೇಶ ಬೆನ್ನಲ್ಲೇ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿಗಳು, ನೀರು ಬಿಡುಗಡೆ ಕುರಿತು ಸೂಚನೆ ನೀಡಿದರು. ಸಭೆಯಲ್ಲಿ ಸಿಡಬ್ಲ್ಯುಆರ್‌ಸಿ ನಿರ್ಧಾರದ ಬಗ್ಗೆ ಮುಖ್ಯಮಂತ್ರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.
ನಮ್ಮ ರೈತರಿಗೆ ಅನ್ಯಾಯ ಮಾಡಿ ಕಾವೇರಿ ನೀರನ್ನು ತಮಿಳುನಾಡಿಗೆ ನೀರು ಕೊಡಬೇಕು ಎನ್ನುವ ಸೂಚನೆ ಯಾವ ಆದೇಶದಲ್ಲೂ ಇಲ್ಲ. ನಮ್ಮ ಬೆಳೆ ಮತ್ತು ಕುಡಿಯುವ ನೀರಿನ ರಕ್ಷಣೆ ಮಾಡಿಕೊಳ್ಳಬೇಕು. ಅದಕ್ಕಾಗಿ ಈ ಬಗ್ಗೆ ರೆಗ್ಯುಲೇಷನ್ ಕಮಿಟಿ ಸಭೆ ನಡೆಸಿ ಸಂಕಷ್ಟ ಪರಿಹಾರ ಸೂತ್ರ ಕಂಡುಕೊಳ್ಳಬೇಕಿದೆ, ನೀರಾವರಿ ಇಲಾಖೆ ಅಧಿಕಾರಿಗಳು ಆನ್ ಮತ್ತು ಆಫ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಬದಲು ಖಾರಿಫ್ ಬೆಳೆಗಳಿಗೆ ನೀರು ನೀಡಬೇಕಿತ್ತು. “ಆನ್ ಮತ್ತು ಆಫ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ನಿಮಗೆ ಯಾರು ಹೇಳಿದರು? ಸಮಸ್ಯೆ ಇದೆ ಎಂದು ಏಕೆ ಭಾವಿಸಬೇಕು’ ಎಂದು ನೀರಾವರಿ ಇಲಾಖೆ ಮುಖ್ಯ ಎಂಜಿನಿಯರ್ ವೆಂಕಟೇಶ್ ಅವರನ್ನು ಪ್ರಶ್ನಿಸಿದರು.
ತಮಿಳುನಾಡು ಕುರುವಾಯಿ ಬೆಳೆ ಬೆಳೆಯುವ ಪ್ರದೇಶವನ್ನು 1.8 ಲಕ್ಷ ಹೆಕ್ಟೇರ್‌ನಿಂದ 3 ಲಕ್ಷ ಹೆಕ್ಟೇರ್‌ಗೆ ಹೆಚ್ಚಿಸಿದೆ. ಮೆಟ್ಟೂರು ಜಲಾಶಯದಲ್ಲಿ 63 ಟಿಎಂಸಿ ಅಡಿ ನೀರಿದೆ. ಸಾಮಾನ್ಯ ವರ್ಷದಲ್ಲಿ 177 ಟಿಎಂಸಿ ಅಡಿ ನೀರು ಬಿಡುವಂತೆ ಕಾವೇರಿ ನ್ಯಾಯಾಧಿಕರಣ ರಾಜ್ಯಕ್ಕೆ ನಿರ್ದೇಶನ ನೀಡಿದ್ದರೂ ರಾಜ್ಯದ 83 ಟಿಎಂಸಿ ಅಡಿ ಬೇಡಿಕೆಗೆ ವಿರುದ್ಧವಾಗಿ 30 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಲಾಗಿದೆ. ಈ ಸಮಸ್ಯೆಗಳಿಗೆಲ್ಲಾ ಮೇಕೆದಾಟು ಯೋಜನೆ ನಿರ್ಮಾಣವೊಂದೇ ಪರಿಹಾರವಾಗಿದೆ ಎಂದು ಹೇಳಿದರು.
ಇದೇ ವೇಳೆ ಸಂಕಷ್ಟದ ವರ್ಷಗಳಲ್ಲಿ ನೆರವಾಗುವ ಮತ್ತು ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸುವ ಜಲಾಶಯಕ್ಕೆ ತಮಿಳುನಾಡು ವಿರೋಧ ವ್ಯಕ್ತಪಡಿಸಿರುವುದಕ್ಕೆ ಮುಖ್ಯಮಂತ್ರಿಗಳು ವಿಷಾದ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ತಮಿಳುನಾಡಿಗೆ 83 ಟಿಎಂಸಿ ಅಡಿ ನೀರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಇದು ಜಲಾಶಯಗಳನ್ನು ಖಾಲಿ ಮಾಡುತ್ತದೆ, ಕುಡಿಯುವ ನೀರಿಗೆ ತೊಂದರೆ ಉಂಟುಮಾಡುತ್ತದೆ. “ಕೆಆರ್‌ಎಸ್ ಅಣೆಕಟ್ಟಿನಲ್ಲಿ ನೀರಿನ ಮಟ್ಟ 101.83 ಅಡಿಗಳಷ್ಟಿದ್ದು, ಸುಪ್ರೀಂ ಕೋರ್ಟ್ ಕಟ್ಟುನಿಟ್ಟಾದ ಸಂಕಷ್ಟ ಸೂತ್ರವನ್ನು ರೂಪಿಸಬೇಕು. ಕಾವೇರಿ ಜಲಾನಯನ ಪ್ರದೇಶದ ರೈತರನ್ನು ರಕ್ಷಿಸಬೇಕು.
ನೀರಾವರಿ ಇಲಾಖೆ ಅಧಿಕಾರಿಗಳು ಇತರೆ ಇಲಾಖೆಗಳೊಂದಿಗೆ ಕೈಜೋಡಿಸಿ ಕೆಲಸ ಮಾಡಿ, ನೀರಿನ ವಿವೇಚನಾಯುಕ್ತ ಬಳಕೆ ಬಗ್ಗೆ ರೈತರಿಗೆ ತಿಳುವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಸಚಿವ ಎಚ್.ಸಿ.ಮಹದೇವಪ್ಪ ಅವರು ಮಾತನಾಡಿ, ನೀರಾವರಿ ಸಮಾಲೋಚನಾ ಸಮಿತಿಯ ತೀರ್ಮಾನದಂತೆ ನಡೆದುಕೊಂಡು ಕಬಿನಿ ಹಾಗೂ ಕೆಆರ್‌ಎಸ್ ಭಾಗದ ಬೆಳೆಗಳ ಉಳಿಸಲು ನೀರು ಬಿಡುವಂತೆ ನೋಡಿಕೊಳ್ಳಬೇಕೆಂದು ಎಂದು ಮುಖ್ಯ ಎಂಜಿನಿಯರ್ ವೆಂಕಟೇಶ್ ಅವರಿಗೆ ತಿಳಿಸಿದರು.
ಈ ವೇಳೆ ಮಾತನಾಡಿದ ವೆಂಕಟೇಶ್ ಅವರು, ಮುಂದಿನ ಎರಡು ವಾರಗಳಲ್ಲಿ ಮಳೆಯಾದರೆ, 15-20 ಟಿಎಂಸಿ ಅಡಿ ನೀರು ಶೇಖರಣೆಯಾದರೆ ಡಿಸೆಂಬರ್‌ವರೆಗೆ ಬೆಳೆಗಳಿಗೆ ನೀರು ಬಿಡಬಹುದು ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ