ಬೆಳಗಾವಿ:
ನ್ಯಾಯಾಲಯದ ಆದೇಶದಂತೆ ಗೋವಾದಲ್ಲಿ ಕನ್ನಡಿಗರ ಮನೆಗಳನ್ನು ತೆರವು ಮಾಡಲಾಗುತ್ತಿದೆ ಹೊರತು ಸರ್ಕಾರದ ಇರಾದೆ ಇಲ್ಲ. ನಿರಾಶ್ರಿತರಿಗೆ ಪ್ರತ್ಯೇಕ ಜಾಗ ಒದಗಿಸಿ, ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಗುರುವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ಆದೇಶ ಪಾಲನೆ ಸರ್ಕಾರದ ಕರ್ತವ್ಯ. ನಿರಾಶ್ರಿತ ಕನ್ನಡಿಗರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನೊಂದಿಗೆ ನೇರ ಮಾತನಾಡಿಲ್ಲ. ‘ಎಕ್ಸ್’ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದು ಗಮನಿಸಿದ್ದೇನೆಂದು ಹೇಳಿದರು.
ಬಳಿಕ ಪ್ರಚಾರ ರ್‍ಯಾಲಿಯಲ್ಲಿ ಮಾತನಾಡಿದ ಅವರು,‘ಸುಳ್ಳು ಹೇಳುವ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್. ಅದು ಜನರ ಭರವಸೆ ಈಡೇರಿಸಲ್ಲ. ನುಡಿದಂತೆ ನಡೆಯಲ್ಲ. ಹೀಗಾಗಿ ಜನರಿಗೆ ಆ ಪಕ್ಷದ ಮೇಲೆ ವಿಶ್ವಾಸ ಇಲ್ಲ. ಅದು ಕುಟುಂಬ ರಾಜಕಾರಣದ ಪಕ್ಷ. ನಮ್ಮದು ರಾಷ್ಟ್ರೀಯ ವಾದದ ಪಕ್ಷ. 10 ವರ್ಷಗಳಲ್ಲಿ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ಸಾಧನೆಗಳನ್ನು ದೇಶದ ಜನ ನೋಡಿದ್ದಾರೆ. ಪ್ರಧಾನಿ ನುಡಿದಂತೆ ನಡೆದಿದ್ದಾರೆ. ದೇಶದ ವಿಕಾಸಕ್ಕೆ ಭದ್ರ ಅಡಿಪಾಯ ಹಾಕಿದ್ದಾರೆ. ರಾಜ್ಯದಲ್ಲಿ 28 ಸ್ಥಾನ ಗೆಲ್ಲುತ್ತೇವೆ ಎಂದು ತಿಳಿಸಿದರು.
ಗೋವಾದ ಸಂಗೋಲ್ಡಾ ಗ್ರಾಮದಲ್ಲಿ ಸ್ಥಳೀಯ ಕಮ್ಯುನಿಡೇಡ್ ಒಡೆತನದ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಸುಮಾರು 22 ಮನೆಗಳನ್ನು ನೆಲಸಮಗೊಳಿಸಲಾಗಿದ್ದು, ಘಟನೆಗೆ ಸಿಎಂ ಸಿದ್ದರಾಮಯ್ಯ ಅವರು ಕಳವಳ ವ್ಯಕ್ತಪಡಿಸಿದ್ದರು.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಅವರು, ಕನ್ನಡಿಗರಿಗೆ ಸೇರಿದ ಮನೆಗಳನ್ನು ಕೆಡವಿದ ಘಟನೆಯಿಂದ ತೀವ್ರ ಕಳವಳಗೊಂಡಿದ್ದೇನೆ. ಆ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವವರೆಗೆ ತೆರವು ಪ್ರಕ್ರಿಯೆಯನ್ನು ನಿಲ್ಲಿಸುವಂತೆ ನಾನು ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರಿಗೆ ಮನವಿ ಮಾಡುತ್ತೇನೆಂದು ಹೇಳಿದ್ದರು.