ಗೋವಾ:
ರಾಜ್ಯದಿಂದ 2 ಬಾಟಲ್‌ಗಿಂತ ಹೆಚ್ಚಿನ ಮದ್ಯವನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಲು ಸರ್ಕಾರ ಚಿಂತನೆ ನಡೆಸಿದೆ.
ಆದಾಯ ಕೊರತೆಯಿಂದ ಕಂಗೆಟ್ಟಿರುವ ಗೋವಾ ಸರ್ಕಾರ ಇಂತಹುದೊಂದು ಪ್ರಸ್ತಾವನೆಯನ್ನು ಮುಂದಿಟ್ಟಿದ್ದು, ಶೀಘ್ರದಲ್ಲಿಯೇ ಈ ಕುರಿತಂತೆ ನಿರ್ಣಯ ಕೈಗೊಳ್ಳಲಿದೆ. ಆ ಮೂಲಕ ಕದ್ದು ಮುಚ್ಚಿ ಹೆಚ್ಚಿನ ಮದ್ಯದ ಬಾಟೆಲ್ ಗಳನ್ನು ಗಡಿ ದಾಟಿಸುವ ಮದ್ಯ ಪ್ರಿಯರು ಇನ್ನು ಮುಂದೆ ರಾಜಾರೋಷವಾಗಿಯೇ ಅಧಿಕೃತವಾಗಿಯೇ ಎರಡಕ್ಕಿಂತಲೂ ಹೆಚ್ಚಿನ ಮದ್ಯದ ಬಾಟೆಲ್‌ಗಳನ್ನು ಇತರೆ ರಾಜ್ಯಗಳಿಗೆ ಕೊಂಡೊಯ್ಯಬಹುದಾಗಿದೆ.
ಇಲ್ಲಿಯ ವರೆಗೂ ಗೋವಾದಲ್ಲಿ ಮಾರುವ ಮದ್ಯವನ್ನು ಡಿಯು ಮತ್ತು ಡಮನ್ ಕೇಂದ್ರಾಡಳಿತ ಪ್ರದೇಶಗಳಿಗೆ ಬಿಟ್ಟರೆ ಬೇರೆ ರಾಜ್ಯಗಳಿಗೆ ಸಾಗಿಸುವಂತಿರಲಿಲ್ಲ. ಆದರೆ, ಪ್ರಸ್ತುತ ಕಾನೂನು ಎಷ್ಟೇ ಬಿಗಿಯಾಗಿದ್ದರೂ ಕೆಲವು ಪ್ರವಾಸಿಗರು ಚೆಕ್ ಪೋಸ್ಟ್‌ಗಳಲ್ಲಿ ಲಂಚ ನೀಡಿಯಾದರೂ, ಹೆಚ್ಚಿನ ಮದ್ಯವನ್ನು ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದಾರೆ. ಇಂತಹ ಪ್ರವಾಸಿಗರಿಂದ ಆಗುವ ಲಾಭವನ್ನು ತಾನೇ ಪಡೆಯಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.
ಈ ಬಗ್ಗೆ ಗೋವಾ ವಿಧಾನಸಭೆಯಲ್ಲಿ ಸಿಎಂ ಪ್ರಮೋದ್ ಸಾವಂತ್ ಅವರು ಮಾತನಾಡಿದ್ದು, ತಾವು ನೆರೆಯ ರಾಜ್ಯಗಳ ಸರ್ಕಾರದೊಂದಿಗೆ ಈ ಕುರಿತು ಚರ್ಚೆ ಮಾಡಲು ಸಿದ್ಧ ಎಂದು ಹೇಳಿದ್ದಾರೆ.
ಗೋವಾ ಪ್ರವಾಸ ಮಾಡಲು ಹೊರಟಿರುವ ಪ್ರವಾಸಿಗರು ಮತ್ತು ಮದ್ಯ ಪ್ರಿಯರಿಗೆ ಇದು ಸಂತಸದ ಸುದ್ಧಿಯಾಗಿದ್ದು, ಇನ್ನು ಮುಂದೆ ಗೋವಾದಿಂದ ಹೆಚ್ಚು ಮದ್ಯದ ಬಾಟಲಿಗಳನ್ನು ಮನೆಗೊಯ್ಯಬಹುದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ