ಗೋಡೆ ಕುಸಿದು ಮೃತಪಟ್ಟ ಮಹಿಳೆ ಕುಟುಂಬಕ್ಕೆ 5 ಲಕ್ಷ ಪರಿಹಾರ

ಬೆಂಗಳೂರು:

     ರಾಜಧಾನಿಯಲ್ಲಿ ಭಾರಿ ಮಳೆಯಿಂದಾಗಿ  ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಈ ನಡುವೆ ವೈಟ್ ಫೀಲ್ಡ್​​ನ ಚನ್ನಸಂದ್ರದ ಸಮೀಪ ಕಟ್ಟಡದ ಗೋಡೆ ಕುಸಿದು ಮೃತಪಟ್ಟಿದ್ದ ಶಶಿಕಲಾ (35) ಅವರ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ಅವರು ಇದೀಗ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಬಿಬಿಎಂಪಿಯಿಂದ ಮೃತ ಮಹಿಳೆಗೆ ಪರಿಹಾರ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಳೆ ಹಾನಿ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಬೇಕಿತ್ತು. ಆದರೆ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸಿಟಿ ರೌಂಡ್ ರದ್ದುಗೊಳಿಸಿದ ಬಳಿಕ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಕಂಟ್ರೋಲ್ ರೂಮ್‌ಗೆ ತೆರಳಿ, ಮಳೆ ಹಾನಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

   ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ, ಭಾರಿ ಮಳೆಯಿಂದ ಸಂಚಾರ ದಟ್ಟಣೆ ಆಗುತ್ತದೆ ಎಂದು ಸಿಟಿ ರೌಂಡ್ಸ್ ರದ್ದು ಮಾಡಿದ್ದೇವೆ. ಬೆಂಗಳೂರಿನಲ್ಲಿ ತಗ್ಗು ಪ್ರದೇಶಗಳನ್ನು ಗುರುತಿಸಿದ್ದೇವೆ, ರಾಜಕಾಲುವೆ ಕೆಲಸ ಪ್ರಗತಿಯಲ್ಲಿದೆ. 166 ಸೂಕ್ಷ್ಮ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಕೆಲಸ ನಡೆಯುತ್ತಿದೆ. ನಾಡಿದ್ದು ಇಡೀ ದಿನ ಬೆಂಗಳೂರು ನಗರ ಪ್ರದಕ್ಷಿಣೆ ಮಾಡುತ್ತೇವೆ. ಎಲ್ಲೆಲ್ಲಿ ಅನಾಹುತ ಆಗಿದೆ ಅಲ್ಲೆಲ್ಲ ನಾವು ಭೇಟಿ ನೀಡುತ್ತೇವೆ. ಜನರಿಂದ ಸಮಸ್ಯೆ ಆಲಿಸಿ ಪರಿಹಾರಕ್ಕೆ ಸೂಚನೆ ಕೊಡುತ್ತೇವೆ.

Recent Articles

spot_img

Related Stories

Share via
Copy link