ಗೋಕರ್ಣ ಬೀಚ್‌ ನಲ್ಲಿ ಸ್ವಚ್ಛತಾ ಮಾಡಿದ ಆರಕ್ಷಕರು ….!

ಕಾರವಾರ:

    ಗೋಕರ್ಣ ಬೀಚ್ ನಲ್ಲಿ ಧೂಮಪಾನ-ಮದ್ಯಪಾನ ಮಾಡಿ ಮೋಜು-ಮಸ್ತಿ ಮಾಡಿದ ಬೆಂಗಳೂರು ಮೂಲದ ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯ ಮಾಡಿಸಿ ಕುಮಟಾ ಕರಾವಳಿ ಕಾವಲು ಪಡೆ ಪೊಲೀಸರು ಸ್ವಚ್ಛತಾ ಪಾಠ ಮಾಡಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.

    ಪ್ರವಾಸೋದ್ಯಮಕ್ಕೆ ಹೆಸರಾಗಿರುವ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ದೇಶ-ವಿದೇಶಿಗರನ್ನು ಸೆಳೆಯುತ್ತಿದ್ದು, ಇಲ್ಲಿನ ಕಡಲ ತೀರ ಸೌಂದರ್ಯ ಸವಿಯಲು ಹಲವು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಆದರೆ, ಕೆಲವರು ಇಲ್ಲಿ ಮೋಜು-ಮಸ್ತಿ ಮಾಡಿ ಸ್ಥಳೀಯ ವಾತಾವರಣ ಕೆಡಿಸುವ ಪ್ರಯತ್ನ ಮಾಡುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿದೆ.

    ಬೀಚ್ ನಲ್ಲಿ ಕೆಲ ಯುವಕರು ಮೋಜು-ಮಸ್ತಿ ಮಾಡುತ್ತಿರುವ ಕುರಿತು ಸ್ಥಳೀಯರು ಗೋಕರ್ಣ ಕರಾವಳಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ವಿದ್ಯಾರ್ಥಿಗಳನ್ನು ಠಾಣೆಗೆ ಕರೆದೊಯ್ದು, ವಿಚಾರಣೆ ನಡೆಸಿದ್ದಾರೆ.

    ವಿಚಾರಣೆ ವೇಳೆ ಬೆಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು (ಕಾಲೇಜಿನ ಹೆಸರು ಮತ್ತು ವಿದ್ಯಾರ್ಥಿಗಳ ಹೆಸರನ್ನು ಗೌಪ್ಯವಾಗಿಡಲಾಗಿದೆ) ಎಂದು ತಿಳಿದುಬಂದಿದೆ. ಈ ಯುವಕರು 36 ವಿದ್ಯಾರ್ಥಿಗಳು ಮತ್ತು ಅವರ ಪ್ರಾಂಶುಪಾಲರೊಂದಿಗೆ ಪ್ರವಾಸಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.

    ಈ ವಿಚಾರ ತಿಳಿದ ಪೊಲೀಸರು ಕಾಲೇಜಿನ ಪ್ರಾಂಶುಪಾಲರನ್ನು ವಿಚಾರಣೆಗೆ ಕರೆದಿದ್ದು, ವಿಚಾರಣೆ ವೇಳೆ ಪ್ರಾಂಶುಪಾಲರು ಕ್ಷಮೆಯಾಚಿಸಿ, ಈ ವಿಚಾರವನ್ನು ದೊಡ್ಡದು ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಒಪ್ಪಿದ ಪೊಲೀಸರು, ಬೀಚ್ ಸ್ವಚ್ಛಗೊಳಿಸಿ ಹೋಗುವತೆ ಸೂಚಿಸಿದ್ದಾರೆ.

    ಬಳಿಕ ಕರಾವಳಿ ಪೊಲೀಸ್ ಉಪನಿರೀಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಒಂದು ಗಂಟೆಗೂ ಹೆಚ್ಚು ಕಾಲ ಇಡೀ ಬೀಚ್ ಅನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಿದರು. ವಿದ್ಯಾರ್ಥಿಗಳು ಬೀಚ್ ನಲ್ಲಿ ಗಾಜಿನ ತುಂಡುಗಳು, ಬಿಯರ್ ಕ್ಯಾನ್ಗಳು, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಇತರ ಉತ್ಪನ್ನಗಳನ್ನು ತೆರವುಗೊಳಿಸಿ ಸ್ವಚ್ಚಗೊಳಿಸಿದ್ದಾರೆಂದು ತಿಳಿದುಬಂದಿದೆ.

    ಸುಮಾರು 50 ಕಿಲೋಗ್ರಾಂಗೂ ಹೆಚ್ಚು ತ್ಯಾಜ್ಯವನ್ನು ವಿದ್ಯಾರ್ಥಿಗಳು ತೆಗೆದಿದ್ದಾರೆಂದು ಗೋಕರ್ಣ ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರವಾಸಿ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವ ಮಹತ್ವವನ್ನು ಜನರು ವಿಶೇಷವಾಗಿ ಪ್ರವಾಸಿಗರು ಅರ್ಥಮಾಡಿಕೊಳ್ಳಬೇಕು. ಇನ್ನು ಮುಂದೆ ಈ ರೀತಿ ವರ್ತಿಸುವ ಪ್ರವಾಸಿಗರ ಕೈಯಿಂದಲೇ ಸ್ವಚ್ಛತಾ ಕಾರ್ಯ ಮಾಡಿಸುವ ಕೆಲಸ ಮಾಡಲಾಗುತ್ತದೆ ಎಂದು ಕರಾವಳಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap