ತುಮಕೂರು : ಗಾರೆ ಕೆಲಸಗಾರನ ಮಗನಿಗೆ 2 ಚಿನ್ನದ ಪದಕ!!

 ಹುಳಿಯಾರು :

      ತುಮಕೂರು ಜಿಲ್ಲೆಯ ಹುಳಿಯಾರು ಹೋಬಳಿಯ ಕೆ.ಸಿ.ಪಾಳ್ಯದ ಗಾರೆ ಕೆಲಸದವನ ಮಗ ತುಮಕೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಮೊದಲನ ರ್ಯಾಂಕ್ ಪಡೆದು 14 ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಎರಡು ಚಿನ್ನದ ಪದಕಗಳನ್ನು ಪಡೆದಿದ್ದಾರೆ.

      ಸಾಧನೆಗೆ ಬಡತನ, ಗ್ರಾಮೀಣ ಪ್ರದೇಶ ಎಂದ ಕೀಳರಿಮೆ ಅಡ್ಡಿ ಬರುವುದಿಲ್ಲ ಎನ್ನುವುದಕ್ಕೆ ಗಾರೆ ಕೆಲಸ ಮಾಡುವ ಕೆ.ಸಿ.ಪಾಳ್ಯದ ನಾಗರಾಜಯ್ಯ ಮತ್ತು ಮಂಜುಳ ಅವರ ಪುತ್ರ ಆರ್.ಎನ್.ಪ್ರಕಾಶ್ ಸಾಕ್ಷಿಯಾಗಿದ್ದಾರೆ. ತಂದೆ ನಾಗರಾಜಯ್ಯ ಅವರ ಗಾರೆ ಕೆಲಸದ ಆದಾಯದ ಜೊತೆಗೆ ತಾನೂ ಸಹ ಬಿಡುವಿನ ಸಂದರ್ಬದಲ್ಲಿ ಕೃಷಿ ಕೂಲಿ ಹಾಗೂ ಗಾರೆ ಕೆಲಸಕ್ಕೆ ಹೋಗಿ ಹಣ ಸಂಪಾದಿಸಿ ಓದಿ ಈ ಸಾಧನೆ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.

      ಪ್ರಾಥಮಿಕ ಶಿಕ್ಷಣದಿಂದ ಪಿಯುಸಿ ವರೆವಿಗೂ ಗ್ರಾಮೀಣ ಪ್ರದೇಶ ಮತ್ತು ಕನ್ನಡ ಮಾಧ್ಯಮ ಅದರಲ್ಲೂ ಸರ್ಕಾರಿ ಶಾಲೆಯಲ್ಲಿ ಓದಿದ್ದು ಪ್ರಕಾಶ್ ಅವರ ಮತ್ತೊಂದು ಹೆಗ್ಗಳಿಕೆಯಾಗಿದೆ. ಕಲಾಪದವಿಯನ್ನು ಚಿಕ್ಕನಾಯಕನಹಳ್ಳಿ ನವೋದಯ ಕಾಲೇಜಿನಲ್ಲಿ ಓದಿದ ಈತ ಪದವಿಯಲ್ಲೂ ಸಹ ವಿಶ್ವವಿದ್ಯಾನಿಲಯಕ್ಕೆ 3ನೇ ರ್ಯಾಂಕ್ ಗಳಿಸಿ ಕಾಲೇಜಿಗೆ ಮತ್ತು ತಾಲೂಕಿಗೆ ಕೀರ್ತಿ ತಂದಿದ್ದರು.

      ಮೊದಲೇ ಬಡತನ ಹಿನ್ನೆಲೆಯಿಂದ ಬಂದ ತನಗೆ ಸ್ವಾತಂತ್ರ್ಯ ಬಂದು ಆರೇಳು ದಶಕಗಳು ಕಳೆದಿದ್ದರೂ ದೇಶದಲ್ಲಿ ಇನ್ನೂ ಬಡತನ ತಾಂಡವವಾಡುತ್ತಿದ್ದು ಕಾಡುತ್ತಿತ್ತು. ಈ ಬಡತನ ಬಡಿದೋಡಿಸಲು ದೇಶದ ಆರ್ಥಿಕ ವ್ಯವಸ್ಥೆ ಅರಿಯಬೇಕು. ಮುಂದಿನ ಪೀಳಿಗೆಗೆ ಬಡತನ ಶಾಪವಾಗದಂತೆ ಅರ್ಥ ವ್ಯವಸ್ಥೆಗೆ ತನ್ನದೇಯಾದ ಕೊಡುಗೆ ಕೊಡಬೇಕು. ಹಾಗಾಗಿ ಅರ್ಥಶಾಸ್ತ್ರ ಆಯ್ಕೆ ಮಾಡಿ ಓದಿರುವುದಾಗಿ ಪ್ರಕಾಶ್ ತಿಳಿಸುತ್ತಾರೆ.

      ಇದರಲ್ಲೇ ಪಿಎಚ್‍ಡಿ ಮಾಡಬೇಕೆನ್ನುವ ಅದಮ್ಯ ಆಸೆ ಪ್ರಕಾಶ್ ಅವರಲ್ಲಿದ್ದರೂ ವಯಸ್ಸಾದ ತಂದೆ, ತಾಯಿ ಅವರನ್ನು ಸಾಕುವ ಹೊಣೆ ಸಹ ಇದೆ. ಹಾಗಾಗಿ ದುಡಿಯುವ ಅನಿವಾರ್ಯತೆಯಿದ್ದು ಹುಳಿಯಾರು ಪಿಯು ಕಾಲೇಜಿನಲ್ಲಿ ಪ್ರಸ್ತುತ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಆದರೂ ಅವಕಾಶ ಸಿಕ್ಕರೆ ಪಿಎಚ್‍ಡಿ ಮಾಡಿಯೇ ಸಿದ್ಧ ಎನ್ನುವ ಛಲ ಪ್ರಕಾಶ್ ಅವರದಾಗಿದೆ. ಒಟ್ಟಿನಲ್ಲಿ ಶೈಕ್ಷಣಿಕ ಸಾಧನೆಗೆ ಬಡತನ ಅಡ್ಡಿಯಾಗದು ಎನ್ನುವುದನ್ನು ಪ್ರಕಾಶ್ ತೋರಿಸಿಕೊಟ್ಟಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap