ಕರ್ನಾಟಕದ ಕಾಫಿಗೆ ಸಿಗಲಿದೆಯೇ ಚಿನ್ನದ ಬೆಲೆ?

ಸಕಲೇಶಪುರ

   ಕೋಲಾರ ಚಿನ್ನದ ಗಣಿಯ ನಂತರ ಇದೀಗ ಕರ್ನಾಟಕದ ಪಾಲಿಗೆ ಕಾಫಿ ಬೆಳೆಯೂ ಚಿನ್ನವಾಗಿ ಪರಿಣಮಿಸಲಿದೆ! ಅದಕ್ಕೆ ಬೇಕಾದ ಎಲ್ಲ ಅಗತ್ಯ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಭರವಸೆ ನೀಡಿದ್ದಾರೆ. ಇದರಿಂದ, ಕರ್ನಾಟಕದ ಕಾಫಿಗೂ ಚಿನ್ನದ ಬೆಲೆ ಬರಬಹುದೇ ಎಂಬ ನಿರೀಕ್ಷೆ ಗರಿಗೆದರಿದೆ. ಸಕಲೇಶಪುರದಲ್ಲಿ ಕಾಫಿ ಬೆಳೆಗಾರರ ​​ಒಕ್ಕೂಟ ಆಯೋಜಿಸಿದ್ದ ಕಾಫಿ ಬೆಳೆಗಾರರ ​​ಸಮಾವೇಶವನ್ನು ಉದ್ಘಾಟಿಸಿ ಅವರು ಸೋಮವಾರ ಮಾತನಾಡಿದ್ದ ವೇಳೆ ಈ ಭರವಸೆ ನೀಡಿದ್ದಾರೆ.

   ಕಾಫಿ ಅಭಿವೃದ್ಧಿಗಾಗಿ ಸ್ಟಾರ್ಟಪ್‌ಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ನಿರ್ಧರಿಸಲಾಗಿದೆ. ಬಾಳೆಹೊನ್ನೂರಿನಲ್ಲಿ ಕಾಫಿ ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದಕ್ಕೆ ಅಗತ್ಯ ಅನುದಾನ ನೀಡಲು ಕೇಂದ್ರ ಬದ್ಧವಾಗಿದೆ ಎಂದು ಪಿಯೂಷ್ ಗೋಯಲ್ ತಿಳಿಸಿದ್ದಾರೆ. 

   ಕಾಫಿ ಬೆಳೆಗಾರರಿಗೆ ಸಹಾಯಧನ ನೀಡಲು 100 ಕೋಟಿ ರೂ. ಹೆಚ್ಚುವರಿ ಅನುದಾನದ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು. ಈಗಾಗಲೇ ಸಲ್ಲಿಕೆಯಾಗಿರುವ 21,000 ಅರ್ಜಿಗಳಿಗೆ ಸಹಾಯಧನ ನೀಡಲಾಗುವುದು ಎಂದು ಗೋಯಲ್ ಮಾಹಿತಿ ನೀಡಿದ್ದಾರೆ.

   ಹಾಸನ ಪ್ರದೇಶದಲ್ಲಿ ಮಾನವ-ಪ್ರಾಣಿ ಸಂಘರ್ಷದ ಕುರಿತು ಮಾತನಾಡಿದ ಗೋಯಲ್, ಈ ಕುರಿತ ಅಧ್ಯಯನಕ್ಕೆ ಐಐಎಸ್‌ಸಿ ಬೆಂಗಳೂರು ಪ್ರೊಫೆಸರ್ ಸುರೇಂದ್ರ ವರ್ಮಾ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗುವುದು. ಸಮಿತಿ ವರದಿ ಆಧರಿಸಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ. 

   40 ವರ್ಷಗಳ ಬಳಿಕ ಪಿಯೂಷ್ ಗೋಯಲ್ ಅವರು ಸಕಲೇಶಪುರಕ್ಕೆ ಭೇಟಿ ನೀಡಿದ ಮೊದಲ ಕೇಂದ್ರ ಸಚಿವರಾಗಿದ್ದು, ಮುಂಬರುವ ಬಜೆಟ್​ನಲ್ಲಿ ಕಾಫಿ ಬೆಳೆಗಾರರ ​​ಹಿತ ಕಾಪಾಡಲು ಈಗಾಗಲೇ ಯೋಜನೆ ರೂಪಿಸಿದ್ದಾರೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ.

Recent Articles

spot_img

Related Stories

Share via
Copy link