ಫ್ರೆಸ್ನೋ:
ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಫ್ರೆಸ್ನೋ ನಗರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ, ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಕೆನಡಾ ಮೂಲದ ಭಯೋತ್ಪಾದಕ ಗೋಲ್ಡಿ ಬ್ರಾರ್ ಸಾವನ್ನಪ್ಪಿದ್ದಾರೆ ಎಂಬ ವರದಿಯನ್ನು ಅಮೆರಿಕ ಪೊಲೀಸರು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಫೇರ್‌ಮಾಂಟ್ ಮತ್ತು ಹಾಲ್ಟ್ ಅವೆನ್ಯೂಗಳಲ್ಲಿ ನಡೆದ ಶೂಟೌಟ್ ನಲ್ಲಿ ಹತ್ಯೆಯಾದ ವ್ಯಕ್ತಿಯನ್ನು 37 ವರ್ಷದ ಕ್ಸೇವಿಯರ್ ಗ್ಲಾಡ್ನಿ ಎಂದು ಫ್ರೆಸ್ನೋ ಪೊಲೀಸರು ಬುಧವಾರ ಗುರುತಿಸಿದ್ದಾರೆ.
ಭಾರತದಲ್ಲಿ ನಡೆದ ಸಿಧು ಮೂಸೆವಾಲಾ ಹತ್ಯೆಗೆ ಸಂಬಂಧಿಸಿದ ಪ್ರಕರಣಕ್ಕೂ ಈ ಘಟನೆಗೂ ಸಂಬಂಧವಿಲ್ಲ ಎಂದು ಪೊಲೀಸರು ಬುಧವಾರ ಹೇಳಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ಸಹವರ್ತಿ ಗೋಲ್ಡಿ ಬ್ರಾರ್ ನನ್ನು ಅಮೆರಿಕದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಬುಧವಾರ ಭಾರತದ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಇದು ಸುಳ್ಳು ಸುದ್ದಿ ಎಂದು ಅಮೆರಿಕ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಗುಂಡಿನ ದಾಳಿಯಲ್ಲಿ ಗೋಲ್ಡಿ ಬ್ರಾರ್ ಸಾವನ್ನಪ್ಪಿದ್ದಾರೆ ಎಂಬ ಆನ್‌ಲೈನ್ ಸುದ್ದಿಯು ಸಂಪೂರ್ಣವಾಗಿ ನಿಜವಲ್ಲ ಎಂದು ನಾವು ಖಚಿತಪಡಿಸುತ್ತೇವೆ ಎಂದು ಫ್ರೆಸ್ನೊ ಪೊಲೀಸ್ ಲೆಫ್ಟಿನೆಂಟ್ ವಿಲಿಯಂ ಜೆ. ಡೂಲಿ ಅವರು ಹೇಳಿದ್ದಾರೆ.