ಮುಂಬೈ:
ಬಹುನಿರೀಕ್ಷಿತ ಮಾರುತಿ ಸುಜುಕಿ ಸ್ವಿಫ್ಟ್ 2024 ಬಗ್ಗೆ ಆಗಾಗ ಸುದ್ದಿಗಳು ಕೇಳಿ ಬರುತ್ತಲೇ ಇದೆ. ಈ ಬಾರಿಯ ಸ್ವಿಫ್ಟ್‌ನಲ್ಲಿ ಹಲವಾರು ಬದಲಾವಣೆಗಳು ಕಾಣಲಿದೆ ಎಂಬ ಕಾರಣದಿಂದಾಗಿ ಕಾರು ಪ್ರೀಯರು ಹೊಸ ಸ್ವಿಫ್ಟ್‌ನ ಬರುವಿಕೆಗಾಗಿ ಕಾಯುತ್ತಲೇ ಇದ್ದಾರೆ. ಇದೀಗ ಮತ್ತೆ ಮಾರುತಿ ಸುಜುಕಿ ಸ್ವಿಫ್ಟ್ ಸದ್ದು ಮಾಡುತ್ತಿದೆ.
ಈ ಬಾರಿ ಮಾರುತಿ ಸುಜುಕಿ ಸ್ವಿಫ್ಟ್ ಸುದ್ದಿಯಾಗುತ್ತಿರುವುದು ಹೊಸ ವಿಷಯದಲ್ಲಿ. ಮಾಹಿತಿಗಳ ಪ್ರಕಾರ ಮಾರುತಿ ಸುಜುಕಿ ಸ್ವಿಫ್ಟ್ 2024 ಜೂನ್ ಅರ್ಧದಲ್ಲಿ ಭಾರತೀಯ ಮಾರುಕಟ್ಟೆಗೆ ಬರಲಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಈ ಕಾರು ಮಾರುಕಟ್ಟೆಗೆ ಯಾವಾಗ ಬರುತ್ತದೆ ಎಂದು ಕಾದು ಕುಳಿತಿದ್ದವರಿಗೆ ಉತ್ತರ ಸಿಕ್ಕಿದೆಯಾದರೂ, ಈ ಕಾರಿಗಾಗಿ ಕಾಯುವ ಅವಧಿ ಮಾತ್ರ ಇನ್ನೂ ಮುಂದಕ್ಕೆ ಹೋಗಿದೆ ಎನ್ನಬಹುದು.
ಮಾರುತಿ ಸುಜುಕಿಯ ನಾಲ್ಕನೇ ತಲೆಮಾರಿನ ಈ ಕಾರನ್ನು ಮೊದಲು ಕಂಪನಿ ಪ್ರದರ್ಶನಕ್ಕೆ ಇಟ್ಟದ್ದು 2024 ಜಪಾನ್ ಮೊಬಿಲಿಟಿ ಶೋನಲ್ಲಿ. ಸದ್ಯಕ್ಕೆ ಭಾರತೀಯ ರಸ್ತೆಗಳಲ್ಲಿ ಕಂಪನಿ ಈ ಕಾರಿನ ಟೆಸ್ಟ್‌ಗಳನ್ನು ನಡೆಸುತ್ತಿದೆ. ಮಾಹಿತಿಗಳ ಪ್ರಕಾರ ಇದರ ಹೊರಭಾಗದಲ್ಲಿ ಕೊಂಚ ಮಟ್ಟಿನ ಬದಲಾವಣೆ ಜೊತೆಗೆ, ಎಂಜಿನ್‌ನಲ್ಲಿ ಭಾರೀ ಬದಲಾವಣೆ ಕಂಡು ಬರಲಿದೆ ಎಂದು ತಿಳಿದು ಬಂದಿದೆ.
ಸುಜುಕಿ ಸ್ವಿಫ್ಟ್‌ನ ಮಾಹಿತಿಗಳನ್ನು ನೋಡುವುದಾದರೆ, ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್, ರೂ.5.99 ಲಕ್ಷದಿಂದ ರೂ.9.03 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್, ಮ್ಯಾನುವಲ್ ಹಾಗೂ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ . ರೂಪಾಂತರಗಳಿಗೆ ಅನುಗುಣವಾಗಿ 22.38 – 22.56 kmpl ಮೈಲೇಜ್ ನೀಡುತ್ತದೆ.
ಮಾರುತಿ ಸುಜುಕಿ 2024, ಹೈಬ್ರಿಡ್ ಎಂಜಿನ್ ನೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಈ ಮೂಲಕ ಈಗಿರುವ ಮಾರುತಿ ಸುಜುಕಿ ಸ್ವಿಫ್ಟ್‌ಗಿಂತಲೂ, ಅಧಿಕ ಮೈಲೇಜ್ ಮತ್ತು ಹೆಚ್ಚು ರಿಫೈನ್ ಆಗಿರುವ ಎಂಜಿನ್ ಈ ಕಾರಿನಲ್ಲಿ ಸಿಗಲಿದೆ ಎನ್ನಲಾಗುತ್ತಿದೆ. ಸಾಧಾರಣವಾಗಿ ಸ್ವಿಫ್ಟ್ ಉತ್ತಮ ಮೈಲೇಜ್ ನೀಡುತ್ತಿದೆಯಾದರೂ, ಹೈಬ್ರಿಡ್ ಎಂಜಿನ್ ಬಂದರೆ ಈ ಕಾರು ಏನಿಲ್ಲವೆಂದರೂ ಸುಮಾರು 35 ಕಿಮೀ ಮೈಲೇಜ್ ನೀಡಲಿದೆ ಎಂದು ಹೇಳಲಾಗುತ್ತಿದೆ.
1.2 – ಲೀಟರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹಾಗೂ ಇ – ಸಿವಿಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಗ್ರಾಹಕರಿಗೆ ಖರೀದಿಗೆ ಸಿಗುವ ಸಾಧ್ಯತೆಯಿದ್ದು, 30 – 35 kmpl ಮೈಲೇಜ್ ನೀಡಬಹುದು ಎನ್ನಲಾಗಿದೆ. ಮತ್ತೊಂದು, ನಾನ್ ಹೈಬ್ರಿಡ್ 1.2 – ಲೀಟರ್ 3 – ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೂ ಖರೀದಿದಾರಿಗೆ ಲಭ್ಯವಾಗಬಹುದು.
ನೂತನ ಸ್ವಿಫ್ಟ್, ಮರು – ವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್, ನವೀನವಾದ ಕಪ್ಪು ಬಣ್ಣದ ಗ್ರಿಲ್, ಆಕರ್ಷಕ ಎಲ್ಇಡಿ ಹೆಡ್‌ಲ್ಯಾಂಪ್, ಡ್ಯುಯಲ್ – ಟೋನ್ ವೀಲ್ಸ್ ಕೂಡ ಹೊಂದಿದೆ. ಇದನ್ನು ಜಾಗತಿಕವಾಗಿ ಪ್ರದರ್ಶಿಸಲಾದ ಮಾದರಿಯಲ್ಲಿ ನೋಡಬಹುದು. ಸುರಕ್ಷತೆಯ ಸಲುವಾಗಿ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ವೈಶಿಷ್ಟ್ಯದೊಂದಿಗೆ ಲಾಂಚ್ ಆಗಬಹುದು ಎಂದು ಹೇಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ