ಬೆಂಗಳೂರು:
ಬೆಂಗಳೂರಲ್ಲಿ ನೀರಿನ ಬಿಲ್ ಕಟ್ಟದೇ ಬಾಕಿ ಉಳಿಸಿಕೊಂಡ ಗ್ರಾಹಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ನೀರಿನ ಬಿಲ್ ಬಾಕಿ ಉಳಿಸಿಕೊಂಡ ಗ್ರಾಹಕರಿಗೆ ಒನ್ ಟೈಂ ಪಾವತಿಗೆ ಅವಕಾಶವನ್ನು ಸರ್ಕಾರ ಕಲ್ಪಿಸಿದ್ದು, ಬಡ್ಡಿ ದಂಡ, ಇತರೆ ಶುಲ್ಕ ಶೇ.100 ರಷ್ಟು ಮನ್ನಾ ಮಾಡುವುದಾಗಿ ತಿಳಿಸಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಗ್ರಾಹಕರು ನೀರಿನ ಬಾಕಿ ಅಸಲು ಮೊತ್ತವನ್ನು ಏಕಕಾಲದಲ್ಲಿ ಪಾವತಿಸಿದರೆ ಬಡ್ಡಿ, ದಂಡ ಮತ್ತು ಇತರೆ ಶುಲ್ಕಗಳನ್ನು ಶೇ.100ರಷ್ಟು ಮನ್ನಾ ಮಾಡುವ ಏಕಕಾಲಿಕ ತೀರುವಳಿ ಯೋಜನೆ(OTS)ಗೆ ಅನುಮೋದನೆ ನೀಡಲಾಗಿದೆ.
3 ತಿಂಗಳ ಅವಧಿಗೆ ಏಕಕಾಲಿಕ ತೀರುವಳಿ ಯೋಜನೆ ಜಾರಿ ಮಾಡಲು ತೀರ್ಮಾನ ಮಾಡಲಾಗಿದೆ. Bengaluru Water Supply Regulations, 1965ರ ನಿಯಮಾವಳಿಗಳನ್ನು ಸಡಿಲಿಸಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಗ್ರಾಹಕರು ಪಾವತಿಸಲು ಬಾಕಿಯಿರುವ ನೀರಿನ ಬಿಲ್ಲಿನ ಸಂಬಂಧ ಏಕಕಾಲಿಕ ಸೆಟಲ್‌ಮೆಂಟ್ ಯೋಜನೆಯನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ. ಫೆಬ್ರವರಿ 2025ರ ವರೆಗೆ ಗ್ರಾಹಕರು ಉಳಿಸಿಕೊಂಡಿರುವ ನೀರಿನ ಬಾಕಿ ಮೊತ್ತವು ಒಟ್ಟು 701.71 ಕೋಟಿ ರೂ.ಗಳಿದ್ದು, ಈ ಮೊತ್ತದಲ್ಲಿ ಅಸಲು ಮೊತ್ತವು 439.03 ಕೋಟಿ ರೂ.ಗಳು ಹಾಗೂ ಬಾಕಿಯಿರುವ ಬಡ್ಡಿ ಮೊತ್ತವು 262.68 ಕೋಟಿ ರೂ.ಗಳಾಗಿದೆ.
ಈ ಯೋಜನೆಗೆ 3 ತಿಂಗಳ ಕಾಲಮಿತಿ ನಿಗದಿಗೊಳಿಸಿ. ಏಕಕಾಲಿಕ ಸೆಟಲ್‌ಮೆಂಟ್ ಯೋಜನೆಯನ್ನು ಕಾರ್ಯಗತಗೊಳಿಸಿದಲ್ಲಿ ಗ್ರಾಹಕರಿಂದ ಬಾಕಿಯಿರುವ ನೀರಿನ ಅಸಲು ಬಿಲ್ಲಿನ ಮೊತ್ತವನ್ನು ಪಾವತಿಸಿಕೊಳ್ಳುವುದರಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಆರ್ಥಿಕ ಸಂಪನ್ಮೂಲ ಕ್ರೋಢಿಕರಿಸಬಹುದಾಗಿದ್ದು, ಸಾರ್ವಜನಿಕರಿಗೂ ಸಹ ಅಸಲು ಮೊತ್ತದ ಮೇಲಿನ ಬಡ್ಡಿ ಕಟ್ಟುವುದರಿಂದ ವಿನಾಯಿತಿ ದೊರಕಲಿದೆ.
ಇದೇ ವೇಳೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಅಂದಾಜು 100 ಕೋಟಿ ರೂ.ಗಳ ವೆಚ್ಚದಲ್ಲಿ ‘ಭೂಭರ್ತಿ ತಾಣಗಳ ಕಾರ್ಯಾಚರಣೆ ಮತ್ತು ನಿರ್ವಹಣೆ’ ಪ್ಯಾಕೇಜ್ ಕಾಮಗಾರಿಗಳನ್ನುಕೈಗೆತ್ತಿಕೊಳ್ಳಲು ಸಂಪುಟ ಅನುಮೋದನೆ ನೀಡಿದೆ.








