ಬೆಂಗಳೂರು
ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಬಿಪಿಎಲ್ ಕಾರ್ಡ್ ರದ್ದಾಗಿದ್ದಕ್ಕೆ ಮತ್ತು ಬಿಪಿಎಲ್ ಇದ್ದಿದ್ದನ್ನು ಎಪಿಎಲ್ಗೆ ಸೇರಿಸಿದ್ದಕ್ಕೆ ಜನರಿಂದ ಸರ್ಕಾರದ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು. ಸಾರ್ವಜನಿಕರ ವಿರೋಧದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ಪಡಿತರ ಚೀಟಿ ಪರಿಷ್ಕರಣೆ ಕೈಬಿಟ್ಟಿತ್ತು.
ಅಷ್ಟೇ ಅಲ್ಲದೆ, ಅರ್ಹತೆ ಇದ್ದರೂ ಬಿಪಿಎಲ್ ಕಾರ್ಡ್ನಿಂದ ವಂಚಿತರಾಗಿದ್ದವರಿಗೆ ಮರು ಪರಶೀಲನೆ ಭರವಸೆ ನೀಡಿತ್ತು. ಇದರಂತೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಆಹಾರ ಇಲಾಖೆ ಬಿಪಿಎಲ್ ಕಾರ್ಡ್ ಮರು ಪರಶೀಲನೆ ಮಾಡುತ್ತಿದೆ. ಅರ್ಹ ಫಲಾನುಭವಿಗಳ ಕಾರ್ಡ್‌ಗಳನ್ನು ಮತ್ತೆ ನೀಡಲು ಸರ್ಕಾರ ಮುಂದಾಗಿದೆ. ಆಧಾರ್, ಪ್ಯಾನ್ ಕಾರ್ಡ್, ಐಟಿ ರಶೀದಿ ಮುಂತಾದ ದಾಖಲೆಗಳ ಮೂಲಕ ಅರ್ಹತೆ ಪಡೆದವರು ಕಾರ್ಡ್‌ಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಿದೆ.
ಇನ್ನು ಬಿಪಿಎಲ್ ಕಾರ್ಡ್ ಮರು ಸ್ಥಾಪನೆಗೆ ಈ ಹಿಂದೆ ನವೆಂಬರ್ 25 ರವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ, ಎಪಿಎಲ್ ನಿಂದ ಬಿಪಿಎಲ್ಗೆ ಬದಲಾಯಿಸಲು ಅಧಿಕಾರಿಗಳಿಗೆ ಸಾಕಷ್ಟು ಕಾಲಾವಕಾಶ ಅಗತ್ಯವಿರುವ ಕಾರಣ ನವೆಂಬರ್ 28ರವರೆಗೆ ಅವಕಾಶ ನೀಡಲಾಗದೆ. ಈಗಾಗಲೇ ರಾಜ್ಯದಲ್ಲಿ ಶೇ 90 ರಷ್ಟು ಕಾರ್ಡ್‌ಗಳನ್ನು ಎಪಿಎಲ್ನಿಂದ ಬಿಪಿಎಲ್ ಮರುಸ್ಥಾಪನೆ ಮಾಡಲಾಗಿದೆ. ರಾಜಧಾನಿಯಲ್ಲಿ ಶೇ 95 ರಷ್ಟು ಬಿಪಿಎಲ್ ಕಾರ್ಡ್ ಮರುಸ್ಥಾಪನೆಯಾಗಿದೆ. ಉಳಿದ ಕಾರ್ಡ್ ಸರಿಪಡಿಸಲು ಇನ್ನೆರಡು ದಿನ ಕಾಲವಕಾಶ ಇದೆ.
ತೆರಿಗೆ ಪಾವತಿದಾರರ 1,06,152 ಬಿಪಿಎಲ್ ಕಾರ್ಡ್‌ಗಳನ್ನು ಕೂಡಾ ಸಸ್ಪೆಂಡ್ ಮಾಡಲಾಗಿತ್ತು. ಸದ್ಯ ಈ ಕಾರ್ಡ್‌ಗಳನ್ನು ಮರುಸ್ಥಾಪನೆ ಮಾಡಿದ್ದು, ನಂತರದ ಹಂತದಲ್ಲಿ ಆಹಾರ ಇಲಾಖೆ ಮರು ಪರಶೀಲನೆ ಮಾಡಲಿದೆ.
NIC ತಂತ್ರಾಂಶ ಎಕ್ಸಪರ್ಟ್ಗಳ ಜೊತೆ ಆಹಾರ ಇಲಾಖೆ ಸಭೆ ನಡೆಸಿದ್ದು, ಬಿಪಿಎಲ್ ಕಾರ್ಡ್ ಮರು ಪರಶೀಲನೆಗೆ ಇದ್ದ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿದೆ. ಜತೆಗೆ, ಮುಂದಿನ ತಿಂಗಳಿಂದ ಪಡಿತರ ನೀಡಲು ಬೇಕಾದ ಎಲ್ಲ ವವಸ್ಥೆಗಳನ್ನು ಮಾಡಿಕೊಂಡಿದೆ.ರದ್ದಾದ ಎಲ್ಲ ಬಿಪಿಎಲ್ ಕಾರ್ಡ್ಗಳ ಮರು ಪರಶೀಲನೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಅಮಾನತಿನಲ್ಲಿಟ್ಟಿರುವ ಪಡಿತರ ಚೀಟಿಗಳ ಮರುಸ್ಥಾಪನೆ ಕಾರ್ಯವನ್ನು ಮಾಡಲು ಜಂಟಿ ನಿರ್ದೇಶಕರು, ಉಪ ನಿರ್ದೇಶಕರ ಲಾಗಿನ್‌ನಲ್ಲಿ ಅವಕಾಶ ನೀಡಲಾಗಿದೆ.
ಬೆಂಗಳೂರಿನಲ್ಲಿ ರಾಜಾಜಿನಗರ ಐಆರ್‌ಐ, ಪಶ್ಚಿಮ ವಲಯ 4500 ಬಿಪಿಎಲ್ ಕಾರ್ಡ್ ಸಸ್ಪೆಂಡ್ ಮಾಡಲಾಗಿತ್ತು ಈಗ ಎಲ್ಲ ಕಾರ್ಡ್ ಮರುಸ್ಥಾಪನೆ ಮಾಡಲಾಗಿದೆ. ವೈಯಾಲಿಕಾವಲ್ನಲ್ಲಿ 2774 ಕಾರ್ಡ್ ಮರು ಪರಶೀಲನೆಯಾಗಿದೆ. ಬಸವನಗುಡಿ, ಉತ್ತರ ವಲಯ, ಮೆಜೆಸ್ಟಿಕ್ ಸಮೀಪದ ಆಹಾರ ಇಲಾಖೆ ಕೇಂದ್ರ ಕೆಂಗೇರಿ, ಬನಶಂಕರಿ, ಆರ್‌ಟಿ ನಗರ – ವಯ್ಯಾಲಿ ಕವಾಲ್ ಆಹಾರ ಇಲಾಖೆಯ ಕಚೇರಿ, ಯಲಹಂಕ ಆಹಾರ ನಾಗರಿಕ ಸರಬರಾಜು ಇಲಾಖೆಗಳಲ್ಲಿ ಎಲ್ಲ ಕಾರ್ಡ್‌ಗಳನ್ನು ಬಿಪಿಎಲ್ಗೆ ಮರು ಸ್ಥಾಪನೆ ಮಾಡಲಾಗಿದೆ. ಉಳಿದಂತೆ ರಾಜ್ಯದ ವಿವಿದೆಡೆ ಪ್ರದೇಶವಾರು ಕಚೇರಿಗಳಲ್ಲಿ ತಿದ್ದುಪಡಿ ಮಾಡಲಾಗುತ್ತಿದೆ.
ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಬಡವರಿಗೆ ತೊಂದರೆ ಆಗಿದ್ದರೆ, ಅಂತಹವರು ತಹಶೀಲ್ದಾರ್ ಗಮನಕ್ಕೆ ತರಲು ಸೂಚಿಸಲಾಗಿದೆ. ಅಂಥವರ ಸಮಸ್ಯೆಯನ್ನು ಒಂದು ವಾರದೊಳಗೆ ಬಗೆಹರಿಸುವಂತೆ ಸರ್ಕಾರ ಸೂಚಿಸಿದೆ. ಕೆಲವು ವಿಶೇಷ ಪ್ರಕರಣಗಳಲ್ಲಿ ಬಿಪಿಎಲ್ ಕಾರ್ಡ್ಗಳು ಎಪಿಎಲ್ಗೆ ಪರಿವರ್ತನೆಯಾಗಿದ್ದು, ಬಡವರು ಪರದಾಡುವಂತಾಗಿದೆ. ಹೀಗಾಗಿ ಸರ್ಕಾರ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದೆ.
ಒಟ್ಟಿನಲ್ಲಿ, ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿ ಉಳಿದ ಯಾವುದೇ ಬಡ ಕುಟುಂಬದವರ ಪಡಿತರ ಚೀಟಿ ರದ್ದಾಗಿದ್ದರೆ ತಕ್ಷಣವೇ ಹಿಂದಿರುಗಿಸಬೇಕಿದೆ. ಬಡ ಕುಟುಂಬಗಳ ಪಡಿತರ ಕಾರ್ಡ್‌ಗಳನ್ನು ವಿನಾ ಕಾರಣ ರದ್ದು ಮಾಡಿದರೆ ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದು, ಬಿಪಿಎಲ್ ಕಾರ್ಡ್ ಪರಿಶೀಲನೆಗೆ ಇನ್ನೆರಡೇ ದಿನ ಬಾಕಿ ಉಳಿದಿದೆ. ಮುಂದಿನ ತಿಂಗಳಿನಿಂದ ಅರ್ಹ ಫಲಾನುಭವಿಗಳಿಗೆ ರೇಷನ್ ಕೂಡಾ ಸಿಗಲಿದೆ.