ಬೆಂಗಳೂರು:
ಕೊನೆಗೂ ಕಿಚ್ಚ ಸುದೀಪ್ ಅಭಿಮಾನಿಗಳು ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ. 2022ರಲ್ಲಿ ತೆರೆಕಂಡ ಸ್ಟಾಂಡಲ್‌ವುಡ್‌ನ ʼವಿಕ್ರಾಂತ್ ರೋಣʼ ಚಿತ್ರದ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡಿದ್ದ ನಿರ್ದೇಶಕ ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್ ಮತ್ತೊಮ್ಮೆ ಜತೆಯಾಗಿದ್ದಾರೆ. ಈ ಹಿಂದೆಯೇ ಸುದೀಪ್ ಮತ್ತು ಅನೂಪ್ ಭಂಡಾರಿ ಕಾಂಬಿನೇಷನ್‌ನ ʼಬಿಲ್ಲ ರಂಗ ಭಾಷʼ ಚಿತ್ರವನ್ನು ಘೋಷಿಸಲಾಗಿತ್ತು. ಆದರೆ ಚಿತ್ರೀಕರಣ ಇನ್ನೂ ಆರಂಭವಾಗಿರಲಿಲ್ಲ. ಇದೀಗ ಸುದೀಪ್ ಈ ಸಿನಿಮಾದ ಮಹತ್ವದ ಅಪ್‌ಡೇಟ್ ಹಂಚಿಕೊಂಡಿದ್ದಾರೆ.
ಕಳೆದ 3 ವರ್ಷಗಳಿಂದಲೂ ʼಬಿಲ್ಲ ರಂಗ ಭಾಷʼ ಚಿತ್ರದ ತಯಾರಿ ನಡೆಯುತ್ತಿದೆ. ವಿಭಿನ್ನವಾಗಿ ಸುದೀಪ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅದಕ್ಕಾಗಿ ಸಾಕಷ್ಟು ಸಿದ್ಧತೆ ಕೈಗೊಂಡಿದ್ದಾರೆ. ಜಿಮ್‌ನಲ್ಲಿ ಬೆವರು ಹರಿಸಿ ಫಿಟ್ ಆಗುತ್ತಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡ ಅವರು, ಏ. 16ರಂದು ಸಿನಿಮಾದ ಮುಹೂರ್ತ ನಡೆಯುವುದಾಗಿ ತಿಳಿಸಿದ್ದಾರೆ. ಆ ಮೂಲಕ ಕಾತುರದಿಂದ ಕಾಯುತ್ತಿದ್ದ ಫ್ಯಾನ್ಸ್‌ಗೆ ಬಿಗ್ ಅಪ್‌ಡೇಟ್ ನೀಡಿದ್ದಾರೆ.
ಕಿಚ್ಚ ಸುದೀಪ್ ಎಕ್ಸ್‌ನಲ್ಲಿ ಪೋಸ್ಟ್ ಶೇರ್ ಮಾಡಿದ್ದು, ಅದರಲ್ಲಿ ‘ʼಏ. 16ಕ್ಕೆ ಏನಾಗಲಿದೆ ಎಂದು ಹಲವರು ಪ್ರಶ್ನೆ ಮಾಡುತ್ತಿದ್ದೀರ. ಆ ದಿನ ನನ್ನ ‘ಬಿಲ್ಲ ರಂಗ ಭಾಷಾ’ ಸಿನಿಮಾ ಸೆಟ್ಟೇರಲಿದೆ. ಸಿನಿಮಾದ ಸೆಟ್ಟು, ಇತರ ಪಾತ್ರವರ್ಗ ಸೇರಿದಂತೆ ಇನ್ನೂ ಹಲವು ಮಾಹಿತಿ ಮುಂದಿನ ದಿನಗಳಲ್ಲಿ ಹೊರಬೀಳಲಿದೆʼʼ ಎಂದಿದ್ದಾರೆ. ಈ ಹಿಂದೆ ಸುದೀಪ್ ಏ. 16ರಂದು ಸರ್‌ಪ್ರೈಸ್ ನೀಡುವುದಾಗಿ ತಿಳಿಸಿ ಕುತೂಹಲ ಮೂಡಿಸಿದ್ದರು. ಇದೀಗ ಅವರು ತಾವೇ ಸೃಷ್ಟಿಸಿದ್ದ ಕುತೂಹಲವನ್ನು ಅಂತ್ಯಗೊಳಿಸಿದ್ದಾರೆ.
ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇರಲಿದೆ. ಯಾರೆಲ್ಲ ನಟಿಸಲಿದ್ದಾರೆ ಎನ್ನುವ ಕುತೂಹಲಕ್ಕೆ ಇನ್ನು 6 ದಿನಗಳಲ್ಲಿ ಉತ್ತರ ಸಿಗಲಿದೆ. ಈ ಹಿಂದೆ ಚಿತ್ರದ ಬಗ್ಗೆ ಮಾತನಾಡಿದ್ದ ಅನೂಪ್ ಭಂಡಾರಿ, ಹೊಸ ರೀತಿಯಲ್ಲಿ ಕಟ್ಟಿಕೊಡುವುದಾಗಿ ತಿಳಿಸಿದ್ದರು. ಈ ಹಿಂದಿನ ತಮ್ಮ ಸಿನಿಮಾದ ಯಾವುದೇ ಛಾಯೆ ಇದರಲ್ಲಿ ಇರುವುದಿಲ್ಲ, ಸಂಪೂರ್ಣ ಮಾಸ್ ಶೈಲಿಯಲ್ಲಿ, ಹಾಲಿವುಡ್ ಮಾದರಿಯಲ್ಲಿ ಮೂಡಿ ಬರಲಿದೆ ಎಂದು ತಿಳಿಸಿ ನಿರೀಕ್ಷೆ ಹೆಚ್ಚಿಸಿದ್ದರು.
ವಿಶೇಷ ಎಂದರೆ ಈ ಚಿತ್ರದ ಕಥೆ ಭವಿಷ್ಯದಲ್ಲಿ ನಡೆಯಲಿದೆಯಂತೆ. ಅಂದರೆ 185 ವರ್ಷಗಳ ಬಳಿಕ ಏನಾಗಲಿದೆ ಎನ್ನುವುದನ್ನು ಕಾಲ್ಪನಿಕವಾಗಿ ಅನೂಪ್ ತಿಳಿಸಲಿದ್ದಾರಂತೆ. ಈ ಮಾದರಿಯಲ್ಲಿ ಕಳೆದ ವರ್ಷ ಮೂಡಿ ಬಂದ ಟಾಲಿವುಡ್‌ನ ʼಕಲ್ಕಿ 2898ʼ ಎಡಿ ಚಿತ್ರ ಸೂಪರ್ ಹಿಟ್ ಎನಿಸಿಕೊಂಡಿತ್ತು. ಇದೀಗ ಅನೂಪ್ ಭಂಡಾರಿ ಭವಿಷ್ಯತ್‌ನ ಪ್ರಪಂಚವನ್ನು ಯಾವ ರೀತಿ ಕಟ್ಟಿಕೊಡಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.
ಕಳೆದ ವರ್ಷಾಂತ್ಯದಲ್ಲಿ ತೆರೆಕಂಡ ಸುದೀಪ್ ಅಭಿನಯದ ʼಮ್ಯಾಕ್ಸ್ʼ ಹಿಟ್ ಆಗಿದ್ದು, ʼಬಿಲ್ಲ ರಂಗ ಭಾಷ’ ಮೂಲಕ ಮತ್ತೊಂದು ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ.
