ಗೂಗಲ್ ಮ್ಯಾಪ್ ಎಡವಟ್ಟು- 40 ಅಡಿ ಎತ್ತರದ ಬ್ರಿಡ್ಜ್ ನಿಂದ ಕೆಳಗೆ ಬಿದ್ದ ಕಾರು

ಇಂಡೋನೇಷ್ಯಾ:

   ಗೂಗಲ್‌ ಮ್ಯಾಪ್‌ ಎಷ್ಟು ಉಪಕಾರಿಯೋ, ಅಷ್ಟೇ ಅಪಾಯಕಾರಿ, ಬಹಳಷ್ಟು ಜನರು ತಮ್ಮ ಪ್ರಯಾಣಕ್ಕಾಗಿ ಈ ಆ್ಯಪ್ ಬಳಸುತ್ತಾರೆ. ಆದ್ರೆ ಇದರಿಂದ ಎಷ್ಟೋ ಜನ ಅಪಾಯಕ್ಕೆ ಒಳಗಾಗಿದ್ದು ಇದೆ. ಇದೀಗ ಇಂಥಹುದೇ ಮತ್ತೊಂದು ಘಟನೆ ವರದಿಯಾಗಿದ್ದು ಗೂಗಲ್ ಮ್ಯಾಪ್  ತೋರಿಸಿದ ಶಾರ್ಟ್​ಕಟ್​ ಮಾರ್ಗವನ್ನು ನಂಬಿ ವ್ಯಕ್ತಿಯೊಬ್ಬ ಕಾರು ಸಮೇತ ನಿರ್ಮಾಣ ಹಂತದ ಬ್ರಿಡ್ಜ್ ನಿಂದ ಕೆಳಗೆ ಬಿದ್ದಿರುವ ಘಟನೆ ನಡೆದಿದೆ. ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದ್ದು ಕಾರು ಚಾಲಕನು ಸುಮಾರು 40 ಅಡಿ ಮೇಲಿನ ಸೇತುವೆಯಿಂದ ಕಾರಿನ ಸಮೇತ ಕೆಳಗೆ ಬಿದ್ದಿದ್ದಾನೆ. ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಸದ್ಯ ಈ ಭಯಾನಕ ದೃಶ್ಯವು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ.

    ರೂಡಿ ಹೆರು ಕೊಮಾಂಡೊನೊ ಎನ್ನುವ 61 ವರ್ಷದ ವ್ಯಕ್ತಿಯೊಬ್ಬರು ‌ತನ್ನ‌ ಸ್ನೇಹಿತನ ಮನೆಗೆ ಗೂಗಲ್ ಮ್ಯಾಪ್ ನಂಬಿ ಕೊಂಡು ಪ್ರಯಾಣ ಮಾಡಿದ್ದಾರೆ. ಗೂಗಲ್ ಮ್ಯಾಪ್ ನ ಡೈರಕ್ಷನ್ ಗಳಂತೆ ಸಾಗಿ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರ್ಮಾಣ ಹಂತದಲ್ಲಿದ್ದ ಫ್ಲೈಓವರ್‌ ನ ಮೇಲೆ ಕಾರು ಚಲಾಯಿಸಿ ಸುಮಾರು 40 ಅಡಿ ಮೇಲಿನ ಸೇತುವೆಯಿಂದ ಕಾರಿನ ಸಮೇತ ಕೆಳಗೆ ಬಿದ್ದಿದ್ದಾರೆ. ಬೆಳಗಿನ ಜಾವದಲ್ಲಿ ಜಿ ಪಿಎಸ್ ಫಾಲೋ ಮಾಡುತ್ತಾ ಸಾಗುವ ವೇಳೆ ಈ ಘಟನೆ ನಡೆದಿದ್ದು ಅದೃಷ್ಟವಶಾತ್ ಜೀವಕ್ಕೆ ಯಾವುದೇ‌‌ ಹಾನಿಯಾಗದೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. 

   ಕಾರು ನಿರ್ಮಾಣ ಹಂತದ ಬ್ರಿಡ್ಜ್ ನಿಂದ 40 ಅಡಿ ಎತ್ತರದಿಂದ ಕೆಳಗೆ ಬಿದ್ದಿದೆ. ವ್ಯಕ್ತಿ ತನ್ನ BMW ಕಾರಿನ ಡ್ಯಾಶ್‌ ಬೋರ್ಡ್‌ನಲ್ಲಿ ಅಳವಡಿಸಲಾಗಿದ್ದ ನ್ಯಾವಿಗೇಷನ್ ಅಪ್ಲಿಕೇಶನ್‌ನ ಮ್ಯಾಪ್ ನೋಡುತ್ತಾ ‌ಡ್ರೈವಿಂಗ್ ಮಾಡುತ್ತಿದ್ದ. ಈ ವೇಳೆ ಅಪೂರ್ಣ ಫ್ಲೈಓವರ್‌ ನ ಮೇಲೆ ಕಾರು ಚಲಾಯಿಸಿ ಅಲ್ಲಿಂದ ಕೆಳಗೆ ಬಿದ್ದಿದ್ದಾರೆ. ಈ ಭಯಾನಕ ದೃಶ್ಯವು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರೊಬ್ಬರು ಇಂತಹ ಅಪಾಯ ತಪ್ಪಿಸಲು ಈ ಸ್ಥಳದಲ್ಲಿ ಎಚ್ಚರಿಕೆ ಫಲಕವನ್ನು ಅಳವಡಿಸುವುದು ಸೂಕ್ತ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊ ಬ್ಬರು ಕಾರು ಬಿದ್ದಿರುವ ದೃಶ್ಯವೇ ಭಯಾನಕ ವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. 

   ಈ‌‌ ರೀತಿ ಗೂಗಲ್ ಮ್ಯಾಪ್ ಬಳಸಿ ಪ್ರಯಾಣಿಕರು ಅನಾಹುತಕ್ಕೆ ಸಿಲುಕಿರುವ ಪ್ರಕರಣಗಳು ಈ ಹಿಂದೆಯೂ ಹಲವಾರು ಬಾರಿ‌ ನಡೆದಿತ್ತು. ಮೊನ್ನೆಯಷ್ಟೇ ಉತ್ತರ ಕೇರಳದ ನಿಲಂಬೂರಿನಲ್ಲಿ ಐದು ಮಂದಿ ಯುವಕರು‌ ನ್ಯಾವಿಗೇಷನ್ ಅಪ್ಲಿಕೇಶನ್ ಬಳಸಿ ಭಾರೀ ಮಳೆಯ ನಡುವೆ ಮಧ್ಯರಾತ್ರಿಯಲ್ಲಿ ಸಿಕ್ಕಿ ಕೊಂಡಿದ್ದರು. ಕೊನೆಗೆ ಅವರನ್ನು ಅಗ್ನಿಶಾಮಕ‌ ಸಿಬ್ಬಂದಿಗಳು ಕಾಡಿನಿಂದ ರಕ್ಷಿಸಿದ್ದರು.ಅದೇ ರೀತಿ ಗೂಗಲ್ ಮ್ಯಾಪ್ ನಂಬಿ ಹೋಗಿ ಕಾರು ಸಮೇತ 30 ಅಡಿ ಆಳದ ಚರಂಡಿ ಗೆ ಬಿದ್ದು ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ನೋಯ್ಡಾದಲ್ಲಿ ನಡೆದಿತ್ತು.