ಗೂಳಿಹಟ್ಟಿ ಆರೋಪ ನಿರಾಧಾರ : RSS

ಬೆಂಗಳೂರು:

    ಹೊಸದುರ್ಗದ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ದಲಿತ ಎಂಬ ಕಾರಣಕ್ಕೆ ತನಗೆ ನಾಗ್ಪುರದ ಹೆಡಗೇವಾರ್‌ ವಸ್ತು ಸಂಗ್ರಹಾಲಯಕ್ಕೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪಕ್ಕೆ ಆರ್‌ಎಸ್‌ಎಸ್   ತಿರುಗೇಟು ನೀಡಿದೆ. ಗೂಳಿಹಟ್ಟಿ ಶೇಖರ್ ಅವರ ಆರೋಪ ನಿರಾಧಾರ ಎಂದಿದೆ.

    ಶೂದ್ರರು ಮತ್ತು ದಲಿತರಿಗೆ ಆರ್.ಎಸ್.ಎಸ್ ಗರ್ಭಗುಡಿಗೆ ಪ್ರವೇಶ ಇಲ್ಲ. ಅವರೇನಿದ್ದರೂ ಹೊರಬಾಗಿಲಲ್ಲಿ ನಿಂತು ‘ಜೀ..ಜೀ..ಹುಜೂರ್’ ಎಂದಷ್ಟೇ ಹೇಳಬೇಕು. ಇದಕ್ಕೆ ಬಿಜೆಪಿಯ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಬಿ.ಎಲ್ ಸಂತೋಷ್‌ ಅವರಿಗೆ ಕಳುಹಿಸಿರುವ ವಾಟ್ಸಾಪ್ ವಾಯ್ಸ್ ರೆಕಾರ್ಡ್ ಸಾಕ್ಷಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.ಈ ಕುರಿತು ನೀಡಿರುವ ಅಧಿಕೃತ ಹೇಳಿಕೆಯಲ್ಲಿ, ಸಂಘಗಳ ದಕ್ಷಿಣ-ಕೇಂದ್ರ ಕಾರ್ಯವಾಹ ಎನ್ ತಿಪ್ಪೇಸ್ವಾಮಿ, ಆರ್‌ಎಸ್‌ಎಸ್ ಪ್ರತಿಯೊಬ್ಬರನ್ನು ಸ್ವಾಗತಿಸುವುದರಿಂದ ಇಂತಹ ಆರೋಪ ನಿರಾಧಾರವಾಗಿದೆ ಎಂದು ಹೇಳಿದ್ದಾರೆ.

    ಇತ್ತೀಚೆಗಷ್ಟೇ ಗೂಳಿಹಟ್ಟಿ ಶೇಖರ್ ಅವರು ದಲಿತ ಎಂಬ ಕಾರಣಕ್ಕೆ ನಾಗಪುರದ ಆರ್‌ಎಸ್ಎಸ್ ಕೇಂದ್ರ ಕಚೇರಿಯಲ್ಲಿರುವ ಹೆಡಗೇವಾರ್‌ ಮ್ಯೂಸಿಯಂಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರಿಗೆ ಕಳುಹಿಸಿರುವ ವಾಟ್ಸಾಪ್ ಆಡಿಯೋ ಕ್ಲಿಪ್ ವೈರಲ್ ಆಗಿತ್ತು. ಆಡಿಯೋ ಕ್ಲಿಪ್‌ನಲ್ಲಿ, ಸಿಬ್ಬಂದಿಗೆ ತನ್ನ ಜಾತಿಯ ಬಗ್ಗೆ ತಿಳಿದಾಗ ತನಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಅವರು ಹೇಳುವುದನ್ನು ಕೇಳಬಹುದು.

    ಇದಕ್ಕೆ ಪ್ರತಿಕ್ರಿಯಿಸಿದ ತಿಪ್ಪೇಸ್ವಾಮಿ, ಆರ್‌ಎಸ್‌ಎಸ್ ಪ್ರಧಾನ ಕಚೇರಿಯಲ್ಲಿ ಪ್ರವೇಶದ್ವಾರದಲ್ಲಿ ಸಂದರ್ಶಕರ ಹೆಸರನ್ನು ನೋಂದಾಯಿಸಿಕೊಳ್ಳುವ ಯಾವುದೇ ವ್ಯವಸ್ಥೆಯನ್ನು ಅನುಸರಿಸಿಲ್ಲ ಎಂದು ಹೇಳಿದ್ದಾರೆ.

    ಯಾವುದೇ ಆರ್‌ಎಸ್‌ಎಸ್ ಕಚೇರಿಯಲ್ಲಿ, ಪೂರ್ವಾಗ್ರಹವಿಲ್ಲದೆ ಎಲ್ಲರಿಗೂ ಅವಕಾಶ ನೀಡಲಾಗುತ್ತದೆ. ಪ್ರತಿ ದಿನ ವಿವಿಧ ಜಾತಿಯ ಜನರು ಮ್ಯೂಸಿಯಂಗೆ ಪ್ರವೇಶಿಸುತ್ತಾರೆ ಎಂದು ತಿಪ್ಪೇಸ್ವಾಮಿ ಹೇಳಿದರು.

    ಅಲ್ಲದೆ, ವಿಧಾನಸಭೆ ಚುನಾವಣೆಗೆ ಮೂರು ತಿಂಗಳ ಹಿಂದೆ ಈ ಘಟನೆ ನಡೆದಿದೆ ಎಂದು ಗೂಳಿಹಟ್ಟಿ ಶೇಖರ್ ಆರೋಪಿಸಿದ್ದಾರೆ. ಆದರೆ, ಆ ಬಳಿಕ ಅವರು ಹಲವು ಆರ್‌ಎಸ್‌ಎಸ್ ಮುಖಂಡರನ್ನು ಭೇಟಿ ಮಾಡಿದರೂ, ಒಮ್ಮೆಯೂ ಈ ವಿಚಾರವನ್ನು ಪ್ರಸ್ತಾಪಿಸದಿರುವುದು ಅಚ್ಚರಿ ಮೂಡಿಸಿದೆ ಎಂದು ತಿಪ್ಪೇಸ್ವಾಮಿ ಹೇಳಿದ್ದಾರೆ.

   ಹೊಸದುರ್ಗದ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಈ ವರ್ಷದ ಆರಂಭದಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್ ಕೈತಪ್ಪಿದ ನಂತರ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

   ಈಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಬಿಜೆಪಿ ಮತ್ತು ಆರ್‌ಎಸ್ಎಸ್ ಪರಿವಾರ ಬಹಿರಂಗವಾಗಿ ಮುಸ್ಲಿಂಮರ ವಿರುದ್ಧ ಮಾತ್ರ ಹರಿಹಾಯ್ದರೂ, ಅಂತರಂಗದಲ್ಲಿ ಅದು ಶೂದ್ರರು ಮತ್ತು ದಲಿತರ ವಿರುದ್ಧವಾಗಿದೆ. ಬಾಯಿಯಲ್ಲಿ ಹಿಂದೂ ನಾವೆಲ್ಲರೂ ಒಂದು ಎನ್ನುವ ಮಂತ್ರವನ್ನು ಸದಾ ಪಠಿಸುವ ಸಂಘ ಪರಿವಾರದ ನಾಯಕರು ಶೂದ್ರರು ಮತ್ತು ದಲಿತರನ್ನು ಬಡಿಯಲು ಕಂಕುಳಲ್ಲಿ ಬಡಿಗೆ ಇಟ್ಟುಕೊಂಡಿರುತ್ತಾರೆ ಎಂದು ದೂರಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap