ಮುಂಬಯಿ:
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮ ಅಲಭ್ಯರಾದಲ್ಲಿ ಇವರ ಅನುಪಸ್ಥಿತಿಯಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಮುಖ್ಯ ಕೋಚ್ ಗೌತಮ್ ಗಂಭೀರ್ ಖಚಿತಪಡಿಸಿದ್ದಾರೆ.
ಆಸೀಸ್ ಪ್ರವಾಸಕ್ಕೂ ಮುನ್ನ ಸೋಮವಾರ ಮುಂಬೈಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಚ್ ಗಂಭೀರ್, ಪರ್ತ್ನಲ್ಲಿ ನಡೆಯುವ ಮೊದಲ ಟೆಸ್ಟ್ ಪಂದ್ಯಕ್ಕೆ ರೋಹಿತ್ ಗೈರಾದರೆ ಆಗ ಉಪನಾಯಕನಾಗಿರುವ ಜಸ್ಪ್ರೀತ್ ಬುಮ್ರಾ ತಂಡದ ನಾಯಕನ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ರೋಹಿತ್ ಲಭ್ಯ ಅಥವಾ ಅಲಭ್ಯದ ಬಗ್ಗೆ ನಾನು ಯಾವುದೇ ಅಧಿಕೃತ ನಿರ್ಧಾರ ಕೈಗೊಂಡಿಲ್ಲ.ಆದರೆ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ನಾವು ಸರಣಿ ಆರಂಭಕ್ಕೂ ಮುನ್ನ ನಿಮಗೆ ತಿಳಿಸುತ್ತೇವೆ. ಅವರು ಲಭ್ಯವಾಗಲಿದ್ದಾರೆ ಎಂದು ಭಾವಿಸುತ್ತೇವೆ ಎಂದು ಗಂಭೀರ್ ಹೇಳಿದರು. ಭಾರತದ ತಂಡವು ಎರಡು ಪ್ರತ್ಯೇಕ ಬ್ಯಾಚ್ಗಳಲ್ಲಿ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿದೆ. ಮೊದಲ ಗುಂಪು ನವೆಂಬರ್ 10(ಭಾನುವಾ) ತೆರಳಿತ್ತು. ಎರಡನೇ ಬ್ಯಾಚ್ ಇಂದು(ಸೋಮವಾರ) ಹೊರಡಲಿದೆ.
ರೋಹಿತ್ ಮೊದಲ ಪಂದ್ಯದಿಂದ ಹೊರಗುಳಿದರೆ ನಮ್ಮ ಬಳಿ ಆರಂಭಿಕ ಸ್ಥಾನಕ್ಕೆ ಎರಡು ಆಯ್ಕೆಗಳಿಗೆ. ಅಭಿಮನ್ಯು ಈಶ್ವರನ್ ಮತ್ತು ಕೆಎಲ್ ರಾಹುಲ್. ಇಬ್ಬರಲ್ಲಿ ಯಾರನ್ನು ಆಡಿಸಬೇಕು ಎನ್ನುವುದನ್ನು ಅಂತಿಮ ಕ್ಷಣದಲ್ಲಿ ನಿರ್ಧರಿಸಲಾಗುತ್ತದೆ. ರಾಹುಲ್ಗೆ ಆರಂಭಿಕನಾಗಿ ಜತೆಗೆ ಮಧ್ಯಮ ಕ್ರಮಾಂಕದಲ್ಲಿಯೂ ಆಡುವ ಸಾಮರ್ಥ್ಯವಿದೆ ಎಂದರು. ಈ ಹೇಳಿಕೆ ನೋಡುವಾಗ ರೋಹಿತ್ ಆಡಿದರೆ, ಆಗ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ, ರೋಹಿತ್ ಆಡದಿದ್ದರೆ ರಾಹುಲ್ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ನ್ಯೂಜಿಲ್ಯಾಂಡ್ ವಿರುದ್ಧದ ತವರಿನ ಟೆಸ್ಟ್ ಸರಣಿಯಲ್ಲಿ ಭಾರತ 3-0 ಅಂತರದಿಂದ ಸರಣಿ ಸೋಲು ಕಂಡಾಗ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೋಚ್ ಗಂಭೀರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ಮತ್ತು ಟ್ರೋಲ್ಗಳು ಕಂಡು ಬಂದಿದ್ದವು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗಂಭೀರ್, ಸಾಮಾಜಿಕ ಮಾಧ್ಯಮಗಳ ಹೇಳಿಕೆಗಳ ಬಗ್ಗೆ ಯಾವುದೇ ರೀತಿಯಲ್ಲಿ ತಲೆಕಡೆಸಿಕೊಂಡಿಲ್ಲ.
ಯಾವುದೇ ಒಂದು ಕಠಿಣ ಕೆಲವನ್ನು ಕೈಗಿತ್ತಿಕೊಂಡು ವಿಫಲವಾದಾಗ ಈ ರೀತಿಯ ಟೀಕೆಗಳು ಸಾಮಾನ್ಯ. ನಮ್ಮ ತಂಡದ ಆಟಗಾರರ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಅವರಿಗೆ ತರಬೇತಿ ನೀಡುವುದು ಒಂದು ಗೌರವವಾಗಿದೆ. ರೋಹಿತ್, ಕೊಹ್ಲಿ ಸೇರಿದಂತೆ ಎಲ್ಲ ಆಟಗಾರರು ಆಸ್ಟ್ರೇಲಿಯಾದಲ್ಲಿ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಎಲ್ಲ ಟೀಕೆಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಗಂಭೀರ್ ವಿಶ್ವಾಸ ವ್ಯಕ್ತಪಡಿಸಿದರು.
