‘ಜನರ ಕೈಯಲ್ಲೇ ಆಡಳಿತ; ಸರ್ಕಾರದ ಧ್ಯೇಯ’: ಬಸವರಾಜ ಬೊಮ್ಮಾಯಿ

ಆಳಂದ:

‘ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ಬಲಿಷ್ಠಗೊಳಿಸಲು ನಮ್ಮ ಸರ್ಕಾರ ಆದ್ಯತೆ ನೀಡಿದೆ. ಜನರ ಕೈಯಲ್ಲಿಯೇ ಆಡಳಿತ ಇರಬೇಕು ಎಂಬುದು ನಮ್ಮ ಮಹದಾಸೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿನ ತಾಲ್ಲೂಕು ಆಡಳಿತ ಭವನದ ಉದ್ಘಾಟನೆ, ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣ, 1314 ಮನೆಗಳ ನಿರ್ಮಾಣ ಹಾಗೂ ‘ಜನಸೇವಕ’ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ನೆರೆ ಹಾವಳಿಯಲ್ಲಿ ಹಾಳಾದ ಬೆಳೆಗಳಿಗೆ ಒಣ ಬೇಸಾಯದ ಪ್ರತಿ ಹೆಕ್ಟೇರ್‌ಗೆ ಕೇಂದ್ರ ಸರ್ಕಾರದ ₹ 6800, ರಾಜ್ಯ ಸರ್ಕಾರದ ₹ 6800, ನೀರಾವರಿಗೆ ಕೇಂದ್ರದ ₹ 13,500, ರಾಜ್ಯ ಸರ್ಕಾರದ ₹ 11,500 ಹಾಗೂ ತೋಟಗಾರಿಕೆ ಬೆಳೆಗಳ ಪ್ರತಿ ಹೆಕ್ಟೇರ್‌ಗೆ ಕೇಂದ್ರದ ₹ 18,000, ರಾಜ್ಯದ ₹ 10,000 ಸೇರಿಸಿ ಪರಿಹಾರ ನೀಡಲಾಗುತ್ತಿದೆ’ ಎಂದರು.

‘ವ್ಯಕ್ತಿಗತ ತಲಾ ಆದಾಯದಲ್ಲಿ ರಾಜ್ಯವು ನಾಲ್ಕನೇ ಸ್ಥಾನದಲ್ಲಿದೆ. ಆರ್ಥಿಕ ಬೆಳವಣಿಗೆ ತಳ ಹಂತದಲ್ಲಿ ದುಡಿಯುವ ಕೂಲಿ ಕಾರ್ಮಿಕರಿಂದಲೇ ಹೊರೆತು ಉದ್ಯಮಿಗಳಿಂದಲ್ಲ. ತಲಾ ಆದಾಯ ವೃದ್ಧಿಯಲ್ಲಿ ರಾಜ್ಯದ ಶೇ 30ರಷ್ಟು ಜನ ಮಾತ್ರ ಪಾಲ್ಗೊಳ್ಳತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ವಿಶೇಷವಾಗಿ ಎಸ್‌ಸಿ, ಎಸ್‌ಟಿ, ಹಿಂದುಳಿದ ಹಾಗೂ ಹೆಣ್ಣು ಮಕ್ಕಳ ತಲಾ ಆದಾಯ ಹೆಚ್ಚಳಕ್ಕಾಗಿ ರಾಜ್ಯದ 7500 ಸ್ತ್ರೀ ಶಕ್ತಿ ಗುಂಪುಗಳಿಗೆ ತಲಾ ₹ 1 ಲಕ್ಷ ಸಹಾಯಧನ ನೀಡಲು ತೀರ್ಮಾನಿಸಲಾಗಿದೆ’ ಎಂದು ಬೊಮ್ಮಾಯಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಸುಭಾಷ ಗುತ್ತೇದಾರ ಮಾತನಾಡಿ, ‘ಕೆರೆಗೆ ನೀರು ತುಂಬಿಸುವ ಯೋಜನೆ, ಅಮರ್ಜಾ ಅಣೆಕಟ್ಟೆ ಸಮೀಪ ಉದ್ಯಾನ ನಿರ್ಮಾಣ,

ಕೋವಿಡ್‌ನಿಂದ ಮೃತಪಟ್ಟ ಪ್ರತಿಯೊಬ್ಬರ ಕುಟುಂಬಕ್ಕೂ ಪರಿಹಾರ ನೀಡಬೇಕು, ಆಳಂದ ಪಟ್ಟಣದ ಮಾರುಕಟ್ಟೆ ರಸ್ತೆ ಅಭಿವೃದ್ಧಿಗೆ ₹ 10 ಕೋಟಿ ಅನುದಾನ ಬಿಡುಗಡೆ ಮಾಡಬೇಕು’ ಎಂದು ಮನವಿ ಮಾಡಿದರು.

ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿದರು. ಸಚಿವ ಮುರುಗೇಶ ನಿರಾಣಿ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮಡು, ಅವಿನಾಶ ಜಾಧವ, ರಾಜಕುಮಾರ ಪಾಟೀಲ ತೇಲ್ಕೂರು, ಶರಣು ಸಲಗರ, ಶಶೀಲ್ ನಮೋಶಿ, ಬಿ.ಜಿ.ಪಾಟೀಲ, ಮುಖಂಡರಾದ ಚಂದು ಪಾಟೀಲ, ಬಾಬುರಾವ್‌ ಚಿಂಚನಸೂರು,

ಶಶಿಕಲಾ ತೆಂಗಳಿ, ಹರ್ಷಾನಂದ ಗುತ್ತೇದಾರ, ರಾಜಶ್ರೀ ಖಜೂರಿ, ಆನಂದರಾವ ಪಾಟೀಲ, ಡಿ.ಜಿ.ಸಾಗರ, ವಿದ್ಯಾಸಾಗರ ಕುಲಕರ್ಣಿ, ವೀರಣ್ಣ ಮಂಗಾಣೆ, ಸಂತೋಷ ಗುತ್ತೇದಾರ, ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಇದ್ದರು.

ಸುಭಾಷ ಗುತ್ತೇದಾರ ಅವರು ಬೊಮ್ಮಾಯಿ ಅವರಿಗೆ ಬೆಳ್ಳಿ ನೇಗಿಲ, ಆಳಂದದ ಸಮಗ್ರ ಸಂಚಿಕೆ ಪುಸ್ತಕ ವಿತರಿಸಿ ಸನ್ಮಾನಿಸಿದರು.

ಮಾಜಿ- ಹಾಲಿ ಶಾಸಕರ ಜಿದ್ದು

ಆಳಂದ ತಾಲ್ಲೂಕು ಆಡಳಿತ ಭವನಕ್ಕೆ ಮಂಗಳವಾರ ಮಾಜಿ ಶಾಸಕ ಬಿ.ಆರ್.ಪಾಟೀಲ ತಮ್ಮ ಬೆಂಬಲಿಗರೊಂದಿಗೆ ತೆರಳಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ, ಕ್ರೇನ್‌ ಸಹಾಯ ಪಡೆದು ಮಾಲಾರ್ಪಣೆ ಮಾಡಿದರು.

ಆಗ ಹಾಲಿ ಮತ್ತು ಮಾಜಿ ಶಾಸಕರ ಬೆಂಬಲಿಗರು ತಮ್ಮ ನಾಯಕರಿಗೆ ಜೈಕಾರ ಕೂಗಿದರು. ಇದರಿಂದ ಆಡಳಿತ ಭವನವನ್ನು ಕೆಲಹೊತ್ತು ರಾಜಕೀಯ ಕಣವಾಗಿ ಮಾರ್ಪಟ್ಟಿತು.

ಇದಕ್ಕೂ ಮುನ್ನ ಪ್ರತಿಭಟನೆಗೆ ನಿಂತ ರೈತರು ಮುಖ್ಯಮಂತ್ರಿ ಮನವಿ ಸ್ವೀಕರಿಸಿಲ್ಲ ಎಂದು ಧಿಕ್ಕಾರ ಕೂಗಿದರು. ಇದರಿಂದ ವಾಹನ ನಿಲ್ಲಿಸಿದ ಬೊಮ್ಮಾಯಿ ಅವರು, ನಡೆದುಬಂದು ಮನವಿ ಪಡೆದರು.

ಹೋರಾಟಗಾರರಾದ ಮೌಲಾ ಮುಲ್ಲಾ, ಪ್ರಭುದೇವ ಯಳಸಂಗಿ, ಚಂದ್ರಕಾಂತ ಕೋಬ್ರೆ, ಮೈಲಾರಿ ಜೋಗೆ, ಭೀಮಾಶಂಕರ ಮಾಡಿಯಾಳ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link