ಗುಬ್ಬಿ: ನೆರೆ ಹಾವಳಿಗೆ ಮನೆ ಕಳೆದುಕೊಂಡವರಿಗೆ ಮತ್ತು ಕೋವಿಡ್‍ನಿಂದ ಮೃತಪಟ್ಟ ಕುಟುಂಬಕ್ಕೆ ಸರ್ಕಾರದ ಪರಿಹಾರ ಧನ ವಿತರಿಸಲಾಗಿದೆ. ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಅರ್ಹರನ್ನು ಗುರುತಿಸಿದ್ದಾರೆ.
ಗಮನಕ್ಕೆ ಬಾರದ ಪ್ರಕರಣಗಳನ್ನು ಗಮನಿಸಲು ಸೂಚಿಸಲಾಗಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಪರಿಹಾರ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಒಟ್ಟು 264 ಮನೆಗಳಿಗೆ ಹಾನಿ ಆಗಿದ್ದು ಸ್ಥಳ ಪರಿಶೀಲಿಸಿ ಪರಿಹಾರ ನೀಡಲಾಗಿದೆ.
ಈ ಜೊತೆಗೆ ಕೋವಿಡ್ ನಿಂದ ಮೃತಪಟ್ಟ 73 ಮಂದಿಯಲ್ಲಿ 50 ಮಂದಿಗೆ ಒಂದು ಲಕ್ಷ ರೂ.ಗಳ ಚೆಕ್ ನೀಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಹೋಬಳಿ ಮಟ್ಟದ ಫಲಾನುಭವಿಗಳಿಗೆ ಚೆಕ್ ನೀಡಿ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಬರದವರಿಗೆ ಖುದ್ದು ಮನೆಗೆ ಚೆಕ್ ತಲುಪಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿ ಅರ್ಹ ಸಂತ್ರಸ್ತರನ್ನು ಮತ್ತೊಮ್ಮೆ ಗಮನಿಸಲು ಸೂಚಿಸಿದರು.
ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ, ಸದಸ್ಯ ಜಿ.ಆರ್.ಶಿವಕುಮಾರ್, ತಹಶೀಲ್ದಾರ್ ಬಿ.ಆರತಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿಂದುಮಾಧವ ಹಾಗೂ ಕಂದಾಯ ಇಲಾಖೆಯ ಎಲ್ಲಾ ಸಿಬ್ಬಂದಿ ಹಾಜರಿದ್ದರು.
ಉಳಿದವರಿಗೂ ಶೀಘ್ರ ಪರಿಹಾರ :
ಎ ವರ್ಗದಲ್ಲಿ 5 ಲಕ್ಷ ರೂ. ಗಳಂತೆ ಒಟ್ಟು 18 ಮಂದಿ ಅರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ. ಬಿ ವರ್ಗದಲ್ಲಿ 95 ಸಾವಿರ ರೂ.ಗಳು ಹಾಗೂ ಸಿ ವರ್ಗದಲ್ಲಿ 50 ಸಾವಿರ ರೂಗಳ ಚೆಕ್ ನೀಡಲಾಗಿದೆ.
ಹಾಗೆಯೇ ಕೋವಿಡ್‍ಗೆ ಬಲಿಯಾದವರ ಕುಟುಂಬಕ್ಕೆ 1 ಲಕ್ಷ ರೂ.ಗಳ ಚೆಕ್ ವಿತರಿಸಿದ್ದು, ಉಳಿದ 23 ಮಂದಿಗೆ ಶೀಘ್ರದಲ್ಲೆ ಪರಿಹಾರ ವಿತರಿಸಲಾಗುವುದು ಎಂದರು.
ಬಾರಿ ಮಳೆಗೆ ಮನೆಗಳು ಬಿದ್ದ ಬಗ್ಗೆ ಮಾಹಿತಿ ಕೇಳಿಬಂದಿತ್ತು. ಆದರೇ ಸರ್ಕಾರ ಕೆಲ ಮಾನದಂಡದಡಿ ಪರಿಹಾರ ನೀಡಿದೆ. ಎ, ಬಿ ಮತ್ತು ಸಿ ಎಂದು ವರ್ಗ ರಚಿಸಿ ಪರಿಹಾರ ನೀಡಲಾಗಿದೆ.
-ಎಸ್.ಆರ್.ಶ್ರೀನಿವಾಸ್, ಶಾಸಕರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
