ಬೆಂಗಳೂರು :
ರಾಜ್ಯಾದ್ಯಂತ ಲಾಕ್ಡೌನ್ ಸಡಿಲಗೊಳಿಸಿರುವುದರಿಂದ ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ, ಉಳಿದೆಲ್ಲಾ ಕಡೆ ಪಾಸ್ ಇಲ್ಲದೇ ಮುಕ್ತ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಲಾಕ್ ಡೌನ್ ಆದ 40 ದಿನಗಳ ಬಳಿಕ ಪಾಸ್ ಇಲ್ಲದೆ ಸಾರ್ವಜನಿಕರು ಓಡಾಟ ನಡೆಸುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೇ ವಾಹನ ಸಂಚಾರ ಶುರುವಾಗಿದ್ದು, ಜನರ ಓಡಾಟ ಹೆಚ್ಚಾಗಿದ್ದು, ಕಾರು, ಆಟೋ, ಬೈಕ್ಗಳ ಸಂಚಾರದಿಂದ ತುಮಕೂರು ರಸ್ತೆ ಸೇರಿದಂತೆ ಹಲವೆಡೆ ಟ್ರಾಫಿಕ್ ಸಿಗ್ನಲ್ಗಳಲ್ಲಿ ಜಾಮ್ ಆಗಿದೆ. ಬೆಂಗಳೂರು ಪೊಲೀಸ್ ವತಿಯಿಂದ ಸಾರ್ವಜನಿಕರ ಚಲನವಲನಗಳ ಮೇಲೆ ನಿಗಾ ಇಡುತ್ತಿದ್ದು, ಬಿಬಿಎಂಪಿ ವ್ಯಾಪ್ತಿಗೆ ಬರುವ ಕಂಟೈನ್ಮೆಂಟ್ ಜೋನ್ ಹೊರತುಪಡಿಸಿ ಎಲ್ಲಾ ಕಡೆಯೂ ಇಂದಿನಿಂದ ಎಂದಿನಂತೆ ಇರುತ್ತದೆ.
ಇನ್ನು, ಪಾತ್ರೆ , ಟೆಕ್ಸ್, ಚಿನ್ನ, ಬೆಳ್ಳಿ ಅಂಗಡಿಗಳೂ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಓಪನ್ ಇರಲಿದ್ದು, ಬೆಳಗ್ಗೆಯಿಂದ ಸಂಜೆಯವರೆಗೆ ಯಾವುದೇ ಪಾಸ್ ಚೆಕ್ ಮಾಡಲ್ಲ. ಆದರೆ, ಜನತೆ ಸುಖಾ ಸುಮ್ಮನೆ ರಸ್ತೆಗೆ ಬರುವಂತಿಲ್ಲ. ನೀವು ಹೊರಗೆ ಬಂದರೆ ಐಡಿ ಕಾರ್ಡ್ ಕಡ್ಡಾಯ, ಅಗತ್ಯವಿದ್ದರೆ ಮಾತ್ರ ಬರಬೇಕು ಎಂದು ನಿಯಮ ವಿಧಿಸಲಾಗಿದೆ.
ಇನ್ನು ಮುಖ್ಯ ರಸ್ತೆಗಳು ಬಂದ್ ಆಗಿಯೇ ಇರಲಿದ್ದು, ವಾಹನಗಳು ನಿಧಾನವಾಗಿ ಅಂದರೆ 30 ಕಿಲೋ ಸ್ಫೀಡ್ ನಲ್ಲಷ್ಟೇ ತೆರಳಬೇಕಿದೆ. ಟ್ರಾಫಿಕ್ ರೂಲ್ಸ್ ಫಾಲೋ ಮಾಡ್ಬೇಕು. ಹೆಲ್ಮೆಟ್, ಸಿಗ್ನಲ್ ಕಡ್ಡಾಯವಾಗಿರಲಿದೆ. ಇದೇ ವೇಳೆ, ಮನೆಗಳಿಂದ ಹೊರಬಂದರೆ ಜನ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕಿದೆ.
ಇನ್ನೂ ಇಂದಿನಿಂದ ಮದ್ಯದಂಗಡಿ ತೆರೆಯಲು ಅವಕಾಶ ನೀಡಿರುವ ಹಿನ್ನೆಲೆಯಲ್ಲಿ, ನಗರದ ಕಂಟೈನ್ಮೆಂಟ್ ಏರಿಯಾ ಬಿಟ್ಟು, ಉಳಿದ ಏರಿಯಾದಲ್ಲಿ ಮದ್ಯ ಖರೀದಿಗೆ ಅವಕಾಶ ಮಡಿಕೊಟ್ಟಿದ್ದು, ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮದ್ಯದಂಗಡಿ ತೆರೆದಿರುತ್ತದೆ. ಹಾಗೆ ಮದ್ಯ ಖರೀದಿಗೆ ಹಲವು ಕಂಡೀಷನ್ ಅನ್ವಯವಾಗಿದ್ದು, ಸಾಮಾಜಿಕ ಅಂತರ, ಮಾಸ್ಕ್ , ಒಬ್ಬರಿಗೆ 2.5 ಲೀಟರ್ ಮಾತ್ರ ಲಭ್ಯವಾಗಲಿದೆ. ಹಾಗೆ ಪೊಲೀಸರು ಬಾರ್ ಮುಂದೆ ಬ್ಯಾರಿಕೇಡ್ ಅಳವಡಿಸಿ ಒಬ್ಬ ಪಿಎಸ್ಐ ಸ್ಥಳದಲ್ಲಿ ಮೊಕ್ಕಾಂ ಹೂಡಲಿದ್ದಾರೆ.
ಇನ್ನು ಮದುವೆ, ಸಾವು, ಕೌಟುಂಬಿಕ ಕಾರ್ಯಕ್ರಮಗಳಲ್ಲಿ 50 ಮಂದಿ ಮಾತ್ರ ಭಾಗವಹಿಸಿಬೇಕಿದೆ. ಷರತ್ತುಗಳ ಅನ್ವಯ ಬಹುತೇಕ ಸೇವೆಗಳಿಗೆ ಇಂದಿನಿಂದ ವಿನಾಯಿತಿ ನೀಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
