ಸರ್ಕಾರದಿಂದ ಒಡೆದಾಳುವ ನೀತಿ : ಆಕ್ರೋಶ

ತುಮಕೂರು:

ಬೇಕಾದರೇ ಜೈಲಿಗೆ ಹಾಕಲಿ ಹೋರಾಟ ಬಿಡುವುದಿಲ್ಲ 

           ತರಾತುರಿಯಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದು ಮೂರು ತಿಂಗಳಾದರೂ ಪಠ್ಯ ಪುಸ್ತಕ ಕೊಡಲು ಆಗುತ್ತಿಲ್ಲ, ಇನ್ನು ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸುತ್ತಾರೆಯೇ ಎಂದು ಕೋಲಾರ ಜಿಲ್ಲೆಯ ಅತಿಥಿ ಉಪನ್ಯಾಸಕಿ ಡಾ.ಲಕ್ಷ್ಮೀದೇವಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರು ಕಳೆದೊಂದು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸಹ ಸರ್ಕಾರ ಪ್ರತಿಭಟನಾಕಾರರ ಸಮಸ್ಯೆ ಆಲಿಸಲು ಮುಂದಾಗದೇ ಇರುವುದು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅವಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜೈಲಿಗೆ ಹಾಕಲಿ ಹೋಗೋಣ :

ಅತಿಥಿ ಉಪನ್ಯಾಸಕರಿಗಾಗಿ ಸರ್ಕಾರ ಏನು ಮಾಡಲು ಯೋಗ್ಯತೆ ಇಲ್ಲದೇ ಇದ್ದರೇ ದಯಾಮರಣಕ್ಕೆ ಅವಕಾಶ ಕೊಡಲಿ, ಸಚಿವರಿಗೆ ಸರಿಯಾದ ಗುರು ಸಿಗದೇ ಇರುವುದರಿಂದ ಈ ರೀತಿ ಹೀಯಾಳಿಸಿ ಗುರುಗಳ ಬಗ್ಗೆ ಮಾತನಾಡುತ್ತಾರೆ, ಅವಮಾನ ಮಾಡುತ್ತಿದ್ದಾರೆ, ಸರಿಯಾದ ಗುರು ಸಿಕ್ಕಿದ್ದರೂ, ಸಚಿವರು ಅತಿ ಬುದ್ಧಿವಂತ ಶಿಷ್ಯರಾಗಿರುವುದರಿಂದಲೇ ಇಂತಹ ಅವಮಾನವನ್ನು ಮಾಡುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವರನ್ನು ಟೀಕಿಸಿದರು.

ಶಿಕ್ಷಣ ಇಲಾಖೆಯಲ್ಲಿ ಸಚಿವರಿಗೆ ಏನು ಸಿಗುವುದಿಲ್ಲ, ಅತಿಥಿ ಉಪನ್ಯಾಸಕರಾಗಿ ನಾವೇನು ಅವರಿಗೆ ಕೊಡುವುದಿಲ್ಲ. ಅದಕ್ಕಾಗಿ ನಮ್ಮ ಹೋರಾಟವನ್ನು ಪರಿಗಣಿಸಿಲ್ಲ, ಶಿಕ್ಷಣ ದಾನ ಮಾಡುವವರು ನಾವು, ಅತಿಥಿ ಉಪನ್ಯಾಸಕರಲ್ಲಿ ಬೇಧ ಮಾಡದೆ, ಸೇವಾ ವಿಲೀನತೆ ಮಾಡದೇ, ಹೋರಾಟದಿಂದ ಹಿಂಸರಿಯುವುದು ಬೇಡ, ಜೈಲಿಗೆ ಹಾಕುವುದಾದರೆ ಹಾಕಲಿ ಹೋಗೋಣ ಎಂದು ಕರೆ ನೀಡಿದರು.

ಸರ್ಕಾರ ಒಡೆದು ಆಳುತ್ತಿದೆ :

ಕೋಲಾರ ಜಿಲ್ಲಾ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ಲಕ್ಷ್ಮೀನಾರಾಯಣ್ ಮಾತನಾಡಿ, ಎಲ್ಲ ಸರ್ಕಾರಗಳು ನಮ್ಮ ಮೂಗಿಗೆ ತುಪ್ಪ ಸವರಿ, ನಯವಂಚನೆ ಮಾಡಿವೆ, ಇಂದಿನ ಸರ್ಕಾರದ ಆದೇಶಕ್ಕೆ ನಾವೇ ಕಾರಣ, ಎಲ್ಲರೂ ಒಗ್ಗಟ್ಟಾಗಿ ಹೋರಾಟಕ್ಕೆ ಮುಂದಾಗಿದ್ದರೆ ಪರಿಸ್ಥಿತಿ ಬೇರೆ ಇರುತ್ತಿತ್ತು.

ರಾಜ್ಯದಲ್ಲಿ ಕೋಲಾರ ಮತ್ತು ತುಮಕೂರಿನಲ್ಲಿ ಮಾತ್ರ ತೀವ್ರ ಹೋರಾಟ ನಡೆಯುತ್ತಿದೆ, ಸರ್ಕಾರಿ ಹುದ್ದೆಗಳನ್ನು ತುಂಬಿದ್ದರೆ ಅತಿಥಿ ಉಪನ್ಯಾಸಕರೇ ಇರುತ್ತಿಲ್ಲ, ಇಪ್ಪತ್ತು ವರ್ಷಗಳಿಂದ ಸೇವೆ ಮಾಡಿಸಿಕೊಂಡು ಈಗ ಗುಣಮಟ್ಟದ ಹೆಸರಿನಲ್ಲಿ ನಮ್ಮನ್ನೆ ದೂಷಣೆ ಮಾಡುತ್ತಿದೆ, ಬ್ರಿಟಿಷರಂತೆ ಬಿಜೆಪಿ ಸರ್ಕಾರವೂ ಒಡೆದಾಳುವ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಹೋರಾಟ ಹತ್ತಿಕ್ಕುವ ಕೆಲಸ :

ಅತಿಥಿ ಉಪನ್ಯಾಸಕರ ವೇತನ ಹೆಚ್ಚಿನ ಆದೇಶ ಹೊರಡಿಸಿರುವ ಸರ್ಕಾರ, ಅತಿಥಿ ಉಪನ್ಯಾಸಕರ ನೇಮಕಕ್ಕೆ ಅರ್ಜಿ ಆಹ್ವಾನಿಸಿ, ಹೊಸಬರಿಗೆ ಅವಕಾಶ ನೀಡಿ, ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ, ಹೋರಾಟ ಹತ್ತಿಕ್ಕಲು ಯೋಜನೆ ರೂಪಿಸುವ ಸಚಿವರುಗಳಿಗೆ ಸಮಸ್ಯೆ ಬಗೆಹರಿಸಲು ಇವರಿಗೆ ಸಾಧ್ಯವಿಲ್ಲ, ಕಾನೂನಿನಲ್ಲಿ ಅವಕಾಶವಿಲ್ಲ ಎನ್ನುತ್ತಾರೆ, ನಿಮ್ಮನೇನು ಕರೆದಿದ್ದವಾ ಎನ್ನುತ್ತಾರೆ ಶಿಕ್ಷಣ ಮತ್ತು ಕಾನೂನು ಸಚಿವರಾಗಲು ಅವರು ನಾಲಾಯಕ್ಕು ಎಂದು ಲಕ್ಷ್ಮೀನಾರಾಯಣ್ ಆಕ್ರೋಶ ವ್ಯಕ್ತಪಡಿಸಿದರು.

ಅತಿಥಿ ಉಪನ್ಯಾಸಕರೇನು ಪಾಕಿಸ್ತಾನಿಗಳೆ…? :

ಮಸಿಂಡಿಕೇಟ್ ಮಾಜಿ ಸದಸ್ಯ ಹೆತ್ತೇನಹಳ್ಳಿ ಮಂಜುನಾಥ್ ಮಾತನಾಡಿ, ಸರ್ಕಾರಕ್ಕೆ ಮತಾಂತರ ಕಾಯ್ದೆ, ಗೋಹತ್ಯೆ, ಶಾಸಕರ ವೇತನ ಹೆಚ್ಚಳಕ್ಕೆ ತಿದ್ದುಪಡಿ ಮಾಡಲು ಆಗುತ್ತದೆ. ಅತಿಥಿ ಉಪನ್ಯಾಸಕ ಸೇವಾ ವಿಲೀನತೆಗೆ ಕಾನೂನಿಗೆ ತಿದ್ದುಪಡಿ ಮಾಡಲು ಸಾಧ್ಯವಿಲ್ಲವೇ?

ಒಂದೇ ದೇಶ, ಒಂದೇ ಕಾನೂನು ಎನ್ನುವವರು ಕರ್ನಾಟಕ ಏನು ಪಾಕಿಸ್ತಾನದಲ್ಲಿ ಎಂದುಕೊಳ್ಳುತ್ತಿದ್ದಾರೆಯೇ? ಪ್ರತಿಭಟನೆ ಮಾಡುತ್ತಿರುವ ಅತಿಥಿ ಉಪನ್ಯಾಸಕರು ಪಾಕಿಸ್ತಾನದ ಪ್ರಜೆಗಳಂತೆ ಕಾಣುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.

ಕಳೆದೊಂದು ತಿಂಗಳಿನಿಂದ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದರೂ ಸಮಸ್ಯೆ ಆಲಿಸದ ಸರ್ಕಾರ ಹೊಸದಾಗಿ ಅರ್ಜಿ ಆಹ್ವಾನಿಸುವ ಮೂಲಕ ಇನ್ನಷ್ಟು ಅತಿಥಿ ಉಪನ್ಯಾಸಕರನ್ನು ಸೃಷ್ಟಿಸಿ ಅವರ ಬದುಕಿನೊಂದಿಗೆ ಚೆಲ್ಲಾಟವಾಡಲು ಮುಂದಾಗಿದೆ, ಉನ್ನತ ಶಿಕ್ಷಣ ಸಚಿವರಿಗೆ ಪರಿಜ್ಞಾನವಿದ್ದರೆ ಬಡ ಮಕ್ಕಳ ಭವಿಷ್ಯದೊಂದಿಗೆ ರಾಜಕೀಯ ಮಾಡಲು ಮುಂದಾಗುತ್ತಿರಲಿಲ್ಲ, ಪರಿಜ್ಞಾನವಿಲ್ಲದ ಬಿಜೆಪಿ ಸಚಿವರುಗಳು ರಾಜೀನಾಮೆ ನೀಡುವುದು ಒಳಿತು ಎಂದರು.

ಪ್ರತಿಭಟನೆಯಲ್ಲಿ ಜಿ.ಕೆ.ನಾಗಣ್ಣ, ರಂಗಧಾಮಯ್ಯ, ಅಂಜನ್‍ಮೂರ್ತಿ, ಸುನೀಲಕುಮಾರ್, ಗುಡ್ಡಣ್ಣ, ಕೆಸ್ತೂರು ನರಸಿಂಹಮೂರ್ತಿ, ಎರ್ರಿಸ್ವಾಮಿ, ಸೇರಿದಂತೆ ಮಂಡ್ಯ ಮತ್ತು ಕೋಲಾರ ಜಿಲ್ಲೆಯ ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link