ಲಖನೌ:
ಉತ್ತರ ಪ್ರದೇಶದಲ್ಲಿ ಸುಮಾರು 13 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರು ಆಗಸ್ಟ್ ತಿಂಗಳ ಸಂಬಳ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಆಗಸ್ಟ್ 31ರ ಒಳಗೆ ಸ್ಥಿರಾಸ್ತಿ ಮತ್ತು ಚರಾಸ್ಥಿಯನ್ನು ಘೋಷಣೆ ಮಾಡಿಕೊಳ್ಳುವಂತೆ ಸರ್ಕಾರ ನಿರ್ದೇಶನ ಮಾಡಿದ್ದರೂ ನಿರ್ಲಕ್ಷ್ಯ ವಹಿಸಿರುವ ಉದ್ಯೋಗಿಗಳಿಗೆ ಶಾಕ್ ನೀಡಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ.
ಉತ್ತರ ಪ್ರದೇಶದಲ್ಲಿ ಒಟ್ಟು 17.88 ಲಕ್ಷ ಸರ್ಕಾರಿ ನೌಕರರಿದ್ದಾರೆ. ಆದರೆ, ಕೇವಲ 26 ರಷ್ಟು ನೌಕರರು ಮಾತ್ರ ತಮ್ಮ ಆಸ್ತಿ ವಿವರಣೆಯನ್ನು ಸರ್ಕಾರದ ಮಾನವ್ ಸಂಪದ ವೆಬ್ಸೈಟ್ನಲ್ಲಿ ಸಲ್ಲಿಸಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಆಗಸ್ಟ್ 31ರ ಡೆಡ್ಲೈನ್ ಒಳಗೆ ಆಸ್ತಿ ವಿವರ ಘೋಷಿಸುವವರಿಗೆ ಮಾತ್ರ ಈ ತಿಂಗಳ ಸಂಬಳ ಪಾವತಿಸಲಾಗುವುದು ಮತ್ತು ಆಸ್ತಿ ವಿವರಗಳನ್ನು ಸಲ್ಲಿಸದವರನ್ನು ಗೈರುಹಾಜರೆಂದು ಪರಿಗಣಿಸಿ, ಆಗಸ್ಟ್ ತಿಂಗಳ ಸಂಬಂಳ ಪಾವತಿಸುವುದಿಲ್ಲ ಹಾಗೂ ಇಲಾಖೆ ಮಾರ್ಗಸೂಚಿಯಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಸಿಂಗ್ ಸೂಚನೆ ನೀಡಿರುವುದಾಗಿಯೂ ಮಾಧ್ಯಮಗಳ ವರದಿಯಲ್ಲಿ ಉಲ್ಲೇಖವಾಗಿದೆ.
ಸರ್ಕಾರದ ಈ ಕ್ರಮದ ಬಗ್ಗೆ ಮಾತನಾಡಿರುವ ಉತ್ತರ ಪ್ರದೇಶದ ಸಚಿವ ಡ್ಯಾನಿಶ್ ಆಜಾದ್, ಆಸ್ತಿ ಘೋಷಣೆಯ ಕ್ರಮವು ಸರ್ಕಾರದೊಳಗೆ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಮ್ಮ ಸರ್ಕಾರವು ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.
ಸರ್ಕಾರದ ಈ ಕ್ರಮವನ್ನು ಸಮಾಜವಾದಿ ಪಕ್ಷದ ವಕ್ತಾರ ಅಶುತೋಷ್ ವರ್ಮಾ ಟೀಕಿಸಿದ್ದಾರೆ. ಇದನ್ನು 2017ರಲ್ಲಿ ಏಕೆ ಪರಿಚಯಿಸಲಿಲ್ಲ? ಯೋಗಿ ಆದಿತ್ಯನಾಥ್ ಸರ್ಕಾರವು ಇದೀಗ ತಮ್ಮ ಭ್ರಷ್ಟ ಉದ್ಯೋಗಿಗಳ ರಕ್ಷಣೆಗೆ ಮುಂದಾಗಿದೆ. ತಮ್ಮ ಉದ್ಯೋಗಿಗಳು ಭ್ರಷ್ಟರಾಗಿದ್ದಾರೆಂದು ಅರಿತುಕೊಂಡಿದ್ದಾರೆ. ಇದು ಕೇವಲ ಫಾಲೋ-ಅಪ್ ಅಷ್ಟೇ, ಇದನ್ನು ಸರಿಯಾಗಿ ಅನುಷ್ಠಾನಕ್ಕೆ ತರುವುದಿಲ್ಲ ಎಂದು ಅಣಕಿಸಿದ್ದಾರೆ.