ಹುಬ್ಬಳ್ಳಿ:
ಗ್ಯಾರಂಟಿ ಯೋಜನೆಗಳ ಅನುಷ್ಠಾನಗೊಳಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವ ರೀತಿಯನ್ನು ನೋಡಿದರೆ ರಾಜ್ಯ ಸರ್ಕಾರ ಆರ್ಥಿಕ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿರುವುದು ಸ್ಪಷ್ಟವಾಗಿ ತೋರಿಸುತ್ತಿದೆಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಂಗಳವಾರ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆದಾಯ ವೃದ್ಧಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ. ಪ್ರತಿ ವರ್ಷ ವೆಚ್ಚಗಳು ಹೆಚ್ಚಾದಂತೆ ಅನುದಾನ ಹಂಚಿಕೆ ಕೂಡ ಹೆಚ್ಚಾಗಬೇಕು. ಆದರೆ ಈ ವರ್ಷ ಕಡಿಮೆಯಾಗಿದೆ. ಯಾವುದೇ ಅಭಿವೃದ್ಧಿಯಲ್ಲಿ ಪ್ರಗತಿಗಳು ಕಂಡು ಬರುತ್ತಿಲ್ಲ, ರಾಜ್ಯದ ಆರ್ಥಿಕ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ ಎನಿಸುತ್ತಿಲ್ಲ. ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದೆ. ಆದರೆ, ಅಧಿಕಾರಿಗಳು ಸುಳ್ಳುಗಳನ್ನಷ್ಟೇ ಹೇಳುತ್ತಿದ್ದಾರೆ. ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ಜನರ ಮೇಲಾಗುತ್ತಿರುವ ಹೊರೆಯನ್ನು ಕಡಿಮೆ ಮಾಡಬೇಕು. ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನವನ್ನು ನೀಡಬೇಕು. ನಿಮ್ಮ ಸರ್ಕಾರದ ಕಾರ್ಯವೈಖರಿಯನ್ನು ಮರುಪರಿಶೀಲಿಸಿ ಎಂದು ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡರು.
ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಗೆ ಕೂಡಲೇ ರೂ.5 ಸಾವಿರ ಕೋಟಿ ಬಿಡುಗಡೆ ಮಾಡಬೇಕು. ಹಿಂದಿನ ಸರ್ಕಾರವು ಭೂ ಸ್ವಾಧೀನ, ಪುನರ್ನಿರ್ಮಾಣ ಹಾಗೂ ಪುನರ್ವಸತಿ ಕಾರ್ಯಕ್ಕಾಗಿ (ಆರ್ & ಆರ್) 52,000 ಕೋಟಿ ರೂಪಾಯಿಗಳ ಬಜೆಟ್ ಅನ್ನು ಅನುಮೋದಿಸಿತ್ತು.
ಆದರೆ ಈಗಿನ ಸರಕಾರ ನ್ಯಾಯಾಲಯದ ಮೊಕದ್ದಮೆಯಿಂದಾಗಿ ಕಾಮಗಾರಿಗಳನ್ನು ಸ್ಥಗಿತಗೊಳಿಸಿದೆ. ಆದರೆ, ಭೂ ಸ್ವಾಧೀನ, ಪುನರ್ನಿರ್ಮಾಣ ಹಾಗೂ ಪುನರ್ವಸತಿ ಕಾರ್ಯಕ್ಕೂ ನ್ಯಾಯಾಲಯದಲ್ಲಿರುವ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ, ಸರಕಾರ ಜನರ ಗಮನ ಬೇರೆಡೆ ಸೆಳೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.