ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ಸರ್ಕಾರ ವಿಫಲ : ಬಿಜೆಪಿ ವಾಗ್ದಾಳಿ

ಬೆಂಗಳೂರು:

    ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದ್ದು, ನಗರದಲ್ಲಿ ನೀರಿನ ಸಮಸ್ಯೆ ತಲೆದೋರಿದೆ ಎಂದು ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

    ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಂಸದ ತೇಜಸ್ವಿ ಸೂರ್ಯ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ, ಬೇಜವಾಬ್ದಾರಿತನದಿಂದ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದೆ. ರಾಜ್ಯ ಸರ್ಕಾರ ತಕ್ಷಣವೇ ಬೆಂಗಳೂರು ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಯುದ್ಧೋಪಾದಿಯಲ್ಲಿ ಬಗೆಹರಿಸದಿದ್ದರೆ ಬೆಂಗಳೂರು ನಾಗರಿಕರ ಪರವಾಗಿ ಬಿಜೆಪಿ ಪಕ್ಷವು ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಮತ್ತೊಂದು ಪೋಸ್ಟ್ ನಲ್ಲಿ ಬೆಂಗಳೂರು ನಗರದಲ್ಲಿ ಪ್ರಸ್ತುತ ಉದ್ಭವವಾಗಿರುವ ನೀರಿನ ಸಮಸ್ಯೆ ಕುರಿತು ಇಂದು BWSSB ಚೇರ್ಮನ್ ರನ್ನು ಭೇಟಿಯಾಗಿ ಚರ್ಚಿಸಿದೆ. ಬೆಂಗಳೂರು ನಗರಕ್ಕೆ ನೀರಿನ ಸಮಸ್ಯೆ ಉದ್ಭವವಾಗಬಹುದು ಎಂಬ ಮುನ್ಸೂಚನೆಯ ಅರಿವು ಇದ್ದರೂ ಕೂಡ ರಾಜ್ಯ ಸರ್ಕಾರವು ಬೇಜವಾಬ್ದಾರಿತನದಿಂದ ವರ್ತಿಸಿರುವ ಪರಿಣಾಮ ಬೆಂಗಳೂರಿನ ಜನತೆ ಇಂದು ಸಂಕಟಪಡುವ ಸ್ಥಿತಿ ಬಂದಿದೆ.

   ಬೆಂಗಳೂರು ನಗರದ ಬಹುತೇಕ ಭಾಗಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಸರ್ಕಾರ ಅವೈಜ್ಞಾನಿಕ ತೀರ್ಮಾನ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕಿದೆ ಈ ಕುರಿತಾದ ಕೆಲ ಸಲಹೆಗಳನ್ನು ನಾನು BWSSB ಗೆ ನೀಡಿದ್ದೇನೆ.

   ಕೈಗಾರಿಕೆಗಳು, ಕಟ್ಟಡ ನಿರ್ಮಾಣಕ್ಕೆ ಕುಡಿಯಲು ಯೋಗ್ಯವಲ್ಲದ ನೀರನ್ನು ಬಳಸಬೇಕು, ಕುಡಿಯುವ ನೀರನ್ನು ಎಲ್ಲೆಲ್ಲಿ ತೊಂದರೆ ಇದೆಯೋ ಅಲ್ಲಿಗೆ ಸರಬರಾಜು ಮಾಡಬೇಕು. ಸಂಸ್ಕರಣೆಯ ನೀರಿನ ಪ್ರಮಾಣ 1300 MLD ರಷ್ಟು ಇದ್ದು, ಇದನ್ನು ನೀರಿನ ಮರುಪೂರಣ ಜಾಲಕ್ಕೆ ಬಳಸಬಹುದಾಗಿದೆ. ಭೂ ವಿಜ್ಞಾನಿಗಳ ಸಲಹೆ ಮೇರೆಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಬೋರ್ ವೆಲ್ ಕೊರೆಸಿ, ನೀರಿನ ವ್ಯವಸ್ಥೆ ಕಲ್ಪಿಸಬೇಕು. ಕಳೆದ ಕೆಲ ತಿಂಗಳುಗಳಿಂದ ನಿಷ್ಕ್ರಿಯ ಸ್ಥಿತಿಯಲ್ಲಿರುವ ಬೋರ್ ವೆಲ್ ಗಳನ್ನು ಗುರುತಿಸಿ, ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕೊರೆಯಿಸಬೇಕಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಟ್ಯಾಂಕರ್ ವ್ಯವಸ್ಥೆಯನ್ನು ಮುಂದುವರೆಸುವುದು. ಕಾವೇರಿ 5ನೇ ಹಂತದ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಿ, ನಿಗದಿತ ಸ್ಥಳಗಳಲ್ಲಿ ಬೆಂಗಳೂರಿನ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸುವುದು.

   ಇವೆಲ್ಲ ಪರಿಹಾರಗಳನ್ನು ಒಂದು ವಾರದಲ್ಲಿ ಬಗೆಹರಿಸಲು ಮನವಿ ಸಲ್ಲಿಸಲಾಗಿದ್ದು, ಇಲ್ಲದಿದ್ದಲ್ಲಿ ವಿಧಾನಸೌಧದ ಮುಂದೆ ಬೆಂಗಳೂರಿನ ಜನತೆಯ ಪರವಾಗಿ ಧರಣಿ ನಡೆಸುವುದಾಗಿ ತಿಳಿಸಿದ್ದೇನೆಂದು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap