ತುಮಕೂರು :
ವರದಿ : ಹರೀಶ್ ಆಚಾರ್ಯ, ತುಮಕೂರು
ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ, ಶೂ ಕೊಡಲು ಸರ್ಕಾರಕ್ಕೆ ಸಾಧ್ಯವಾಗದಿರುವುದು ಸರ್ಕಾರ ದಿವಾಳಿಯಾಗಿರುವುದಕ್ಕೆ ಸಾಕ್ಷಿಯಾಗಿದೆ. ಶಿಕ್ಷಣ ಸಚಿವರಿಗೆ ಅದೇನೇ ಸಮಸ್ಯೆಯಿರಲಿ ಸರ್ಕಾರಿ ಶಾಲೆ ಮಕ್ಕಳಿಗೆ ಸಮವಸ್ತ, ಶೂ ಮೊದಲು ಪೂರೈಸಬೇಕು ಎಂದು ಮಾಜಿ ಡಿಸಿಎಂ, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಒತ್ತಾಯಿಸಿದರು.
ಕೊರಟಗೆರೆಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ಗುತ್ತಿಗೆದಾರರಿಗೆ ಪಿಡಬ್ಲೂಯಡಿ ಇಲಾಖೆಯಲ್ಲಿ 6000 ಕೋಟಿ, ಜಲಸಂಪನ್ಮೂಲ ಇಲಾಖೆಯಲ್ಲಿ 25 ಸಾವಿರ ಕೋಟಿ ಬಾಕಿ ಉಳಿಸಿಕೊಂಡಿದ್ದು, ಏಕೆ ಪಾವತಿಸುತ್ತಿಲ್ಲ ಎಂಬುದನ್ನು ಸಿಎಂ ಉತ್ತರಿಸಬೇಕು. ಇಲ್ಲವಾದಲ್ಲಿ ಗುತ್ತಿಗೆದಾರರರು ಆರೋಪಿಸುತ್ತಿರುವ 40% ಕಮಿಷನ್ ಆರೋಪ ನಿಜವೆಂದೇ ಭಾವಿಸಬೇಕಾಗುತ್ತದೆ ಎಂದು ದೂರಿದರು.
2004ರಲ್ಲಿ ತುಮಕೂರು ವಿವಿಯನ್ನು ರಾಜ್ಯದಲ್ಲೆ ಮೊದಲ ಜಿಲ್ಲಾಮಟ್ಟದ ವಿವಿಯಾಗಿ ನಾನು ಉನ್ನತ ಶಿಕ್ಷಣ ಸಚಿವನಾಗಿದ್ದಾಗ ಅಸ್ಥಿತ್ವಕ್ಕೆ ತರಲಾಯಿತು. ಹೊಸ ಕ್ಯಾಂಪಸ್‌ನಲ್ಲಿ ಎಸ್‌ಟಿಪಿ ಟಿಎಸ್‌ಪಿ ಅನುದಾನದ ಕಟ್ಟಡ ಬಿಟ್ಟರೆ, ಬಿಜೆಪಿ ಸರ್ಕಾರ ಬಂದ ಮೇಲೆ ಹೆಚ್ಚುವರಿಯಾಗಿ ಅನುದಾನ ನೀಡದೆ ತುಮಕೂರು ವಿವಿಯನ್ನು ಸಾಯಿಸಲಾಗುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಸ್ಥಾಪಿಸಲಾದ ವಿವಿಯೆಂದು ಈ ರೀತಿ ನಿರ್ಲಕ್ಷಯವೇ ಎಂಬ ಸಂದೇಹ ಮೂಡಿದೆಯೆಂದರು.
ಮೀಸಲು ಹೆಚ್ಚಳ ದಿಕ್ಕುತಪ್ಪಿಸುವ ತಂತ್ರ:
ಸರ್ಕಾರ ಎಸ್‌ಸಿ-ಎಸ್‌ಟಿ ಮೀಸಲು ಹೆಚ್ಚಳ ವಿದೇಯಕವನ್ನು ಪಾಸುಮಾಡಿರುವುದು ಕೇವಲ ಈ ಜನಾಂಗಗಳ ಕಣ್ಣೊರೆಸುವ ತಂತ್ರ ಎಂದು ದೂರಿದ ಪರಮೇಶ್ವರ್ ಅವರು, ಶೇ.50 ಮೀಸಲು ಪ್ರಮಾಣ ಹೆಚ್ಚಳ ಸಿಂಧುತ್ವವಾಗುವುದೇ ಎಂದು ಸಂಸದ ಮುನಿಸ್ವಾಮಿ ಅವರು ಎತ್ತಿದ ಪ್ರಶ್ನೆಗೆ ರಾಜ್ಯದವರೇ ಆದ ಸಚಿವ ಎ.ನಾರಾಯಣಸ್ವಾಮಿ ಅವರೇ ಉತ್ತರ ನೀಡಿ, ಸಾಂವಿಧಾನಿಕ ತಿದ್ದುಪಡಿಯಾಗಿ ೯ನೇ ಷೆಡ್ಯೂಲ್‌ಗೆ ಸೇರುವವರೆಗೂ ಮೀಸಲು ಹೆಚ್ಚಳ ಅಸಾಧ್ಯವೆಂದಿರುವುದು ಜನರನ್ನು ದಿಕ್ಕುತಪ್ಪಿಸುತ್ತಿರುವ ಸರ್ಕಾರದ ತಂತ್ರವನ್ನು ಬಹಿರಂಗಗೊಳಿಸಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ