ಸರಕಾರವೇ ರೈತರನ್ನು ಸೋಮಾರಿಗಳನ್ನಾಗಿ ಮಾಡುತ್ತಿದೆ : ಜಿ.ಎಸ್.ಬಸವರಾಜು

ತುಮಕೂರು:

     ದೇಶದ ರೈತರ ಆದಾಯವನ್ನು ದ್ವಿಗುಣ ಮಾಡುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು 2018ರಲ್ಲಿ ಜಾರಿಗೆ ತಂದ ಕೃಷಿಸನ್ಮಾನ ಯೋಜನೆಯೂ ಅತ್ಯಂತ ಮಹತ್ವದ ಪಾತ್ರ ವಹಿಸಿದೆ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದ್ದಾರೆ.

    ತಾಲೂಕಿನ ಹಿರೇಹಳ್ಳಿ ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಇಂದು ಆಯೋಜಿಸಿದ್ದ ಕೃಷಿ ಸನ್ಮಾನ್ ಯೋಜನೆಯ ಕೃಷಿ ಸನ್ಮಾನ ನಿಧಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ,ಯುವಜನರಿಗೆ ತೆಂಗಿನ ಮರ ಹತ್ತುವ ಯಂತ್ರಗಳನ್ನು ವಿತರಿಸಿ ಮಾತನಾಡುತಿದ್ದ ಅವರು,ವರ್ಷಕ್ಕೆ ಆರು ಸಾವಿರ ರೂಗಳನ್ನು ಮೂರು ಕಂತುಗಳಲ್ಲಿ ವಿತರಿಸುವ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದ್ದು,ಇದಕ್ಕೆ ಪೂರಕವಾಗಿ ಅಂದಿನ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರವೂ ವಾರ್ಷಿಕ 4 ಸಾವಿರ ರೂಗಳ ಸಹಾಯಧನ ನೀಡುವ ಮೂಲಕ ವರ್ಷಕ್ಕೆ 10 ಸಾವಿರ ರೂಗಳನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡುವ ಮೂಲಕ ಬೀಜ, ರಸಗೊಬ್ಬರ ಹಾಗೂ ಕೃಷಿ ಕಾರ್ಯಗಳಿಗೆ ನೆರವಾಗುವಂತೆ ಮಾಡಿದ್ದಾರೆ. ಈ ವರ್ಷದ ಮೂರನೇ ಕಂತನ್ನು ಇಂದು ಪ್ರಧಾನಿಯವರೇ ಬಿಡುಗಡೆ ಮಾಡುತ್ತಿರುವುದು ಸಂತೋಷದ ವಿಚಾರ ಎಂದರು.

   ಪ್ರಧಾನಮಂತ್ರಿಗಳ ಕೃಷಿ ಸನ್ಮಾನ ಯೋಜನೆ ಬಡವರು ಮತ್ತು ಮಧ್ಯಮ ವರ್ಗದ ರೈತರಿಗಾಗಿಯೇ ಮಾಡಿದ ಯೋಜನೆ. ಇದನ್ನು ದೊಡ್ಡ ಹಿಡುವಳಿದಾರರು ಪಡೆಯುವುದು ಅಪರಾಧ. ಸಾವಿರಾರು ಕೋಟಿ ಹಣ ಖರ್ಚು ಮಾಡಿ ಡ್ಯಾಂ ಕಟ್ಟಿ, ನೂರಾರು ಕಿ.ಮಿ.ದೂರದಿಂದ ನಾಲೆ ತಂದು ಕೆರೆಗಳಿಗೆ ನೀರು ತುಂಬಿಸಿದರೆ ರೈತರು ಸರಕಾರ ನೀಡುವ ಪುಕ್ಕಟೆ ಅಕ್ಕಿ ಸೇರಿದಂತೆ ಹಲವಾರು ಸವಲತ್ತುಗಳನ್ನು ಪಡೆದು, ಹೊಲ ಗದ್ದೆಗಳಲ್ಲಿ ಕೆಲಸ ಮಾಡುವುದನ್ನೇ ಮರೆತಿದ್ದಾರೆ.ಸರಕಾರವೇ ರೈತರನ್ನು ಸೋಮಾರಿಗಳನ್ನಾಗಿ ಮಾಡುತ್ತಿದೆ.ದುಡಿದು ತಿನ್ನುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದು ಸಂಸದ ಜಿ.ಎಸ.ಬಸವರಾಜು ನುಡಿದರು.

     ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಹೆಚ್.ರವಿ ಮಾತನಾಡಿ,ಪಿ.ಎಂ ಕಿಸಾನ್‌ನಲ್ಲಿ ವಾರ್ಷಿಕ ಕೇಂದ್ರದಿಂದ ಆರು ಸಾವಿರ ಮತ್ತು ರಾಜ್ಯದಿಂದ 4 ಸಾವಿರ ಸೇರಿ ಒಟ್ಟು 10 ಸಾವಿರ ರೈತರಿಗೆ ದೊರೆಯಲಿದೆ. ರೈತರು ಕೃಷಿ ಕಾಲದಲ್ಲಿ ಕೃಷಿಗೆ ಪೂರಕವಾದ ಬೀಜ, ರಸಗೊಬ್ಬರ,ಇನ್ನಿತರ ಪರಿಕರಗಳನ್ನು ಕೊಳ್ಳಲು ಅನುಕೂಲ ಮಾಡುತ್ತಿದೆ.ಎಲ್ಲಾ ವರ್ಗದ ರೈತರು ಆರ್ಹರು,ಇಂತಿಷ್ಟೇ ಪ್ರಮಾಣದ ಭೂಮಿ ಇರಬೇಕು ಎಂಬ ನಿಯಮವಿಲ್ಲ. ಆದಾಯ ತೆರಿಗೆ ಪಾವತಿಸುವ ರೈತರು, ಸರಕಾರಿ ನೌಕರರು, ನಿವೃತ್ತ ಸರಕಾರಿ ನೌಕರರು ಹಾಗೂ ಸಂವಿಧಾನಿಕ ಹುದ್ದೆಗಳಲ್ಲಿ ಇರುವವರು ಈ ಯೋಜನೆಯ ಲಾಭ ಪಡೆಯುವಂತಿಲ್ಲ. ಬೆಳಗಾಂನಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಇಂದು ಒಂದು ಬಟನ್ ಒತ್ತುವ ಮೂಲಕ 14 ಸಾವಿರ ಕೋಟಿ ರೂಗಳನ್ನು ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಿದ್ದಾರೆ ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರೇಹಳ್ಳಿ ಕೃಷಿ ವಿಜ್ಞಾನಕೇಂದ್ರದ ಮುಖ್ಯಸ್ಥ ಡಾ.ಲೋಗಾನಂದನ್ ವಹಿಸಿದ್ದರು.ಹಿರೇಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಶ್ರೀಮತಿ ಭಾಗ್ಯಮ್ಮ,ಉಪಕೃಷಿ ನಿರ್ದೇಶಕ ಟಿ.ಎನ್.ಅಶೋಕ್,ಜಿ.ದೀಪಶ್ರೀ ಕೃಷಿ ಉಪನಿರ್ದೇಶಕರು ಮಧುಗಿರಿ, ಕೃಷಿ ವಿಜ್ಞಾನಿಗಳಾದ ಜಗದಿಶ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap