ತುಮಕೂರು : ಗ್ರಾಪಂ ಚುನಾವಣೆ ; ರಾತ್ರಿವರೆಗೂ ಸಾಗಿದ ಮತ ಎಣಿಕೆ!!

ತುಮಕೂರು :

      ಚುನಾವಣೆ ಬಹಿಷ್ಕರಿಸಿದ 3 ಪಂಚಾಯಿತಿ ಹೊರತುಪಡಿಸಿ ಜಿಲ್ಲೆಯ 326 ಗ್ರಾಮ ಪಂಚಾಯಿತಿ ಕ್ಷೇತ್ರಗಳ 2661 ಮತ ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆ ಮತ ಎಣಿಕೆ ಬುಧವಾರ ಶಾಂತಿಯುತವಾಗಿ ಜರುಗಿತು.

      ಜಿಲ್ಲೆಯ ಹತ್ತು ತಾಲೂಕು ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದ್ದ 167 ಕೊಠಡಿ, 762 ಟೇಬಲ್‍ಗಳಲ್ಲಿ ಬೆಳಿಗ್ಗೆ 8ರಿಂದಲೇ ಎಣಿಕೆ ಪ್ರಾರಂಭಿಸಲಾಯಿತು. ಮತ ಪತ್ರಗಳನ್ನು ಬಾಕ್ಸ್ ನಿಂದ ತೆಗೆದು ವಾರ್ಡ್‍ವಾರು ವಿಂಗಡಿಸಿ ಮೂರು ಸುತ್ತುಗಳಲ್ಲಿ ಎಣಿಕೆ ಮಾಡಲಾಯಿತು. ಮತಪತ್ರಗಳನ್ನು ತೆರೆದು ಮತ್ತೆ ಬಂಡಲ್ ಮಾಡಿ ಎಣಿಕೆಗೆ ಸಾಕಷ್ಟು ಸಮಯ ಆಗಿದ್ದು ಮೊದಲ ಎರಡು ಸುತ್ತಿನ ಎಣಿಕೆ ಮುಗಿಯುವ ವೇಳೆಯೇ ಸಂಜೆ 5 ಸಮೀಪಿಸಿದ್ದು, ಅಷ್ಟೊತ್ತಿಗೆ ಶೇ.40ರಷ್ಟು ಮತಕ್ಷೇತ್ರಗಳ ಎಣಿಕೆ ಮಾತ್ರ ಪೂರ್ಣಗೊಂಡಿದ್ದು ಪೂರ್ಣ ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬವಾಗಿದೆ.

ಗೆದ್ದವರ ಸಂಭ್ರಮ, ಸೋತವರ ಸಪ್ಪೆಮೋರೆ:

      ಎಣಿಕೆ ಕೇಂದ್ರಕ್ಕೆ ಗೆಲುವಿನ ಉತ್ಸಾಹದಲ್ಲೇ ಬಂದ ಅಭ್ಯರ್ಥಿಗಳು, ಅವರ ಏಜೆಂಟರು ಎಣಿಕೆ ಕೇಂದ್ರದೊಳಗಡೆ ಮೀಸಲಿರಿಸಿದ್ದ ಆಸನದಲ್ಲಿ ಕುಳ್ಳಿರಿಸಲಾಯಿತು. ಆಯಾ ಸುತ್ತಿನ ಎಣಿಕೆಯ ಸರದಿಯನುಸಾರ ಎಣಿಕೆ ಕೇಂದ್ರಕ್ಕೆ ಅಭ್ಯರ್ಥಿಗಳು, ಅವರ ಬೆಂಬಲಿಗರನ್ನು ಬಿಡಲಾಯಿತು. ತಮ್ಮದು ಯಾವ ಸುತ್ತಿನಲ್ಲಿ ಎಣಿಕೆಯಾಗುತ್ತದೋ? ಫಲಿತಾಂಶ ಏನಾಗುವುದೋ ಎಂಬ ಚಿಂತೆಯಲ್ಲೇ ಎಣಿಕೆ ಕೇಂದ್ರದಲ್ಲಿ ಮಗ್ನರಾಗಿದ್ದ ಅಭ್ಯರ್ಥಿಗಳು ತಮ್ಮ ಗೆಲುವು ಖಚಿತವಾಗುತ್ತಲೇ ಮುಖದಲ್ಲಿ ಮಂದಹಾಸ ಮೂಡಿಸಿಕೊಂಡು ಸಂಭ್ರಮ ಪಟ್ಟರು. ಸೋತವರು ಮುಖ ಸಪ್ಪೆ ಮಾಡಿಕೊಂಡು ಬೇಸರದಿಂದ ಎಣಿಕೆ ಕೇಂದ್ರದಿಂದ ಬೆಂಬಲಿಗರೊಡನೆ ಸೋಲಿನ ಪರಾಮರ್ಶೆ ನಡೆಸುತ್ತಾ ಹೊರ ನಡೆಯುತ್ತಿದ್ದ ದೃಶ್ಯ ಜಿಲ್ಲಾ ಕೇಂದ್ರ ಮತ ಎಣಿಕೆ ಸ್ಥಳವಾದ ಪಾಲಿಟೆಕ್ನಿಕ್ ಕಾಲೇಜು ಬಳಿ ಕಂಡುಬಂತು. ಮಹಿಳಾ ಅಭ್ಯರ್ಥಿಗಳ ಪರವಾಗಿ ಅವರ ಪತಿಯಂದಿರು, ಗಂಡುಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದರು. ಯುವಕರು ಅಧಿಕ ಸಂಖ್ಯೆಯಲ್ಲಿ ಈ ಬಾರಿ ಸ್ಪರ್ಧಿಸದ್ದರಿಂದ ಎಣಿಕೆ ಕೇಂದ್ರದ ಬಳಿ ಯುವಕರ ಗುಂಪು ಅಧಿಕ ಸಂಖ್ಯೆಯಲ್ಲಿ ಜಮಾಯಿಸಿತ್ತು. ಜಯಕಾರಗಳನ್ನು ಕೂಗಿದರು.

      ಹೊರಗಡೇ ಜನವೋ ಜನ, ನಿಷೇಧಾಜ್ಞೆ ಲೆಕ್ಕಕ್ಕಿಲ್ಲ: ಅಭ್ಯರ್ಥಿಗಳು, ಅವರ ಪರವಾದ ಏಜೆಂಟರು ಎಣಿಕೆ ಕೇಂದ್ರದ ಒಳಗೆ ಸೇರಿದ್ದರೆ, ಇತ್ತ ಹೊರಗಡೆ ಅವರ ಬೆಂಬಲಿಗರು ಫಲಿತಾಂಶಕ್ಕೆ ಕಾತರರಾಗಿ ಜಮಾಯಿಸಿದ್ದರು. ಯಾವುದೇ ಸಾಮಾಜಿಕ ಅಂತರವಿಲ್ಲದೇ, ಮಾಸ್ಕ್‍ಗಳನ್ನು ಧರಿಸದೆ ನಿಷೇಧಾಜ್ಞೆಯನ್ನು ಕಡೆಗಣಿಸಿ ಗುಂಪಾಗಿ ನಿಂತಿದ್ದರು. ಮೂಕ ಪ್ರೇಕ್ಷಕರಾಗಿ ನಿಲ್ಲುವ ಸರದಿ ಪೊಲೀಸರದ್ದಾಗಿತ್ತು. ವಿಜಯೋತ್ಸವ ಮೆರವಣಿಗೆಗೆ ಜಿಲ್ಲಾಡಳಿತ ನಿಷೇಧ ಏರಿದ್ದರೂ, ಜಯಶಾಲಿಯಾಗಿ ಬಂದ ಅಭ್ಯರ್ಥಿಯನ್ನು ಎತ್ತಿ ಕುಣಿದು ಹಾರ ಹಾಕಿ ಸಂಭ್ರಮಿಸಿದರು. ಪಟಾಕಿ ಹೊಡೆಯಲು ನಿಷೇಧವಿದ್ದರೂ ತುಮಕೂರು ಎಣಿಕೆ ಕೇಂದ್ರದ ಮುಂಭಾಗವೇ ಪಟಾಕಿ ದೊರೆಯುತ್ತದೆ ಎಂಬ ನಾಮಫಲಕವನ್ನು ಪ್ರದರ್ಶಿಸಿದ್ದು ಕಂಡುಬಂತು. ಎಣಿಕೆ ಕೇಂದ್ರದ ಒಳಗಡೆ, ಹೊರಗಡೆ ಸಾಕಷ್ಟು ಜನರಿಗೆ ಅವಕಾಶ ಮಾಡಿಕೊಟ್ಟಿದ್ದರು, ಮಾಧ್ಯಮದವರಿಗೆ ಮಾತ್ರ ಕೆಲವು ತಾಲೂಕುಗಳಲ್ಲಿ ಅವಕಾಶ ನಿರಾಕರಿಸಿ ಹೊರಗಡೆ ಕೂಡಿಸಿದ್ದಕ್ಕೆ ಅಸಮಾಧಾನ ವ್ಯಕ್ತವಾಯಿತು.

ಹೊರಗಡೆ, ಒಳಗಡೆ ಭರ್ಜರಿ ವ್ಯಾಪಾರ:

      ಇನ್ನೂ ಎಣಿಕೆ ಕೇಂದ್ರದ ಹೊರಗಡೆ ಫಲಿತಾಂಶ ತಿಳಿಯಲು ಬಂದಿದ್ದ ಬೆಂಬಲಿಗರು, ರಾಜಕೀಯ ಪಕ್ಷಗಳ ಕಾರ್ಯಕರ್ತರಿಂದ ಸಮೀಪದ ಚಹಾ ಅಂಗಡಿ, ಹೋಟೆಲ್‍ಗಳು ತುಂಬಿದ್ದವು. ಭರ್ಜರಿ ವ್ಯಾಪಾರವೂ ನಡೆಯಿತು. ಎಣಿಕೆ ಕೇಂದ್ರದ ಒಳಗಡೆಯೂ ಉಪಹಾರ, ಊಟದ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಿ.ಎಚ್. ರಸ್ತೆಯ ಇಕ್ಕೆಲ, ಒಳಗಿನ ಅಡ್ಡರಸ್ತೆಗಳಲ್ಲಿ ಸಾಲು ಸಾಲು ವಾಹನಗಳನ್ನು ನಿಲ್ಲಿಸಲಾಗಿತ್ತು. ಬ್ಯಾರಿಕೇಡ್‍ಗಳನ್ನು ಅಳವಡಿಸಿದ್ದರೂ, ಜನರು ನುಗ್ಗಿ ಬರುತ್ತಿದ್ದರು. ತಿಪಟೂರು, ಕುಣಿಗಲ್ ಮತ ಎಣಿಕೆ ಕೇಂದ್ರದ ಬಳಿ ಸಂಚಾರ ಬಂದ್ ಮಾಡಿದ್ದರಿಂದ ವಾಹನ ಸವಾರರು ತೆರಳಲು ಪರದಾಡುವಂತಾಯಿತು.

ಅಧಿಕಾರಿಗಳ ಪರಿಶೀಲನೆ, ಕೆಲ ಕಾಲ ಎಣಿಕೆ ಸ್ಥಗಿತ:

      ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್, ಎಸ್ಪಿ ಡಾ.ಕೆ.ವಂಶಿಕೃಷ್ಣ, ಎಡಿಸಿ ಚನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ತಹಸೀಲ್ದಾರ್ ರಾಘವೇಂದ್ರ, ತಾಪಂ ಇಒ ಜಯಪಾಲ್ ಸೇರಿ ಹಿರಿಯ ಅಧಿಕಾರಿಗಳು ಎಣಿಕೆ ಪ್ರಕ್ರಿಯೆಯನ್ನು ಪರಿಶೀಲಿಸಿದರು. ಗುಬ್ಬಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮತ ಎಣಿಕೆ ವೇಳೆ ವಿದ್ಯುತ್ ಕೈಕೊಟ್ಟು, 3ನೇ ಅಂತಸ್ತಿನ ಕೊಠಡಿಯಲ್ಲಿ ಕೆಲಕಾಲ ಎಣಿಕೆ ಸ್ಥಗಿತಗೊಂಡಿದೆ.

 
ಮಂತ್ರಿಸಿದ ನಿಂಬೆಹಣ್ಣಿನೊಂದಿಗೆ ಎಣಿಕೆ ಕೇಂದ್ರ ಪ್ರವೇಶ ಯತ್ನ!

      ಗೆಲುವಿಗಾಗಿ ದೇವರ ಮೊರೆಹೋಗಿದ್ದ ಅಭ್ಯರ್ಥಿಗಳು, ಏಜೆಂಟರು ಎಣಿಕೆ ಕೇಂದ್ರದೊಳಕ್ಕೆ ಮಂತ್ರಿಸಿದ್ದ ನಿಂಬೆಹಣ್ಣು, ಅರಿಶಿನಕುಂಕುಮ, ಎಲೆಅಡಿಕೆಯೊಂದಿಗೆ ಪ್ರವೇಶಿಸಲೆತ್ನಿಸಿದ್ದು, ಪೊಲೀಸರು ಪ್ರವೇಶದ್ವಾರದಲ್ಲೇ ತಡೆದು, ಅವುಗಳನ್ನು ಅಲ್ಲಿಯೇ ಬಿಸಾಡಿಸಿ ನಂತರ ಒಳ ಬಿಟ್ಟಿದ್ದು ಕಂಡುಬಂತು. ಸುಮಾರು 2 ಕೆಜಿಯಷ್ಟು ನಿಂಬೆಹಣ್ಣುಗಳೇ ಸಿಕ್ಕಿವೆ ಎಂದು ಪ್ರವೇಶದ್ವಾರದಲ್ಲಿದ್ದ ಪೊಲೀಸರು ಮಾಹಿತಿ ನೀಡಿದರು

1-2 ಮತ ಅಂತರದಲ್ಲಿ ಗೆಲುವಿನ ಅದೃಷ್ಟ :

      ಗ್ರಾಮ ಪಂಚಾಯಿತಿಯಲ್ಲಿ ಗೆಲುವಿನ ಅಂತರ ಇತರೆ ಚುನಾವಣೆಗಳಿಲ್ಲಿರುವಂತೆ ಜಾಸ್ತಿಯಿರುವುದಿಲ್ಲ. ಒಂದೇ ವಾರ್ಡ್‍ನಲ್ಲಿ ಮೂವರು ಮತಸ್ಥಾನಗಳಿಗೆ ಮತ ಹಂಚಿಕೆಯಾಗಿರುವುದರಿಂದ ಗೆಲುವಿನ ಅಂತವರು ಹೆಚ್ಚೆಂದರೆ ಸಮೀಪ ಪ್ರತಿಸ್ಪರ್ಧಿಗಿಂತ ಹತ್ತರಿಂದ ನೂರು-ನೂರೈವತ್ತರೊಳಗೆ ಕಂಡುಬರುತ್ತದೆ. ಇಂತಹ ಸಂದರ್ಭದಲ್ಲಿ ಹಲವರು ಒಂದೆರೆಡು ಮತಗಳ ಅಂತರದಲ್ಲಿ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ಪೈಕಿ ತುಮಕೂರು ತಾಲೂಕಿನ ಮೈದಾಳ ಪಂಚಾಯಿತಿಗೆ ಸ್ಪರ್ಧಿಸಿದ್ದ ಮಹದೇವಿ ಅವರು 139 ಮತಗಳನ್ನು ಸಮೀಪ ಪ್ರತಿಸ್ಪರ್ಧಿ ನಳಿನಾ ಅವರನ್ನು 2 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.

      ಅರಿಯೂರು ಪಂಚಾಯಿತಿ ವ್ಯಾಪ್ತಿಯಲ್ಲೂ ಸಮೀಪ ಪ್ರತಿಸ್ಪರ್ಧಿ ಕಿರಣ್‍ಕುಮಾರ್ ಅವರಿಗಿಂತ 2 ಮತ ಹೆಚ್ಚುವರಿ ಪಡೆದ ಕೆ.ಸಿ.ರುದ್ರೇಶ್ 171 ಮತಗಳಿಸಿ ವಿಜಯಶಾಲಿಯಾಗಿದ್ದಾರೆ. ಅರೇಗುಜ್ಜನಹಳ್ಳಿ ಪಂಚಾಯಿತಿಯ ಜನಪನಹಳ್ಳಿ ಕ್ಷೇತ್ರದ ಗ್ರಾಪಂ ಮಾಜಿ ಅಧ್ಯಕ್ಷ ಪ್ರಕಾಶ್ ನಾಯ್ಕ ಕೇವಲ ಒಂದು ಮತಗಳ ಅಂತರದಿಂದ ಮರುಳಿನಾಯ್ಕ ಅವರನ್ನು ಮಣಿಸಿದ್ದು ಗೆಲವು ತಮ್ಮದಾಗಿಸಿಕೊಂಡಿದ್ದಾರೆ. ಅನುಪನಹಳ್ಳಿ ಮತ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪುರುಷೋತ್ತಮ್ ಹಾಗೂ ಯೋಗಿಶ್ ಅವರಿಗೆ ತಲಾ 64 ಸಮಮತಗಳು ಬಿದ್ದಿದ್ದು, ಯೋಗಿಶ್ ಅವರಿಗೆ ಬಿದ್ದಿದ್ದ 2 ಮತಗಳು ತಿರಸ್ಕøತವಾದ ಹಿನ್ನೆಲೆಯಲ್ಲಿ ಪುರುಷೋತ್ತಮ್ ಅವರಿಗೆ ಗೆಲುವು ಸಾಧಿಸುವಂತಾಯಿತು. ಸಮಮತಗಳಿಸಿದ್ದ
ಗಮನಸೆಳೆದವರು: ತುಮಕೂರು ತಾಲೂಕು ಹಿರೇಹಳ್ಳಿ ಸಾಮಾನ್ಯ ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತ ತನ್ವೀರ್ ರೆಹಮಾನ್ ಖಾನ್ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರೆ, ಚಿ.ನಾ.ಹಳ್ಳಿ ತಾಲೂಕು ಬೆಳಗುಲಿ ತಾರೀಕಟ್ಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಂಫಿಎಲ್ ಎಂಎ, ಎಂಇಡಿ ಪದವೀಧರ ಶಾಂತರಾಜು, ಗುಬ್ಬಿಯಲ್ಲಿ ಪತ್ರಕರ್ತ ನರಸಿಂಹಮೂರ್ತಿ ಗೆಲುವು ಸಾಧಿಸಿರುವುದು ಗಮನ ಸೆಳೆದಿದೆ . ಸೋತವರಲ್ಲಿ ವಿಶೇಷ ಪ್ರಣಾಳಿಕೆ ಗಮನ ಸೆಳೆದಿದ್ದ ಕಲ್ಕೆರೆ ಅಭ್ಯರ್ಥಿ ಗಂಗಮ್ಮ ಹಾಗೂ ಸತತ ಆರು ಬಾರಿ ಗೆಲುವು ಸಾಧಿಸಿದ್ದ ಹೆಬ್ಬೂರು ರಂಗಯ್ಯ ಪ್ರಮುಖರೆನಿಸಿದ್ದಾರೆ. ಇನ್ನೂ ಸಮಮತಗಳಿಸಿದ್ದ ಕಾರಣಕ್ಕೆ ಲಕ್ಕಿಡ್ರಾ ಎತ್ತಿದಾಗ ತಿಪಟೂರಿನ ಕರಡಿ ಗ್ರಾಪಂನ ರಾಮೇನಹಳ್ಳಿ ಕ್ಷೇತ್ರದ ಓಂಕಾರಮೂರ್ತಿ ಹಾಗೂ ಮತ್ತಿಘಟ್ಟ -1 ಕ್ಷೇತ್ರದ ಸಾಮಾನ್ಯ ಅಭ್ಯರ್ಥಿ ದಕ್ಷಿಣಮೂರ್ತಿಗೆ ಗೆಲುವಿನ ಅದೃಷ್ಟ ಒಲಿದುಬಂತು. ಚಿಕ್ಕನಾಯಕನಹಳ್ಳಿ ಸೊಸೆ ಅತ್ತೆಯನ್ನು ಮಣಿಸಿದ್ದು ಗಮನಸೆಳೆದಿದೆ.

ಮತಪತ್ರದಲ್ಲಿ ಅಧಿಕೃತ ಮುದ್ರೆ ಬದಲು ಹೆಬ್ಬೆಟ್ಟು, ತಿರಸ್ಕೃತವಾದ ಮತಗಳು ಹೆಚ್ಚು!

     ಪ್ರತೀ ಪಂಚಾಯಿತಿ, ವಾರ್ಡ್‍ಗಳಲ್ಲಿ 10 ರಿಂದ 50ರವರೆಗೆ ಮತಪತ್ರಗಳು ತಿರಸ್ಕೃತವಾಗಿರುವುದು ಕಂಡುಬಂದಿದ್ದು, ಮತ ಪತ್ರಕ್ಕೆ ಹೆಸರು, ಚಿಹ್ನೆಯ ಮುಂದೆ ಮತಮುದ್ರೆ ಒತ್ತುವುದನ್ನು ಬಿಟ್ಟು, ಹೆಬ್ಬೆಟ್ಟು ಒತ್ತಿರುವುದು, ಕೆಲವು ಮತಪತ್ರಗಳನ್ನು ಹಾಗೆಯೇ ಖಾಲಿ ಬಾಕ್ಸ್‍ಗೆ ಹಾಕಿರುವುದು, ಮತಪತ್ರದ ಹಿಂಬದಿ ಮತಮುದ್ರೆ ಒತ್ತಿರುವುದು ಕಂಡುಬಂದಿದೆ.

      ಇನ್ನೂ ಕೆಲವರು ನಿಗದಿತ ಜಾಗದಲ್ಲಿ ಮುದ್ರೆ ಒತ್ತದೆ ಗೆರೆಯ ಮೇಲೆ, ಮತ ಪತ್ರದ ಮೇಲ್ಭಾಗ, ಕೆಳಭಾಗ ಸಹ ಒತ್ತಿದ್ದು, ಕೆಲವರು ಮೂವರಿಗೆ ಮತಹಾಕಬೇಕಿದ್ದರೆ ನಾಲ್ಕೈದು ಮಂದಿಗೆ ಮತಹಾಕಿದ್ದು ಅವು ತಿರಸ್ಕೃತಗೊಂಡಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link