ಬೆಂಗಳೂರು:
ಬಹುನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗದ ರೈಲು ಮತ್ತು ಸಿಗ್ನಿಲಿಂಗ್ ವ್ಯವಸ್ಥೆಗಳಿಗೆ ಅಗತ್ಯವಾದ ಸ್ವತಂತ್ರ ಸುರಕ್ಷತಾ ಮೌಲ್ಯಮಾಪನ ದ ಪ್ರಮಾಣೀಕರ ದೊರೆತಿದ್ದು, ಶೀಘ್ರದಲ್ಲೇ ಹಳದಿ ಮಾರ್ಗ ಆರಂಭವಾಗುವ ನಿರೀಕ್ಷೆಗಳಿವೆ.ಇಟಲಿಯ ಸರ್ಕಾರಿ ಸ್ವಾಮ್ಯದ ಇಟಾಲ್ಸರ್ಟಿಫರ್ ಕಂಪನಿಯು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತಕ್ಕೆ ಈ ಪ್ರಮಾಣಪತ್ರವನ್ನು ಸಲ್ಲಿಸಿದೆ.
ಹಳದಿ ಮಾರ್ಗದ ಸಿಗ್ನಲಿಂಗ್ ಗುತ್ತಿಗೆದಾರರಾದ ಸೀಮೆನ್ಸ್ ಇಂಡಿಯಾ ಲಿಮಿಟೆಡ್–ಸೀಮೆನ್ಸ್ ಎಜಿ ಸಹಯೋಗದೊಂದಿಗೆ ಇಟಲಿಯ ಸರ್ಕಾರಿ ಸ್ವಾಮ್ಯದ ಸಂಸ್ಥೆಯು ಗುರುವಾರ ಈ ಪ್ರಮಾಣೀಕರಣವನ್ನು ನೀಡಿದೆ.ಪರಿಶೀಲನೆಯ ಸಮಯದಲ್ಲಿ ತಾಂತ್ರಿಕ ದೋಷಗಳು ಪತ್ತೆಯಾಗಿದ್ದವು. ಇದರಿಂದಾಗಿ ISA ವರದಿ ವಿಳಂಬವಾಗಿತ್ತು, ತಾಂತ್ರಿಕ ದೋಷ ಸರಿಪಡಿಸಲು ಸಾಫ್ಟ್‌ವೇರ್ ನವೀಕರಣಗಳು ಅಗತ್ಯವಾಗಿದ್ದವು. ಐಎಸ್ಎ ವರದಿಯಿಲ್ಲದೆ ಮೆಟ್ರೋ ಮಾರ್ಗ ಆರಂಭ ಸಾಧ್ಯವಾಗಿರಲಿಲ್ಲ.
ಇದೀಗ ಐಎಸ್ಎ ಪ್ರಮಾಣೀಕರ ದೊರೆತಿದ್ದು, ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ, ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರಿಗೆ ಸಲ್ಲಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚವಾಣ್ ಅವರು ತಿಳಿಸಿದ್ದಾರೆ.ಆಗಸ್ಟ್ 15 ರೊಳಗೆ ಹಳದಿ ಮಾರ್ಗವನ್ನು ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ಬಿಎಂಆರ್‌ಸಿಎಲ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಅವರು ಈ ಹಿಂದೆ ಹೇಳಿದ್ದರು.
ಬೆಂಗಳೂರು ಜನರ ಬಹು ನಿರೀಕ್ಷಿತ ನಮ್ಮ ಮೆಟ್ರೋ ಮಾರ್ಗಗಳಲ್ಲಿ ಹಳದಿ ಮಾರ್ಗ (ಯೆಲ್ಲೋ ಲೈನ್) ಒಂದಾಗಿದೆ. ಆರ್‌ವಿ ರಸ್ತೆ – ಬೊಮ್ಮಸಂದ್ರ ನಡುವಿನ 18.8 ಕಿ.ಮೀ ಉದ್ದದ ಈ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳು ಬರಲಿವೆ. ಮಾರ್ಗವು ದಕ್ಷಿಣ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ವ್ಯಾಪಿಸಿದೆ. ಜತೆಗೆ ಗ್ರೀನ್‌ಲೈನ್ ಜತೆ ಸಂಪರ್ಕ ಹೊಂದಿರುವುದರಿಂದ ಈ ಮಾರ್ಗವು ದಕ್ಷಿಣ ಬೆಂಗಳೂರು ಜನರನ್ನು ನಗರ ಕೇಂದ್ರ ಭಾಗಕ್ಕೆ ಸಂಪರ್ಕ ಕಲ್ಪಿಸಲು ಸಹಕಾರಿಯಾಗಲಿದೆ.
ಬಿಎಂಆರ್‌ಸಿಎಲ್ ಕೊಲ್ಕತ್ತಾದ ಟಿಟಾಗರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ ಜತೆ 36 ರೈಲುಗಳಿಗೆ ಒಪ್ಪಂದ ಮಾಡಿಕೊಂಡಿದೆ. ಈ ಪೈಕಿ 15 ರೈಲುಗಳು ಹಳದಿ ಮಾರ್ಗದಲ್ಲಿ ಓಡಾಡಲಿವೆ. ಉಳಿದ 21 ರೈಲುಗಳನ್ನು ನೇರಳೆ ಮತ್ತು ಹಸಿರು ಮಾರ್ಗಕ್ಕೆಂದು ಮೀಸಲಿಡುವ ಯೋಜನೆ ಇದೆ.
